ಕೊರೋನ: ಮುಂದುವರಿದ ಹುಸಿಯುದ್ಧ

Update: 2021-05-22 07:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಜೂ. 7ರವರೆಗೆ ಲಾಕ್‌ಡೌನ್‌ನ್ನು ವಿಸ್ತರಿಸಿದ್ದಾರೆ. ಸರಕಾರದ ಇಂದಿನ ಸ್ಥಿತಿಯಲ್ಲಿ, ಅದಕ್ಕೆ ಲಾಕ್‌ಡೌನ್ ಎನ್ನುವ ಹುಸಿಯುದ್ಧದ ಹೊರತಾಗಿ, ಕೊರೋನ ವಿರುದ್ಧ ಹೋರಾಡುವ ಬೇರೆ ಮಾರ್ಗವೇ ಇಲ್ಲ. ಕೊರೋನ ವಿರುದ್ಧ ನಡೆಸಬಹುದಾದ ನೇರ ಯುದ್ಧವೆಂದರೆ, ಆರೋಗ್ಯ ಕ್ಷೇತ್ರಕ್ಕೆ ಬೇಕಾದ ಸೂಕ್ತ ಮೂಲಭೂತ ಅಗತ್ಯಗಳನ್ನು ಒದಗಿಸಿಕೊಡುವುದು. ಇದು ಕೊರೋನವನ್ನು ನಾಶ ಮಾಡುವ ಸರಿಯಾದ ದಾರಿಯಾಗಿದೆ. ಆದರೆ ಅಂತಹ ನೇರ ಯುದ್ಧವನ್ನು ಹೂಡುವುದಕ್ಕೆ ಬೇಕಾದ ವ್ಯವಸ್ಥೆ ನಮ್ಮಲ್ಲಿಲ್ಲ. ನಮ್ಮ ರಾಜ್ಯವೆಂದಲ್ಲ, ದೇಶವೇ ಅಂತಹದೊಂದು ನೇರ ಯುದ್ಧಕ್ಕೆ ಸಿದ್ಧವಾಗಿಲ್ಲ. ಹಾಗೆಂದು ಕೈ ಕಟ್ಟಿ ಕುಳಿತುಕೊಳ್ಳುವಂತಿಲ್ಲ. ಈ ಕಾರಣದಿಂದ, ಕೊರೋನವನ್ನು ಎದುರಿಸುವ ಹೊಣೆಯನ್ನು ಜನರ ಹೆಗಲ ಮೇಲೆ ಹಾಕಲಾಗಿದೆ. ಕೊರೋನವನ್ನು ಎದುರಿಸಲು ಲಾಕ್‌ಡೌನ್ ಹೇರುವುದೆಂದರೆ, ಸರಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು.

ಕೊರೋನಾ ವಿರುದ್ಧದ ಯುದ್ಧಕ್ಕೆ ಜನಸಾಮಾನ್ಯರನ್ನು ಮುಂದಕ್ಕೆ ತಳ್ಳುವುದು. ಲಾಕ್‌ಡೌನ್‌ನಿಂದ ಕೊರೋನವನ್ನು ಎದುರಿಸಬಹುದು ಎಂದು ತಜ್ಞರು ಈಗಾಗಲೇ ಹೇಳಿಕೆ ನೀಡಿರುವುದರಿಂದ ಮತ್ತು ಸರಕಾರಕ್ಕೆ ವರದಿಯನ್ನು ನೀಡಿರುವುದರಿಂದ, ಅದನ್ನು ನಾವೆಲ್ಲ ನಂಬಲೇ ಬೇಕಾಗಿದೆ. ಆದರೆ, ಕೊರೋನವನ್ನು ಎದುರಿಸುವ ಈ ಹುಸಿ ಯುದ್ಧದಲ್ಲಿ, ಕೊರೋನ ಸೋಂಕಿತರೇ ಅಲ್ಲದ ಸಹಸ್ರಾರು ಬಡಪಾಯಿಗಳೂ ಬಲಿಯಾಗಬೇಕಾಗುತ್ತದೆ. ಅವರು ಬಲಿಯಾಗುವುದು ಕೊರೋನಕ್ಕಲ್ಲ, ಬದಲಿಗೆ ಲಾಕ್‌ಡೌನ್ ಸೃಷ್ಟಿಸುವ ಆರ್ಥಿಕ ಸಂಕಷ್ಟಗಳಿಗೆ. ಆದುದರಿಂದ, ಲಾಕ್‌ಡೌನ್ ವಿಸ್ತರಣೆಯನ್ನು ಕೆಲ ಮೇಲ್‌ಮಧ್ಯಮ ವರ್ಗ ಸಂಭ್ರಮಿಸುತ್ತಿದೆಯಾದರೂ, ಬಡವರ್ಗ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ. ಅವರು ಕೊರೋನಕ್ಕೆ ಹೆದರುವುದಕ್ಕಿಂತ, ಲಾಕ್‌ಡೌನ್‌ಗಳಿಗೆ ಹೆದರುತ್ತಾ ಬದುಕುತ್ತಿದ್ದಾರೆ. ಇದೀಗ ಕೊರೋನ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ ಎನ್ನುವ ವರದಿಗಳು, ಲಾಕ್‌ಡೌನ್ ಗ್ರಾಮೀಣ ಪ್ರದೇಶಗಳಲ್ಲೂ ವಿಜೃಂಭಿಸಲಿರುವ ಪೂರ್ವ ಸೂಚನೆಯಾಗಿದೆ. ಈ ಹಿಂದೆಲ್ಲ ಲಾಕ್‌ಡೌನ್‌ನಿಂದ ಹೆಚ್ಚು ಸಂತ್ರಸ್ತರಾಗಿದ್ದು ನಗರ ಪ್ರದೇಶ. ಇನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಕೊರೋನದ ಜೊತೆ ಜೊತೆಗೆ ಲಾಕ್‌ಡೌನ್ ತನ್ನ ಕ್ರೌರ್ಯವನ್ನು ಪ್ರದರ್ಶಿಸಲಿದೆ.

ಪ್ಯಾಕೇಜ್ ಹೆಸರಿನಲ್ಲಿ ಮುಖ್ಯಮಂತ್ರಿಯವರು 1,250 ಕೋಟಿ ರೂ.ಗಳ ಅಂಕಿಗಳನ್ನು ಮುಂದಿಟ್ಟಾಗಲೇ ಲಾಕ್‌ಡೌನ್ ವಿಸ್ತರಣೆಯಾಗುವ ಸುಳಿವು ನಾಡಿಗೆ ದೊರಕಿತ್ತು. ವಿರೋಧ ಪಕ್ಷದ ಮುಖಂಡರೇ ‘ಲಾಕ್‌ಡೌನ್ ಹೇರುವುದಕ್ಕೆ’ ಸಲಹೆಗಳನ್ನು ನೀಡುವಾಗ, ಅದನ್ನು ಮೀರುವುದು ಮುಖ್ಯಮಂತ್ರಿಗೂ ಕಷ್ಟವಾಗಬಹುದು. ಯಾರೆಲ್ಲ ನಾಯಕರು ಲಾಕ್‌ಡೌನ್ ಪರವಾಗಿದ್ದಾರೆಯೋ, ಅವರೆಲ್ಲ ಜನಸಾಮಾನ್ಯರಿಗೆ ಸೂಕ್ತ ನೆರವಿನ ವ್ಯವಸ್ಥೆಯನ್ನು ಮಾಡುವ ಹೊಣೆಗಾರಿಕೆಯನ್ನೂ ಹೊರಬೇಕು. ಒಂದೆಡೆ, ಸರಕಾರದ ಪ್ಯಾಕೇಜ್‌ನಿಂದ ಜನಸಾಮಾನ್ಯರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಆರೋಪಿಸುತ್ತಾ, ಮತ್ತೊಂದೆಡೆ ಲಾಕ್‌ಡೌನ್‌ನ್ನು ಬೆಂಬಲಿಸುವುದು ಬಡವರಿಗೆ ಮಾಡುವ ವಂಚನೆಯಾಗಿದೆ. ಇಂದು ಕೇರಳ, ತಮಿಳುನಾಡಿನಂತಹ ರಾಜ್ಯಗಳು ಲಾಕ್‌ಡೌನ್‌ಗಳನ್ನು ಘೋಷಿಸಿವೆಯಾದರೂ, ನೇರವಾಗಿ ಬಡವರನ್ನೇ ಗುರಿಯಾಗಿಟ್ಟು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿವೆ. ತಮ್ಮ ಜನರ ಪರವಾಗಿ ಕೇಂದ್ರದ ಜೊತೆಗೆ ಗುದ್ದಾಡಿ ಅನುದಾನಗಳನ್ನು ಅವುಗಳು ಕಿತ್ತುಕೊಳ್ಳುತ್ತಿವೆ.

