ಸರಕಾರದ ಪ್ಯಾಕೇಜ್ ದುಡಿಯುವ ಜನರನ್ನು ಅವಮಾನಿಸುತ್ತಿದೆ: ಜನಾಗ್ರಹ ಆಂದೋಲನ

Update: 2021-05-20 11:05 GMT

ಬೆಂಗಳೂರು, ಮೇ 19: ಕೊರೋನ ರೋಗ ಹಾಗೂ ಲಾಕ್‍ಡೌನ್ ಕಾರಣದಿಂದ ಜನರು ತತ್ತಿರಿಸಿದ್ದು, ದುಡಿಮೆಯ ಮಾರ್ಗವೂ ಇಲ್ಲದಾಗಿರುವ ಬಡಜನರ ಜೀವನ ನಿರ್ವಹಣೆ ದುಸ್ತರವಾಗಿದೆ. ಪರಿಸ್ಥಿತಿಯ ದುರ್ಲಾಭ ಪಡೆದು ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಯುತ್ತಿವೆ. ಈ ಸಂದರ್ಭದಲ್ಲಿ ಜನರಿಗೆ ಬದುಕುಳಿಯಲು ಆಸರೆಯಾಗಬೇಕಿದ್ದ ಸರಕಾರದ ಪ್ಯಾಕೇಜ್ ಸಂಕಷ್ಟದಲ್ಲಿರುವವರನ್ನು ತೀವ್ರ ನಿರಾಶೆಗೊಳಿಸಿರುವುದು ಮಾತ್ರವಲ್ಲ, ದುಡಿಯುವ ಜನರನ್ನು ಅವಮಾನಿಸುತ್ತಿದೆ ಎಂದು ಜನಾಗ್ರಹ ಆಂದೋಲನ ಟೀಕಿಸಿದೆ.

''ಅಸಂಘಟಿತ, ಸ್ವಯಂ ಉದ್ಯೋಗಿ, ಶ್ರಮಿಕ ಕುಟುಂಬಗಳಿಗೆ ಕೇವಲ 2 ಸಾವಿರ ರೂ. ಮತ್ತು 3 ಸಾವಿರ ರೂ.ನೆರವನ್ನು ಮಾತ್ರ ಘೋಷಿಸಿದೆ. ಇಂತಹ ದುಷ್ಕಾಲವನ್ನು ಎದುರಿಸಲು 2 ಸಾವಿರ ರೂ.ಏತಕ್ಕೆ ಸಾಲುತ್ತಿದೆ ಎಂಬುದನ್ನು ಸರಕಾರವೇ ಹೇಳಬೇಕಿದೆ. ಅದೂ ನೊಂದಣಿಯಾಗಿರುವ ಶ್ರಮಿಕರಿಗೆ ಎಂದು ಹೇಳಿರುವುದರಿಂದ ಅದು ಎಲ್ಲರಿಗೂ ತಲುಪುವುದು ಸಾಧ್ಯವೇ ಇಲ್ಲ. ಉದಾಹರಣೆಗೆ ನೇಕಾರ ಕಾರ್ಮಿಕರಿಗೆ ಗುರುತಿನ ಚೀಟಿಯನ್ನೂ ಸರಕಾರ ಇದುವರೆಗೆ ನೀಡಿಲ್ಲ. ಮನೆಕೆಲಸದವರಿಗೂ ಯಾವ ನೊಂದಣಿಯೂ ಇಲ್ಲ.''

ಅಪಾರ ನಷ್ಟ ಹೊಂದಿರುವ ಹೂವು ಮತ್ತು ತರಕಾರಿ ಬೆಳೆಯುವ ರೈತರಿಗೆ ಮಾತ್ರ 10 ಸಾವಿರ ರೂ.ನೆರವನ್ನು ಘೋಷಿಸಿದೆ. ಅವರಿಗಾಗಿರುವ ನಷ್ಟದ ಮುಂದೆ ಈ ಹಣ ಏತಕ್ಕೂ ಸಾಲುವುದಿಲ್ಲ. ಅಲ್ಲದೆ ವಿಶಾಲ ರೈತಾಪಿಗಾಗಲಿ, ಕೃಷಿ ಕೂಲಿಗಳಿಗಾಗಲಿ ಯಾವುದೇ ನೆರವನ್ನು ಸರಕಾರ ಘೋಷಿಸಿಲ್ಲ. ಕೆಲಸ ಕಳೆದುಕೊಂಡಿರುವ ಖಾಸಗಿ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ನೆರವಾಗುವ ಯಾವ ಅಂಶವೂ ಇದರಲ್ಲಿಲ್ಲ. ಇದು ನೆರವಿನ ಪ್ಯಾಕೇಜ್ ಎಂದು ಕರೆಯಲಿಕ್ಕೇ ಅನರ್ಹವಾಗಿದೆ ಎಂದು ಟೀಕಿಸಿದೆ.

