ಕೇಂದ್ರ, ರಾಜ್ಯ ಸರಕಾರ ಸುಳ್ಳಿನ ಮೂಲಕವೇ ಜನರ ಜೀವ ತೆಗೆಯುತ್ತಿವೆ: ಸಂಸದ ಡಿ.ಕೆ.ಸುರೇಶ್

Update: 2021-05-19 16:43 GMT

ಬೆಂಗಳೂರು, ಮೇ 19: ಕೇಂದ್ರ ಹಾಗೂ ರಾಜ್ಯ ಸರಕಾರ ಹುಟ್ಟಿದ್ದೇ ಸುಳ್ಳಿನಿಂದ. ಸುಳ್ಳಿನಿಂದ ಹುಟ್ಟಿ ಸುಳ್ಳನ್ನೇ ಮನೆ ದೇವರು ಮಾಡಿಕೊಂಡು ಸುಳ್ಳಿನ ಮೂಲಕವೇ ದೇಶ ಹಾಗೂ ಜನರ ಜೀವ ತೆಗೆಯುವ ಕೆಲಸ ಮಾಡುತ್ತಿವೆ. ಪ್ರಧಾನಿಗಳು ದೇಶದ ಸಂಸ್ಕೃತಿ, ಹಿಂದುತ್ವ, ಭಾರತೀಯರು, ಧರ್ಮ, ಯುವಕರ ಬಗ್ಗೆ ಆಡಿದ್ದ ಒಂದೊಂದು ಮಾತುಗಳಿಂದ ಇವರನ್ನು ದೇವ ಮಾನವರಂತೆ ಜನ ಕಂಡರು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆ ಬಂದಾಗ ಇವರ ಮಾತು ಕೇಳಿ ಇಡೀ ದೇಶದ ಜನ, ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ದೀಪ ಹಚ್ಚಿದ್ದರು. ಆದರೆ ಇಂದು ಬಡವರ ಮನೆ ದೀಪ ಆರಿಸಿದ್ದಾರೆ. ಪ್ರತಿ ಮನೆಯ ಜ್ಯೋತಿ ಹಚ್ಚುತ್ತೇನೆ ಎಂದು ಮನೆಯಲ್ಲಿ ಹೆಣ ಬೀಳಿಸುತ್ತಿದ್ದಾರೆ. ಪ್ರಧಾನಿಗಳ ಮಾತು, ಜಾಗಟೆ ಸದ್ದು ಎಲ್ಲೋಯ್ತು? ಏಕೆ ಮೌನ ವಹಿಸಿದ್ದೀರಿ. ನಿಮ್ಮ ಮೌನ ಯಾವುದರ ಸಂಕೇತ? ಎಂದು ಪ್ರಶ್ನಿಸಿದರು.

ಸಾವಿನ ಮೇಲೆ ನಿಂತಿರುವ ನೀವು ಜನರಿಗೆ ಕೊಟ್ಟ ಕೊಡುಗೆ ಏನು? ನಮಾಮಿ ಗಂಗೆ ಮೂಲಕ ಗಂಗೆ ಮಾತೆ ಸ್ವಚ್ಛ ಮಾಡುತ್ತೇನೆ ಎಂದಿದ್ದಿರಿ. ಈಗ ಅದೇ ಗಂಗೆಯಲ್ಲಿ ಸಾವಿರಾರು ಶವಗಳು ತೇಲುತ್ತಿವೆ. ಅಂತರ್‍ರಾಷ್ಟ್ರೀಯ ಮಾಧ್ಯಮಗಳೂ ಇದನ್ನು ಖಂಡಿಸುತ್ತಿವೆ. ನಿಮಗೆ ನಾಚಿಕೆಯಾಗಬೇಕು ಎಂದು ಡಿ.ಕೆ.ಸುರೇಶ್ ಕಿಡಿಗಾರಿದರು.

ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸರಕಾರ ಬೂದಿ ಕೊಡುಗೆ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ಮಾಡುತ್ತಿವೆ. ಯಡಿಯೂರಪ್ಪನವರ ಸರಕಾರದ ಕೊಡುಗೆ ಎಂದರೆ 50 ಸಾವಿರ ರುಪಾಯಿ ಪ್ಯಾಕೇಜ್ ನಲ್ಲಿ ಶವ ಸುಡುವುದು. ಇದೇ ನಿಮ್ಮ ಸಂಸ್ಕಾರ. ಅದ್ಯಾವ ಮಾನವೀಯತೆ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದೀರಿ? ಎಂದು ಅವರು ಪ್ರಶ್ನಿಸಿದರು.

ನಿಮಗೆ ಗೊತ್ತಿರೋದು ಚುನಾವಣೆಗೋಸ್ಕರ ಹಿಂದು, ಮುಸಲ್ಮಾನರು, ಕ್ರಿಶ್ಚಿಯನ್ನರನ್ನು ವರ್ಗೀಕರಿಸುವುದು. ನಿಮ್ಮ ಯೋಗ್ಯತೆಗೆ ಕೇಂದ್ರ ಸಚಿವರ(ಸುರೇಶ್ ಅಂಗಡಿ) ಅಂತ್ಯ ಸಂಸ್ಕಾರವನ್ನೇ ನೆಟ್ಟಗೆ ಮಾಡಲು ಆಗಲಿಲ್ಲ. ಆದರೆ ಇವತ್ತು ಮುಸ್ಲಿಂ ಬಾಂಧವರು ಮುಂದೆ ನಿಂತು ಹಿಂದೂಗಳ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ ಎಂದು ಸುರೇಶ್ ತಿಳಿಸಿದರು.

ಕೊರೋನ ಎರಡನೇ ಅಲೆ ಬಗ್ಗೆ ಇಡೀ ವಿಶ್ವವೇ ಎಚ್ಚರಿಕೆ ನೀಡಿತ್ತು. ಆದರೆ ನೀವು ಬರೀ ಪ್ರಚಾರಕ್ಕಾಗಿ ಇಡೀ ವಿಶ್ವ ಹಾಗೂ ಕೊರೋನ ಗೆದ್ದಿದ್ದೇನೆ ಎಂದು ಬೀಗುತ್ತಿದ್ದಿರಿ. ಆದರೆ ಇಂದು ಏನಾಗಿದೆ? ನಿಮ್ಮ ಮೌನ ಏಕೆ? ಚಾಮರಾಜನಗರದಲ್ಲಿ 28 ಜನ ಯಾಕೆ ಸತ್ತರು? ಆಕ್ಸಿಜನ್, ಹಾಸಿಗೆ, ಲಸಿಕೆ ಕೊಡಬೇಕು ಎಂದರೆ ಕೋರ್ಟ್ ಹೇಳಬೇಕು ಎಂದು ಅವರು ಟೀಕಿಸಿದರು.

ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ಯಾಕೆ ಈ ತಾರತಮ್ಯ? 1250 ಕೋಟಿ ರೂ. ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿಗೆ, ಅವರ ಜತೆಗಿದ್ದ ಸಚಿವರಿಗೆ ನಾಚಿಕೆ ಆಗಲಿಲ್ಲವೇ? ಚಾಮರಾಜನಗರ, ಯಾದಗಿರಿಯಲ್ಲಿ ಸತ್ತವರಿಗೆ 10 ಲಕ್ಷ ರೂ.ಪರಿಹಾರ ಘೋಷಿಸಬೇಕು ಎಂಬ ಅರಿವು ಬರಲಿಲ್ಲವೇ? ಕಾರ್ಮಿಕರ ನಿಧಿಯಿಂದ ಹಣ ತೆಗೆದುಕೊಂಡು, ಇದು ಸರಕಾರದಿಂದ ಕೊಡುತ್ತಿರುವ ನೆರವು ಅಂತಾ ಸುಳ್ಳು ಹೇಳುತ್ತೀರಾ? ಎಂದು ಅವರು ಕಿಡಿಗಾರಿದರು.

