ಭಾರತದ ಮಾಜಿ ಆಲ್ ರೌಂಡರ್ ತಾಯಿಯ ಚಿಕಿತ್ಸೆಗಾಗಿ 6.77 ಲಕ್ಷ ರೂ. ದೇಣಿಗೆ ನೀಡಿದ ವಿರಾಟ್ ಕೊಹ್ಲಿ

Update: 2021-05-20 14:08 GMT

ಹೊಸದಿಲ್ಲಿ: ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಸಹಾಯ ಮಾಡುವ ಅಭಿಯಾನವನ್ನು ಆರಂಭಿಸಿರುವ  ವಿರಾಟ್ ಕೊಹ್ಲಿ, ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ ಕೆ.ಎಸ್.ಶ್ರಾವಂತಿ ನಾಯ್ಡು ಅವರ ತಾಯಿಯ ಚಿಕಿತ್ಸೆಗಾಗಿ 6.77 ಲಕ್ಷ ರೂ. ದೇಣಿಗೆ ನೀಡಿ ಆರ್ಥಿಕ  ನೆರವು ನೀಡಿದ್ದಾರೆ.

ಶ್ರಾವಂತಿ ನಾಯ್ಡು ಅವರ ತಾಯಿ ಕೊರೋನ ಸೋಂಕಿಗೆ ಒಳಗಾಗಿದ್ದಾರೆ ಎಂದು  ಖ್ಯಾತ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಟ್ವೀಟ್ ಮಾಡಿದ್ದು, ಭಾರತದ ಮಾಜಿ ಆಲ್‌ರೌಂಡರ್‌ಗೆ ಆರ್ಥಿಕ ನೆರವು ಕೋರಿದ್ದರು. ನಾಯ್ಡು  ಪೋಷಕರ ಚಿಕಿತ್ಸೆಗಾಗಿ 16 ಲಕ್ಷ ರೂ. ಖರ್ಚು ಮಾಡಿದ್ದಾರೆ. ಆಸ್ಪತ್ರೆಯ ವೆಚ್ಚಕ್ಕೆ ಇನ್ನಷ್ಟು ಹಣದ ಅವಶ್ಯಕತೆ ಇದೆ  ಎಂದು ಗುಟ್ಟಾ ಟ್ವೀಟಿಸಿದ್ದರು. 

ಮಾಜಿ ಬಿಸಿಸಿಐ ದಕ್ಷಿಣ ವಲಯದ ಸಂಯೋಜಕಿ ಎನ್ .ವಿದ್ಯಾ ಯಾದವ್, ಹಣಕಾಸು ನೆರವು ನೀಡಿರುವ ಕೊಹ್ಲಿಯವರನ್ನು ಶ್ಲಾಘಿಸಿದರು. ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರಿಗೂ  ಧನ್ಯವಾದ ಹೇಳಿದರು. ಶ್ರೀಧರ್ ಭಾರತದ ಮಾಜಿ ಆಲ್‌ರೌಂಡರ್ ನಾಯ್ಡು ಅವರಿಗೆ ಸಹಾಯ ಕೋರಿರುವ ಟ್ವೀಟ್ ನೊಂದಿಗೆ ವಿರಾಟ್ ಕೊಹ್ಲಿ ಮತ್ತು ಹನುಮ ವಿಹಾರಿ ಅವರನ್ನು ಟ್ಯಾಗ್ ಮಾಡಿದ್ದರು.

ದೇಶದಲ್ಲಿ ಕೋವಿಡ್ ಪರಿಹಾರಕ್ಕಾಗಿ ಹಣವನ್ನು ಸಂಗ್ರಹಿಸುವ ಅಭಿಯಾನಕ್ಕಾಗಿ ಕೊಹ್ಲಿ ಹಾಗೂ  ಅವರ ಪತ್ನಿ ಅನುಷ್ಕಾ ಶರ್ಮಾ 11 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ.

ಸ್ಟಾರ್ ದಂಪತಿಗಳು ಸ್ವತಃ 2 ಕೋಟಿ ರೂ. ದೇಣಿಗೆ ನೀಡುವ ಮೂಲಕ ಅಭಿಯಾನವನ್ನು ಆರಂಭಿಸಿದ್ದರು. ಇತರರು "ಒಗ್ಗೂಡಿ ನಮ್ಮ ಭಾರತಕ್ಕೆ ಸಹಾಯ ಮಾಡಿ" ಎಂದು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News