ಜ್ವರದಿಂದ ಬಳಲುತ್ತಿದ್ದ ಮಗಳನ್ನು ಹೆಗಲ ಮೇಲೆ ಹೊತ್ತು 8 ಕಿ.ಮೀ. ನಡೆದು ಆಸ್ಪತ್ರೆಗೆ ಬಂದ ತಂದೆ

Update: 2021-05-20 15:06 GMT

ಯಾದಗಿರಿ, ಮೇ 20: ರಾಜ್ಯ ಸರಕಾರ ಕೊರೋನಗೆ ಕಡಿವಾಣ ಹಾಕಲು ಲಾಕ್‍ಡೌನ್ ಜಾರಿಗೆ ತಂದಿದೆ. ಜಿಲ್ಲಾಡಳಿತ ಕೂಡ ಕೂಡ ಮೂರು ದಿನಗಳ ಕಾಲ ಕಠಿಣ ಲಾಕ್‍ಡೌನ್ ಜಾರಿ ಮಾಡಿದೆ. ಈ ನಡುವೆ ವ್ಯಕ್ತಿಯೋರ್ವ ತನ್ನ ಮಗಳನ್ನು ಹೊತ್ತು 8 ಕಿ.ಮೀ ನಡೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ನಿವಾಸಿ ಮರೇಪ್ಪ ಜ್ವರದಿಂದ ಬಳಲುತ್ತಿದ್ದ ತನ್ನ ಮಗಳನ್ನು ಆಸ್ಪತ್ರೆಗೆ ತೋರಿಸಲು ಪಗಲಾಪುರ ಗ್ರಾಮದಿಂದ ಯಾದಗಿರಿವರೆಗೆ ಹೆಗಲ ಮೇಲೆ ಹೊತ್ತುಕೊಂಡು ನಡೆದುಕೊಂಡು ಬಂದಿದ್ದಾರೆ. ಬಿಸಿಲನ್ನು ಲೆಕ್ಕಿಸದೆ ಪುತ್ರಿ ಅನುಶಾಳನ್ನು ಯಾದಗಿರಿಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆ ವೈದ್ಯರಿಗೆ ತೋರಿಸಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಪೊಲೀಸರು ಯಾರನ್ನು ಸಂಚರಿಸಲು ಬಿಡುತ್ತಿಲ್ಲ. ವಾಹನಗಳನ್ನು ಜಪ್ತಿ ಮಾಡುತ್ತಿರುವ ಜೊತೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿರುವ ಸುದ್ದಿ ಅರಿತು ಬೈಕ್ ತೆಗೆದುಕೊಂಡು ಬರಲು ತಂದೆ ಮರೇಪ್ಪ ಭಯ ಪಟ್ಟಿದ್ದಾರೆ. ಬಳಿಕ ಪುತ್ರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ.

ನಂತರ ವೈದ್ಯರ ಹತ್ತಿರ ಮಗಳಿಗೆ ಚಿಕಿತ್ಸೆ ಕೊಡಿಸಿ ಮರೇಪ್ಪ ನಗರದ ಹೊಸಳ್ಳಿ ಕ್ರಾಸ್‍ವರೆಗೆ ಮಗಳನ್ನು ಮತ್ತೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಹೊಸಳ್ಳಿ ಕ್ರಾಸ್ ನಲ್ಲಿ ಆಟೋಗೆ ಹತ್ತಿ ಕೌಳೂರುಗೆ ಆಟೋದ ಮೂಲಕ ತೆರಳಿದ್ದಾರೆ. ನಂತರ ಕೌಳೂರುನಿಂದ ಪುತ್ರಿಯನ್ನು ಮತ್ತೆ ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ಹೋಗಲು ವಾಹನಗಳಿಗೆ ಪೊಲೀಸರು ಯಾವುದೇ ಅಡ್ಡಿಪಡಿಸುವುದಿಲ್ಲ ಎಂಬ ಮಾಹಿತಿ ನಂತರವಷ್ಟೇ ಮರೇಪ್ಪ ಅವರಿಗೆ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News