ಪ್ರಧಾನಮಂತ್ರಿ ನಂಬಿಕೆ ಸೃಷ್ಟಿಸಿ, ಆತ್ಮ ವಿಶ್ವಾಸ ತುಂಬಿ ಅಂತಾರೆ. ಈ ನೀಚ ಸರಕಾರ ಆತ್ಮ ವಿಶ್ವಾಸ ತುಂಬುವುದಿರಲಿ, ಜನ ರಸ್ತೆಯಲ್ಲಿ ಸಾಯುತ್ತಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಿಮ್ಮ ಆಸ್ಪತ್ರೆ ವ್ಯವಸ್ಥೆ ನೋಡಿ, ನಾವು ಸತ್ತರೂ ಪರವಾಗಿಲ್ಲ, ಮನೆಯಲ್ಲೇ ಇರುತ್ತೇವೆ ಅಂತಾ ಜನ ಶಾಪ ಹಾಕುತ್ತಿದ್ದಾರೆ ಎಂದು ಸುರೇಶ್ ಹೇಳಿದರು.

ಲಾಕ್ ಡೌನ್ ಸಮಯದಲ್ಲೇ ಎಲ್ಲರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಸೋಂಕಿತರನ್ನು ಪ್ರತ್ಯೇಕಿಸಿ, ಗುಣಪಡಿಸಿ ಎಂದರೆ ಪರೀಕ್ಷೆ ಮಾಡುವುದನ್ನೇ ಕಡಿಮೆ ಮಾಡಿದ್ದೀರಿ. ನಿತ್ಯ ಮಾಡುತ್ತಿದ್ದ ಪರೀಕ್ಷೆ ಪ್ರಮಾಣವನ್ನು 2.50 ಲಕ್ಷದಿಂದ 90 ಸಾವಿರಕ್ಕೆ ಇಳಿಸಿದ್ದಾರೆ. ಈವರೆಗೂ ಡೆತ್ ಆಡಿಟ್ ಮಾಡಿಲ್ಲ. ಮನೆಯಲ್ಲಿ, ಬೀದಿಯಲ್ಲಿ ಸತ್ತವರ ಲೆಕ್ಕವೇ ಇಲ್ಲ. ಇವರ ಲೆಕ್ಕ ಆಸ್ಪತ್ರೆಯಲ್ಲಿ ಸತ್ತವರು ಮಾತ್ರ ಎಂದು ಸುರೇಶ್ ಹೇಳಿದರು.

ಬೆಂಗಳೂರಿಗೊಬ್ಬ, ಬೇರೆ ಊರಿಗೆ ಒಬ್ಬ ಆರೋಗ್ಯ ಮಂತ್ರಿ ಇದ್ದಾರೆ. ಈ ಸರಕಾರ ಸತ್ತಿದೆ ಅಂತಾ ನಿಮ್ಮ ಸಂಪುಟ ಸಚಿವರೇ ಹೇಳುತ್ತಿದ್ದಾರೆ. ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಕೋಡಿ ಎಂದು ಕೋರ್ಟ್ ಹೇಳಿದರೆ, ಕೇಂದ್ರ ಸರಕಾರ ನೀಡುತ್ತಿರುವುದು 893 ಮೆ.ಟನ್ ಮಾತ್ರ. ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಪ್ರಮಾಣ 1169 ಮೆ.ಟನ್. ಹೊರ ರಾಜ್ಯಗಳಿಗೆ 334 ಟನ್ ಕಳುಹಿಸುತ್ತಿದ್ದೀರಿ. ರಾಜ್ಯದಲ್ಲಿ ಜನ ಯಾಕೆ ಸಾಯುತ್ತಿದ್ದಾರೆ ಅಂತ ಗೊತ್ತಾಯಿತಾ? ಎಂದು ಅವರು ಪ್ರಶ್ನಿಸಿದರು.

