ಕಪ್ಪು ಶಿಲೀಂದ್ರ ಸೋಂಕಿಗೆ ಸರಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು: ಡಾ.ಕೆ.ಸುಧಾಕರ್

Update: 2021-05-20 16:51 GMT

ಬೆಂಗಳೂರು, ಮೇ 20: ಕೊರೋನ ಸೋಂಕಿನಿಂದ ಗುಣಮುಖರಾದ ನಂತರ ಕೆಲವರಲ್ಲಿ ಕಂಡು ಬರುತ್ತಿರುವ ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗೆ ಅಂತರಶಿಸ್ತೀಯ ವಿಧಾನ ಅವಶ್ಯಕತೆಯಿದ್ದು ಇಎನ್‍ಟಿ ತಜ್ಞರು, ನೇತ್ರಶಾಸ್ತ್ರಜ್ಞರು, ಅರಿವಳಿಕೆ ವೈದ್ಯರು ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಜ್ಞರ ಅಗತ್ಯವಿರುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗೆ ಅಗತ್ಯವಿರುವ ಈ ಎಲ್ಲ ತಜ್ಞ ವೈದ್ಯರುಗಳ ತಂಡ ಎಲ್ಲ ಸರಕಾರಿ ಜಿಲ್ಲಾಸ್ಪತ್ರೆಗಳು ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವುದರಿಂದ ಸೋಂಕಿತರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಕಪ್ಪು ಶಿಲೀಂದ್ರ ಸೋಂಕನ್ನು ಈಗಾಗಲೇ ಸೂಚಿತ ರೋಗ ಎಂದು ಘೋಷಿಸಲಾಗಿದ್ದು, ಈ ಸೋಂಕಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಇರುವ ಯಾವುದೇ ಆಸ್ಪತ್ರೆ ಅಥವಾ ವೈದ್ಯಕೀಯ ಸಂಸ್ಥೆಗಳು ಸೋಂಕಿತರಿಗೆ ಚಿಕಿತ್ಸೆ/ಆಸ್ಪತ್ರೆ ದಾಖಲಾತಿ ನಿರಾಕರಿಸಬಾರದು. ಈ ನಿಟ್ಟಿನಲ್ಲಿ ಅತೀ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News