ಆದುದರಿಂದಲೇ, ಲಾಕ್‌ಡೌನ್ ವಿಷಯದಲ್ಲಿ ಇತರ ರಾಜ್ಯಗಳ ಜೊತೆಗೆ ಕರ್ನಾಟಕ ಸ್ಪರ್ಧಿಸುವಂತಿಲ್ಲ. ಹಾಗೆ ಸ್ಪರ್ಧಿಸುವುದೇ ಆಗಿದ್ದರೆ, ಲಾಕ್‌ಡೌನ್‌ನ ಸಂದರ್ಭದಲ್ಲಿ ಉಳಿದ ರಾಜ್ಯಗಳು ಹಾಕಿಕೊಂಡ ಜನಪ್ರಿಯ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲೂ ಅನುಷ್ಠಾನಗೊಳಿಸಲು ಮುಂದಾಗಬೇಕು. ಆದರೆ ಸರಕಾರದ ಕಾಟಾಚಾರದ ಪ್ಯಾಕೇಜ್‌ನಲ್ಲಿ ಅದಕ್ಕೆ ಯಾವ ಅವಕಾಶವೂ ಇಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆ ಇನ್ನಷ್ಟು ಸುಧಾರಣೆಗೊಂಡು, ಹೆಚ್ಚು ಜನರಿಗೆ ಆಹಾರ ತಲುಪುವಂತೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಆದರೆ, ಲಾಕ್‌ಡೌನ್ ಹೊತ್ತಿನಲ್ಲೇ, ವಿವಿಧ ಕಾರಣಗಳನ್ನು ಮುಂದೊಡ್ಡಿ ಅಂತ್ಯೋದಯ, ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸರಕಾರ ಒಂದು ಕೈಯಲ್ಲಿ ಯೋಜನೆಗಳನ್ನು ಘೋಷಿಸುತ್ತಾ ಇನ್ನೊಂದು ಕೈಯಲ್ಲಿ ಅವುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಜನರು ಆರೋಪಿಸುತ್ತಾರೆ. ಕೊಟ್ಟಂತೆ ಮಾಡಿ, ಹಿಂದೆಗೆದುಕೊಳ್ಳುವ ಸರಕಾರದ ಈ ಕ್ರಮ ಅಮಾನವೀಯವಾಗಿದೆ. ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎನ್ನುವ ನೆಪವನ್ನು ಮುಂದೊಡ್ಡಿ ಕಾರ್ಡ್‌ಗಳನ್ನು ಪರಿವರ್ತನೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಒಂದು ವೇಳೆ, ಈ ಕಾರ್ಡ್‌ಗಳಲ್ಲಿ ಅನರ್ಹರು ಸೇರಿಕೊಂಡಿದ್ದಾರೆ ಎಂದಿದ್ದರೂ, ಈ ಆಪತ್ಕಾಲದಲ್ಲಿ ಅವರಿಂದ ಕಾರ್ಡ್‌ಗಳನ್ನು ಕಿತ್ತುಕೊಳ್ಳುವುದು ಸರಿಯಲ್ಲ.