ಈಗಲೂ ರಾಜ್ಯದಲ್ಲಿ ಎರಡು ದಿನಗಳಿಗೆ ಆಗುವಷ್ಟು ಆಕ್ಸಿಜನ್ ದಾಸ್ತಾನು ಇಲ್ಲ. 10 ಲೀಟರ್ ಆಕ್ಸಿಜನ್ ಬೇಕಾದವರಿಗೆ 3 ಲೀಟರ್ ಮಾತ್ರ ಕೊಡುತ್ತಿದ್ದು, ಇದರಿಂದ ಜನ ಸಾಯುತ್ತಿದ್ದಾರೆ. ಈಗ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿದೆ. ಕೋವಿಡ್ ನಂತರ ಜನ ಯಾಕೆ ಸಾಯುತ್ತಿದ್ದಾರೆ ಎಂದು ಪರಿಶೀಲಿಸುತ್ತಿಲ್ಲ. ಈ ಸರಕಾರದಲ್ಲಿ ಔಷಧಿಗೊಬ್ಬ ಮಂತ್ರಿ, ಬೆಡ್‍ಗೆ ಒಬ್ಬ ಮಂತ್ರಿ, ಆಕ್ಸಿಜನ್‍ಗೆ ಒಬ್ಬ ಮಂತ್ರಿಯಂತೆ ಎಂದು ಕಿಡಿಗಾರಿದ ಅವರು, ಪ್ರಧಾನಿ ಕೊಟ್ಟ 2800 ವೆಂಟಿಲೇಟರ್ ಗಳನ್ನು ಪೂಜೆ ಮಾಡಲು ಇಟ್ಟುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು.

ಈ ಸರಕಾರ ಒಂದೂವರೆ ವರ್ಷದಲ್ಲಿ 1.75 ಲಕ್ಷ ಕೋಟಿ ಸಾಲ ಮಾಡಿದೆ. ಬಡವರಿಗೆ ನೀಡಲು ನಿಮಗೆ ಹಣ ಇಲ್ಲ. ಕಂಟ್ರಾಕ್ಟರ್ ಗಳಿಗೆ ಕೊಡಲು ಹಣ ಇದೆ. ಬಿಜೆಪಿ ಅಧಿಕಾರಕ್ಕೆ ರಾಜಕಾರಣ ಮಾಡುತ್ತಿದೆಯೇ ಹೊರತು, ರೈತರು, ಬಡವರ ಬಗ್ಗೆ ಕಿಂಚಿತ್ತೂ ಚಿಂತಿಸುತ್ತಿಲ್ಲ ಎಂದು ಸುರೇಶ್ ಹೇಳಿದರು.

ಆರೋಗ್ಯ ಸಚಿವರಿಗೆ ಚಿಕ್ಕಬಳ್ಳಾಪುರದ ಹಳ್ಳಿಗಳಿಗೆ ಹೋಗಿ ಬರಲು ಹೇಳಿ. ಮಾಧ್ಯಮಗಳಲ್ಲಿ ನೀಡುವ ಹೇಳಿಕೆಯನ್ನು ಅಲ್ಲಿನ ಜನರ ಮುಂದೆ ಹೇಳಲಿ. ಆರೋಗ್ಯ ಸಚಿವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ. ಅವರ ಮೇಲೆ ಒಬ್ಬರು ಉಸ್ತುವಾರಿ ಬಂದಿದ್ದು, ಅವರಿಗೆ ಸಂಕಷ್ಟವಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಜನರ ಜೀವ ಉಳಿಯಬೇಕು ಎಂದರೆ, ವೈದ್ಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರ ನೆರವಿನಿಂದ ಮನೆ, ಮನೆ ಪರೀಕ್ಷೆ ಮಾಡಬೇಕು. ಕೇವಲ ಪೇಪರ್ ನಲ್ಲಿ ಆದೇಶ ಕೊಡುವುದಲ್ಲ ಎಂದು ಸುರೇಶ್ ಹೇಳಿದರು.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ನಿನ್ನೆ ಪ್ರಧಾನಿ ಡಿಸಿಗಳ ಜೊತೆ ಸಂವಾದ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಅಲ್ಲಿ ಮಾತನಾಡೋಕೆ ಬಿಟ್ಟಿಲ್ಲ. ಕೇವಲ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾರನ್ನ ಮಾತ್ರ ಬಿಟ್ಟಿದ್ದಾರೆ. ಒಂದು ರೀತಿ ಗನ್ ಪಾಯಿಂಟ್ ಇಟ್ಟು ಹೇಳಿ ಅಂದರೆ ಏನು ಹೇಳುತ್ತಾರೆ, ಆ ರೀತಿ ಹೇಳಿದ್ದಾರೆ ಎಂದು ಟೀಕಿಸಿದರು.