''ನಿಜವಾಗಲೂ ಸರಕಾರ ಜನಹಿತ ಬಯಸುತ್ತಿದ್ದಲ್ಲಿ ಕೋವಿಡ್ ರೋಗಕ್ಕೆ ತುತ್ತಾಗಿರುವ ಎಲ್ಲ ಜನರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು. ಎಲ್ಲ ಜನರಿಗೂ ಉಚಿತವಾಗಿ ವ್ಯಾಕ್ಸಿನ್ ಒದಗಿಸಲು ತುರ್ತ ಕ್ರಮ ಕೈಗೊಳ್ಳಬೇಕು. ಬಿಪಿಎಲ್ ಜನರಿಗೂ ಸಮಗ್ರ ದಿನಸಿ ಮತ್ತು ಮಾಸಿಕ 5 ಸಾವಿರ ರೂ.ನೆರವು ನೀಡಬೇಕು. ಸೋಂಕಿನಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಗಳಿಗೆ 5 ಲಕ್ಷ ರೂ.ಪರಿಹಾರ ನೀಡಬೇಕು. ಬೆಳೆ ನಷ್ಟ ಅನುಭವಿಸಿರುವ ಹೂವು, ತರಕಾರಿ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ.ಪರಿಹಾರ ನೀಡಬೇಕು. ಇತರೆಲ್ಲಾ ಸಣ್ಣ ರೈತರಿಗೆ ಎಕರೆಗೆ 10 ಸಾವಿರ ರೂ.ನೆರವು ನೀಡಬೇಕು. 3 ತಿಂಗಳ ಸಾಲ ಮರುಪಾವತಿ ಮುಂದೂಡುವುದು ಮಾತ್ರವಲ್ಲ, ಮೈಕ್ರೋ ಫೈನಾನ್ಸಿನ ಸಾಲವನ್ನೂ ಒಳಗೊಂಡಂತೆ ಎಲ್ಲ ಸಾಲದ ಕೊರೋನ ಕಾಲಾವಧಿಯ ಕಂತುಗಳನ್ನು ಸರಕಾರವೇ ಭರಿಸಿ, ಕಂತು ಮನ್ನಾ ಮಾಡಬೇಕಿದೆ.''

''ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಉಪನ್ಯಾಸಕರೂ ಸಂಕಷ್ಟದಲ್ಲಿದ್ದು ಅವರ ನೆರವಿಗೂ ಧಾವಿಸಬೇಕಿದೆ. ಜನರಿಗೆ ತಲುಪಬಲ್ಲ, ನಿಜವಾದ ಅರ್ಥದಲ್ಲಿ ಜನರ ಕೈಗೆ ಹಣವನ್ನು ತಂದುಕೊಡುವ ಪ್ಯಾಕೇಜ್ ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸುವ ದೃಷ್ಟಿಯಿಂದ ಮಾತ್ರವಲ್ಲ ಕುಸಿಯುತ್ತಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದಲೂ ಬಹಳ ಅತ್ಯಗತ್ಯ. ಕಾರ್ಪೋರೇಟ್ ಮತ್ತು ಕೋಟ್ಯಾಧಿಪತಿಗಳ ಕೈಯಲ್ಲಿ ಕೇಂದ್ರೀಕರಣಗೊಂಡಿರುವ ಹಣ ಜನರ ಕೈಗೆ ತಲುಪಿ ರೊಟೇಷನ್ ಆಗಬೇಕಿದೆ.''

''ಹೀಗಾಗಿ ಎಲ್ಲ ಕೋಟ್ಯಧೀಶ ರಾಜಕಾರಣಿಗಳು ಮತ್ತು ಉದ್ದಿಮೆಪತಿಗಳ ಆದಾಯದ ಮೇಲೆ ಶೇ.5ರ ಸುಂಕವನ್ನು ವಿಧಿಸಿ ಮತ್ತು ಕಾರ್ಪೋರೇಟ್ ವಹಿವಾಟಿನ ಮೇಲೆ ಶೇ.2ರ ಕೊರೋನ ಸೆಸ್ ವಿಧಿಸಿ ಸಂಪನ್ಮೂಲವನ್ನು ಕ್ರೋಢೀಕರಿಸಿ, ನಿಜವಾದ ಅರ್ಥದ ಪ್ಯಾಕೇಜಿನ ಮೂಲಕ ಜನರ ಕೈಗೆ ತಲುಪುವಂತೆ ಸರಕಾರ ಮಾಡಬೇಕಿದೆ. ಈ ಕ್ರಮಗಳಿಗೆ ಸರಕಾರ ಮುಂದಾಗದಿದ್ದರೆ ಕೋವಿಡ್ ಇದ್ದರೂ ಜನ ದಿಟ್ಟ ಹೋರಾಟಗಳಿಗಿಳಿಯುವು ಅನಿವಾರ್ಯವಾಗಲಿದೆ'' ಎಂದು ಆಂದೋಲನದ ಮಾವಳ್ಳಿ ಶಂಕರ್, ಕೆ.ಎಲ್.ಅಶೋಕ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News