ಅರ್ಹರೂ ಇದರಿಂದ ಅನ್ಯಾಯಕ್ಕೊಳಗಾಗಬಹುದು. ಈ ಹಿಂದೆ ಆಧಾರ್‌ಕಾರ್ಡ್‌ನ ನೆಪವೊಡ್ಡಿ ಬಡವರಿಗೆ ಆಹಾರ ಪದಾರ್ಥಗಳು ನೀಡದೆ ಇದ್ದುದರಿಂದ ಆದ ಅನಾಹುತಗಳನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳಬೇಕು. ಲಾಕ್‌ಡೌನ್‌ನಿಂದಾಗಿ ಬಡವರು, ದಿನಗೂಲಿಗಳಷ್ಟೇ ಅತಂತ್ರರಾಗಿರುವುದಲ್ಲ. ದೈನಂದಿನ ಬದುಕಿಗೆ ಅತ್ಯವಶ್ಯವಾಗಿರುವ ಇನ್ನಿತರ ಅಂಗಡಿಗಳ ವರ್ತಕರೂ ಕಂಗಾಲಾಗಿ ಕೂತಿದ್ದಾರೆ. ಒಂದೆಡೆ ಇವರು ತಂದಿಟ್ಟ ವಸ್ತುಗಳು ಅಪ್ರಸ್ತುತವಾಗುತ್ತಿವೆ. ಬಟ್ಟೆ ಅಂಗಡಿಗಳಲ್ಲಿ ತಂದಿಟ್ಟ ಕೋಟ್ಯಂತರ ಬೆಲೆ ವಸ್ತ್ರಗಳು ಲಾಕ್‌ಡೌನ್‌ನಿಂದಾಗಿ ಗೋಡೌನ್‌ನಲ್ಲಿ ಧೂಳು ಹಿಡಿಯುತ್ತಿವೆ. ಇದೇ ಸಂದರ್ಭದಲ್ಲಿ ಪೀಠೋಪಕರಣಗಳನ್ನು ಮಾರುವವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಾಲಸೋಲ ಮಾಡಿ ಅಂಗಡಿಗೆ ವಸ್ತುಗಳನ್ನು ತುಂಬಿಸಿದವರು ಇದೀಗ ಇರುವ ವಸ್ತುಗಳನ್ನು ಮಾರಲಾಗದೆ, ಸಾಲವನ್ನೂ ಕಟ್ಟಲಾಗದೆ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ನಾಳೆ ಲಾಕ್‌ಡೌನ್ ಸಡಿಲವಾದರೂ, ಇವರ ಬದುಕು ಹಳಿಗೆ ಬರುವುದು ಕಷ್ಟವೆನ್ನುವಂತಹ ಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಇಂತಹ ಅಂಗಡಿಗಳನ್ನೇ ನೆಚ್ಚಿಕೊಂಡಿರುವ ಸಾವಿರಾರು ಯುವ ನೌಕರರಿದ್ದಾರೆ. ಪದವೀಧರರಲ್ಲದ ಹತ್ತನೇ ತರಗತಿ, ಪಿಯುಸಿ ಕಲಿತವರಿಗೆ ಉದ್ಯೋಗಗಳನ್ನು ನೀಡುತ್ತಿರುವುದು ಇಂತಹ ಅಂಗಡಿಗಳು. ಇವರೆಲ್ಲರೂ ನೌಕರಿಯಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಲಾಕ್‌ಡೌನ್ ತೆರವಾದ ಬಳಿಕವೂ ಆ ನೌಕರಿ ಸಿಗುತ್ತದೆ ಎಂಬ ಧೈರ್ಯ ಇವರಿಗಿಲ್ಲ. ಇವರೆಲ್ಲರಿಗೂ ಸರಕಾರ ಯಾವ ರೀತಿಯಲ್ಲಿ ನೆರವಾಗುತ್ತದೆ?

