ಕೆಎಸ್‌ಆರ್‌ಟಿಸಿ ಸಾರಿಗೆ ಸುರಕ್ಷಾ ‘ಸಂಚಾರಿ-ಐಸಿಯು’ ಮತ್ತು ಆಕ್ಸಿಜನ್ ಬಸ್ ಗಳಿಗೆ ಡಿಸಿಎಂ ಚಾಲನೆ

Update: 2021-05-19 13:42 GMT

ಬೆಂಗಳೂರು, ಮೇ 19: ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದ ಬಸ್ಸುಗಳಲ್ಲಿ ಸಿದ್ಧಪಡಿಸಲಾಗಿರುವ ‘ಸಂಚಾರಿ ಐಸಿಯು’ ಮತ್ತು ಆಕ್ಸಿಜನ್‍ಯುಕ್ತ ಬಸ್ಸುಗಳಿಗೆ ಇಲ್ಲಿನ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬುಧವಾರ ಚಾಲನೆ ನೀಡಿದರು.

ಅಂದಾಜು 10 ಲಕ್ಷ ರೂ.ವೆಚ್ಚದಲ್ಲಿ ನಿಗಮದಲ್ಲಿಯೇ ಆಂತರಿಕವಾಗಿ ಈ ಬಸ್ಸುಗಳಲ್ಲಿನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಿಗಮವೇ ಸಂಪೂರ್ಣ ವೆಚ್ಚವನ್ನು ಭರಿಸಿದೆ. ಈಗಾಗಲೇ ನಮ್ಮ 4 ಸಾರಿಗೆ ನಿಗಮಗಳ ವತಿಯಿಂದ ಸುಮಾರು 12 ಕ್ಕೂ ಹೆಚ್ಚು ಆಕ್ಸಿಜನ್ ಪೂರೈಕೆ ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಕೆಎಸ್‌ಆರ್‌ಟಿಸಿ ಆಕ್ಸಿಜನ್ ಬಸ್ಸುಗಳು ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯಿಂದ ಆಕ್ಸಿಜನ್ ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಎರಡು ಬಸ್ಸುಗಳಿಗೆ ಆ್ಯಂಬುಲೆನ್ಸ್ ಮಾದರಿಯಲ್ಲಿ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗತ್ವ ಒದಗಿ ಬಂದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಆಕ್ಸಿಜನ್ ಬಸ್ಸುಗಳನ್ನು ಒದಗಿಸಲು ನಮ್ಮ ಸಾರಿಗೆ ನಿಗಮಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಸ್ಥಳೀಯವಾಗಿ ಆಕ್ಸಿಜನ್ ಮತ್ತು ವೈದ್ಯಕೀಯ ಉಪಕರಣಗಳನ್ನು ನಿರ್ವಹಿಸಲು ಖಾಸಗಿ ಸಹಭಾಗಿತ್ವ ಅಥವಾ ಯಾವುದಾದರೂ ಆಸ್ಪತ್ರೆಗಳ ಸಹಭಾಗಿತ್ವ ಅಗತ್ಯವಾಗಿದೆ. ಸಾರಿಗೆ ನಿಗಮಗಳ ಈ ಎಲ್ಲ ಸೇವೆಗಳೂ ಸಂಪೂರ್ಣ ಉಚಿತವಾಗಿವೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಈಗಾಗಲೇ ಹೈದರಾಬಾದಿನ ಒಂದು ಸ್ವಯಂಸೇವಾ ಸಂಸ್ಥೆಯು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬಸ್ಸುಗಳಿಗೆ ಪ್ರಯೋಜಕತ್ವ ನೀಡಲು ಮುಂದೆ ಬಂದಿದೆ. ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದ್ದು, ಇದು ಕೈಗೂಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬಸ್ಸುಗಳನ್ನು ಕರ್ನಾಟಕದಲ್ಲಿ ಒದಗಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕೋವಿಡ್ ರೋಗಿಗಳು ಆಸ್ಪತ್ರೆಗಳಿಗೆ ಬಂದಾಗ ತಕ್ಷಣಕ್ಕೆ ಅವರಿಗೆ ವಿಶ್ರಮಿಸಿ ಆಕ್ಸಿಜನ್ ನೀಡಲು ಈ ಬಸ್ಸುಗಳು ಸಂಜೀವಿನಿಯಂತೆ ಉಪಕಾರಿಯಾಗಲಿವೆ. ಏಕೆಂದರೆ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಕುಳಿತುಕೊಳ್ಳುವುದಕ್ಕೂ ಸ್ಥಳ ವಿರುವುದಿಲ್ಲ ಮತ್ತು ಆಕ್ಸಿಜನ್ ಸಿಲಿಂಡರ್ ಗಳು ಲಭ್ಯವಿರುವುದಿಲ್ಲ. ಅಂತಹ ಸಮಯದಲ್ಲಿ ಈ ಆಕ್ಸಿಜನ್ ಬಸ್ಸುಗಳು ಸಂಜೀವಿನಿಯಂತೆ ಜನರ ಪ್ರಾಣ ಉಳಿಸಲು ನೆರವಿಗೆ ಬರುತ್ತವೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಕೋವಿಡ್ ನಿಯಂತ್ರಣದ ಉದ್ದೇಶದಿಂದ ಸಾರಿಗೆ ನಿಗಮಗಳಿಗೆ ಬಸ್ಸುಗಳನ್ನು ಒದಗಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಈ ಬಸ್ಸುಗಳಲ್ಲಿ ಆಕ್ಸಿಜನ್ ಅಥವಾ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ನಿರ್ವಹಿಸಲು ಅನುಭವಿ ಅರೆ ವೈದ್ಯಕೀಯ ಸಿಬ್ಬಂದಿಗಳು ಅಗತ್ಯವಾಗಿದ್ದಾರೆ. ಈ ಬಗ್ಗೆ ಯಾರೇ ಮುಂದೆ ಬಂದರೂ ಸಾರಿಗೆ ನಿಗಮಗಳು ಕೈಜೋಡಿಸಲು ಸಿದ್ಧವಿದೆ ಎಂದು ಅವರು ಪ್ರಕಟಿಸಿದರು.

ಯಾವುದೇ ಜಿಲ್ಲೆಗಳಲ್ಲಿ ಆಕ್ಸಿಜನ್ ಬಸ್ಸುಗಳು ಅಗತ್ಯವಿದ್ದರೆ ಆಯಾ ಜಿಲ್ಲೆಗಳ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಬಹುದಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಎಸ್ಸಾರ್ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸೇರಿದಂತೆ ನಿಗಮದ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷ ಬಸ್ಸುಗಳಲ್ಲಿ ಇರುವ ಸೌಲಭ್ಯಗಳು: ಐದು ಹಾಸಿಗೆಯುಳ್ಳ ಆಂಬ್ಯುಲೆನ್ಸ್, ಪ್ರತಿಯೊಂದು ಬೆಡ್ ಗೂ ಆಕ್ಸಿಜನ್ ವ್ಯವಸ್ಥೆ, ರೋಗಿಗಳ ಮಾನಿಟರ್(ಬಿ.ಪಿ, ಆಕ್ಸಿಜನ್ ಪ್ರಮಾಣ, ಇ.ಸಿ.ಜಿ, ತಾಪಮಾನ) ಐ.ವಿ. ವ್ಯವಸ್ಥೆ, ವೆಂಟಿಲೇಟರ್ ಅಳವಡಿಸಲು ಸೌಲಭ್ಯ, ತುರ್ತು ಔಷಧಿ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಈ ಬಸ್ಸುಗಳಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News