ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರಯ್ಯ ಕೋವಿಡ್‍ಗೆ ಬಲಿ

Update: 2021-05-19 11:16 GMT

ಬೆಂಗಳೂರು, ಮೇ 19: ಪಿಯುಸಿ, ಕೆಪಿಎಸ್ಸಿ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರಯ್ಯ(65) ಯಾನೆ ಗುರೂಜಿ ಕೋವಿಡ್ ಸೋಂಕಿಗೆ ಬಲಿಯಾಗಿರುವುದಾಗಿ ವರದಿಯಾಗಿದೆ.

ಜೈಲಿನಿಂದ ಜಾಮೀನು ಪಡೆದು ಸ್ವಗ್ರಾಮವಾದ ಗುಬ್ಬಿ ತಾಲೂಕಿನ ಬಿದರೆ ಕಾಗ್ಗೆರೆಯಲ್ಲಿ ನೆಲೆಸಿದ್ದ ಶಿವಕುಮಾರಯ್ಯಗೆ ಇತ್ತೀಚಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಆದರೆ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಉಸಿರಾಟ ಸಮಸ್ಯೆ ಕಂಡುಬಂದಿದೆ. ಕೂಡಲೇ ಅವರನ್ನು ಕೊರಟಗೆರೆಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಸಿರಾಟ ತೊಂದರೆಯಿಂದ ಮಂಗಳವಾರ ರಾತ್ರಿ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.

ಹಲವು ಆರೋಪ: ನಿವೃತ್ತ ಉಪನ್ಯಾಸಕನಾಗಿದ್ದ ಗುರೂಜಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ರೂವಾರಿ ಆಗಿದ್ದ. ಈತನನ್ನು ದ್ವೀತಿಯ ಪಿಯುಸಿ ರಸಾಯನಿಕಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೊದಲ ಬಾರಿಗೆ 2016ರಲ್ಲಿ ಪೊಲೀಸರು ಬಂಧಿಸಿದ್ದರು.

ಪಿಯುಸಿ ಪ್ರಶ್ನೆಪತ್ರಿಕೆ ಮಾತ್ರವಲ್ಲದೆ ಕೆಪಿಎಸ್ಸಿ ಆಯೋಜಿಸುವ ಕಾನ್‍ಸ್ಟೇಬಲ್, ಸಬ್ ಇನ್‍ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದ ಎನ್ನುವ ಆರೋಪವೂ ಈತನ ಮೇಲಿತ್ತು.

ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಈತ 2018ರಲ್ಲಿ ಜಾಮೀನು ಪಡೆದು ಹೊರಬಂದಿದ್ದನು. ಮತ್ತೆ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇದೇ ಆರೋಪದಡಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್‍ಕುಮಾರ್ ನೇತೃತ್ವದಲ್ಲಿ ಡಿಸಿಪಿ ಗಿರೀಶ್ ಅವರು ಬಂಧಿಸಿ ಜೈಲಿಗಟ್ಟಿದ್ದರು.

ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಸಾವನ್ನಪ್ಪಿರುವುದರಿಂದ ಆತನ ಮೇಲಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News