ಲಾಕ್‌ಡೌನ್ ಸಂದರ್ಭದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಿ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಹತಾಶರಾಗಿರುವ ಜನರ ಮೇಲೆ ಪೊಲೀಸರಿಗೆ ದಬ್ಬಾಳಿಕೆ ನಡೆಸಲು ಸೂಚನೆ ನೀಡುವುದು ಕೊರೋನಾ ತಡೆಯುವ ಮಾರ್ಗ ಖಂಡಿತಾ ಅಲ್ಲ್ಲ. ಇದನ್ನು ತುರ್ತುಪರಿಸ್ಥಿತಿಯೆಂದು ಕರೆಯಬೇಕಾಗುತ್ತದೆ. ಪೊಲೀಸರು ಈ ಸಂದರ್ಭದಲ್ಲಿ ಜನರಿಗೆ ಮಾರ್ಗದರ್ಶನ ನೀಡಬೇಕೇ ಹೊರತು, ಅವರ ಮೇಲೆ ದೌರ್ಜನ್ಯ ಎಸಗುವುದಲ್ಲ. ಅಂತಹ ದೌರ್ಜನ್ಯ ಎಸಗಲು ಜನಸಾಮಾನ್ಯರು ರೌಡಿಗಳೋ, ಗೂಂಡಾಗಳೋ ಅಲ್ಲ. ಜೊತೆಗೆ ಮಾಸ್ಕ್ ಧರಿಸಿಲ್ಲ, ಕೊರೋನ ನಿಬಂಧನೆ ಪಾಲಿಸಿಲ್ಲ ಎಂದು ಬಡವರ ಕೈಯಿಂದ ದಂಡ ವಸೂಲಿ ಮಾಡುವುದು ಜನರ ಗಾಯದ ಮೇಲೆ ಬರೆ ಎಳೆದಂತೆ. ಲಾಕ್‌ಡೌನ್‌ನಿಂದಾಗಿ ದಿನಸಿ ಸಾಮಾನುಗಳನ್ನು ಕೊಳ್ಳುವುದಕ್ಕೆ ದುಡ್ಡಿಲ್ಲದ ಜನರ ಕೈಯಿಂದ ದಂಡದ ಹೆಸರಲ್ಲಿ ಹಣ ಕಿತ್ತುಕೊಳ್ಳುವುದು, ಪರೋಕ್ಷವಾಗಿ ಸರಕಾರ ಖಜಾನೆ ತುಂಬಿಸಲು ಕಿಸೆಗಳ್ಳತನದ ಮಟ್ಟಕ್ಕೆ ಇಳಿದಂತೆಯೇ ಸರಿ. ಆದುದರಿಂದ, ಲಾಕ್‌ಡೌನ್‌ನ ಹಿಂದಿರುವ ಮಾನವೀಯ ಉದ್ದೇಶವನ್ನು ಪಾಲಿಸುವುದಕ್ಕೆ ಪೊಲೀಸ್ ಇಲಾಖೆಗೆ ಸರಕಾರ ಸೂಚನೆ ನೀಡಬೇಕು. ಕೊರೋನದಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಲಾಕ್‌ಡೌನ್ ಹೇರಲಾಗಿದೆಯೇನೋ ನಿಜ. ಹಾಗೆಂದು ಜನರ ಪಾಲಿಗೆ ಕೊರೋನಕ್ಕಿಂತ ಲಾಕ್‌ಡೌನ್ ಭೀಕರವಾಗಿ ಕಾಡುವಂತಾದರೆ, ಲಾಕ್‌ಡೌನ್‌ನ ಉದ್ದೇಶವೇ ವಿಫಲವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News