ಮಾರ್ಗಸೂಚಿ ಉಲ್ಲಂಘನೆ: ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

Update: 2021-05-20 14:26 GMT

ಬೆಂಗಳೂರು, ಮೇ 20: ನಂಜನಗೂಡಿನಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಪೂಜೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

ನಂಜನಗೂಡಿನಲ್ಲಿ ಪೂಜೆ ಸಲ್ಲಿಸಿದ ಹಿನ್ನೆಲೆ ವಕೀಲ ಜಿ.ಆರ್.ಮೋಹನ್ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ಸಲ್ಲಿಸಿದ್ದ ಮೆಮೋ ವಿಚಾರಣೆ ನಡೆಸಿದ ನ್ಯಾಯಪೀಠ, ಎಪಿಡೆಮಿಕ್ ಡಿಸೀಸ್ ಕಾಯ್ದೆಯಡಿ ಆರೋಪಿಯ ನಡಾವಳಿ ಅಪರಾಧದಿಂದ ಕೂಡಿದೆ. ಹೀಗಾಗಿ, ಎಫ್‌ಐಆರ್ ದಾಖಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ. 

ಇದೇ ವೇಳೆ, ಸರಕಾರ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚನೆ ನೀಡಿದೆ. ಮೆಮೋ ಬಗ್ಗೆ ಮೂಲ ಪ್ರಕರಣದೊಂದಿಗೆ ವಿಚಾರಣೆಗೆ ಹೈಕೋರ್ಟ್ ನಿರ್ಧಾರ ಮಾಡಿದೆ. 

ಏನಿದು ಪ್ರಕರಣ: ಕೊರೋನ ಲಾಕ್‌ಡೌನ್ ನಡುವೆ ಬಿ.ವೈ.ವಿಜಯೇಂದ್ರ ಕುಟುಂಬ ಸಮೇತ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನಡೆಸಿದ್ದರು. 

ಮುಖ್ಯಮಂತ್ರಿ ಯಡಿಯೂರಪ್ಪರ ಮಗನಿಂದಲೇ ಕೊರೋನ ಲಾಕ್‌ಡೌನ್ ಜಾರಿ ನಿಯಮ ಉಲ್ಲಂಘನೆ ಆದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಲಾಕ್‌ಡೌನ್ ನಡುವೆಯೂ ನಂಜನಗೂಡು ದೇಗುಲದಲ್ಲಿ ಬಿ.ವೈ. ವಿಜಯೇಂದ್ರ ಪೂಜೆ ಮಾಡಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗೆ ಜಿಲ್ಲಾ ಕಾಂಗ್ರೆಸ್ ಘಟಕ ಎಫ್‌ಐಆರ್ ದಾಖಲಿಸುವಂತೆ ದೂರು ನೀಡಿತ್ತು.

ಜತೆಗೆ, ದೇಗುಲ ಆಡಳಿತ ಮಂಡಳಿ, ಸರಕಾರಿ ಸಿಬ್ಬಂದಿ, ಪುರೋಹಿತ ವರ್ಗವನ್ನು ವಜಾ ಮಾಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News