ಯುನೈಟೆಡ್ ಕಿಂಗ್‍ಡಮ್‍ನಲ್ಲಿ 6.7 ಕೋಟಿ ಜನಸಂಖ್ಯೆ ಇದೆ. ಅವರು 1.3 ಕೋಟಿ ಲಸಿಕೆಗೆ ಆರ್ಡರ್ ಮಾಡಿದ್ದಾರೆ. ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದೆ. ಆದರೆ ಲಸಿಕೆ ಖರೀದಿಸಿದ್ದು 1.1 ಕೋಟಿ ಮಾತ್ರ. ಈವರೆಗೆ ಶೇ.2ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಚಂದ್ರಶೇಖರ್ ದೂರಿದರು.

ದೇಶದ ಜನತೆಗೆ ಲಸಿಕೆ ಕೊಡೋದು ಕೇಂದ್ರ ಸರಕಾರಕ್ಕೆ, ಪ್ರಧಾನಿ ಮೋದಿಗೆ ಆದ್ಯತೆಯಾಗಿರಲಿಲ್ಲ. ಅವರ ಗಮನ ಕೇವಲ ಚುನಾವಣೆಗಳ ಮೇಲಿತ್ತು. ನಮ್ಮ ದೇಶದಲ್ಲಿದ್ದ ಲಸಿಕೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡಿದರು. ಇವತ್ತು ಜನ ಲಸಿಕೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನ್ಯಾಯಾಧೀಶರನ್ನ ಲೇವಡಿ ಮಾಡುತ್ತಾರೆ. ನಮ್ಮ ರಾಜ್ಯಕ್ಕೆ ಕೇವಲ 25,486 ವಯಲ್ಸ್ ಮಾತ್ರ ರೆಮ್‍ಡಿಸಿವಿರ್ ಬಂದಿದೆ. ಗುಜರಾತ್ ಗೆ 1.53 ಲಕ್ಷ, ಉತ್ತರಪ್ರದೇಶಕ್ಕೆ 1.28 ಲಕ್ಷ ವಯಲ್ಸ್ ಕೊಟ್ಟಿದ್ದಾರೆ ಎಂದು ಅವರು ಕಿಡಿಗಾರಿದರು.

ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಕೇಂದ್ರ ಸರಕಾರ ಕಳೆದ ಬಾರಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿತ್ತು. ಆ ಪ್ಯಾಕೇಜ್ ಯಾರು ಯಾರಿಗೆ ಹಂಚಿಕೆಯಾಗಿದೆ ಅನ್ನೋದನ್ನು ಕೇಂದ್ರ ಸರಕಾರ ಸಂಸತ್ತಿನಲ್ಲೂ ಹೇಳಿಲ್ಲ, ದೇಶದ ಜನರಿಗೂ ತಿಳಿಸಿಲ್ಲ ಎಂದು ದೂರಿದರು.

ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್ ಟೂಲ್ ಕಿಟ್ ಮಾಡಿಕೊಂಡಿದೆ ಎಂದು ಆರೋಪಿಸುತ್ತಿದ್ದಾರೆ. ಪ್ರಮುಖ ವಿಷಯಗಳ ಹಾದಿ ತಪ್ಪಿಸಲು ಬಿಜೆಪಿ ಇಂತಹ ಪ್ರಯತ್ನ ಮಾಡುತ್ತಿದ್ದು, ಈ ಬಗ್ಗೆ ಬಿಜೆಪಿ ನಾಯಕರಾದ ಜೆ.ಪಿ.ನಡ್ಡಾ, ಸ್ಮೃತಿ ಇರಾನಿ, ಸಂಬಿತ್ ಪಾತ್ರ, ಬಿ.ಎಲ್.ಸಂತೋಷ್ ವಿರುದ್ಧ ದೂರು ಕೊಟ್ಟಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News