ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೋವಿಡ್ ಚಿಕಿತ್ಸೆಗೆ 5.5 ಕೋಟಿ ರೂ. ನೆರವು: ಸಚಿವ ನಿರಾಣಿ

Update: 2021-05-22 18:26 GMT

ಬೆಂಗಳೂರು, ಮೇ 22: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕು ನಿಯಂತ್ರಿಸಲು ಕೋವಿಡ್ ಚಿಕಿತ್ಸೆಗಾಗಿ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್, ಔಷಧಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ ಇಲಾಖೆ ವತಿಯಿಂದ 5.5 ಕೋಟಿ ರೂ.ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರಾಗೇಶ್ ಆರ್ ನಿರಾಣಿ ತಿಳಿಸಿದ್ದಾರೆ.

ಶನಿವಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಿಭಾಗ ಮಟ್ಟಕ್ಕೆ 2ರಂತೆ 10 ಆಕ್ಸಿಜನ್ ಟ್ಸಾಂಕರ್, 10 ಆಕ್ಸಿಜನ್ ಜನರೇಟರ್‍ಗಳನ್ನು ಖರೀದಿಸಲು ಕ್ರಮ ವಹಿಸಲಾಗಿದೆ. 1 ಸಾವಿರ ಆಮ್ಲಜನಕ ಸಾಂದ್ರಕ ಖರೀದಿಸಲು ಯೋಜಿಸಲಾಗಿದ್ದು, ಮೊದಲು 100 ಆಮ್ಲಜನಕ ಸಾಂದ್ರಕ ಖರೀದಿಸಲಾಗಿದೆ. ಅದರ ಕಾರ್ಯವೈಖರಿ ಗುಣಮಟ್ಟ ನೋಡಿ ಉಳಿದ ಆಮ್ಲಜನಕ ಸಾಂದ್ರಕವನ್ನು ಖರೀದಿಸಲಾಗುವುದು ಎಂದರು.

ಹೊಸದಾಗಿ ಆಕ್ಸಿಜನ್ ಜನರೇಟರ್ ಯುನಿಟ್ ಬದಲು ಮುವಿಂಗ್ ಆಕ್ಸಿಜನ್ ಜನರೇಟರ್ ಖರೀದಿಗೆ ಯೋಜಿಸಲಾಗುತ್ತಿದೆ ಇದರಿಂದ ಜಿಲ್ಲಾ ಮಟ್ಟದಿಂದ ಆಮ್ಲಜನಕ ಜನರೇಟರ್ ಅನ್ನು ತಾಲೂಕುಗಳಿಗೆ ತೆಗೆದುಕೊಂಡಿ ಹೋಗಿ ಅವಶ್ಯಕತೆಗೆ ತಕ್ಕಂತೆ 300-500 ಸಿಲಿಂಡರ್‍ಗಳನ್ನು ತುಂಬಿಸಿ ಬರಬಹುದು ಎಂದು ಸಚಿವ ನಿರಾಣಿ, ಮಾರುಕಟ್ಟೆಯಲ್ಲಿ ಲಸಿಕೆ ಅಭಾವ ಇರುವ ಕಾರಣ, ರಾಜ್ಯದಲ್ಲಿ ಕೊರೋನ ಲಸಿಕೆ ಸಮಸ್ಯೆ ಎದುರಾಗಿದ್ದು, ಸದ್ಯದಲ್ಲೇ ಇತ್ಯಾರ್ಥವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಣಕಾಸಿನ ಸಮಸ್ಯೆ ಇಲ್ಲ: ಮಾರುಕಟ್ಡಯಲ್ಲಿ ಲಸಿಕೆ ಸಿಗುತ್ತಿಲ್ಲ. ರಾಜ್ಯ ಸರಕಾರ ಸತತ ಪ್ರಯತ್ನದಲ್ಲಿದ್ದು ಆದಷ್ಟು ಬೇಗ ಲಸಿಕೆ ರಾಜ್ಯಕ್ಕೆ ಬರಲಿದೆ. ಲಸಿಕೆ ಖರೀದಿಸಲು ಹಣದ ಕೊರತೆ ಇಲ್ಲ, ಆದರೆ, ಏಕಾಏಕಿ ಸೋಂಕಿತರ ಸಂಖ್ಯೆ 
ಹೆಚ್ಚಳವಾಗಿರುವ ಕಾರಣ, ತಾತ್ಕಾಲಿಕ ಸಮಸ್ಯೆ ಬಂದಿದೆ. ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿರುವ ಕಾರಣ ಎಲ್ಲವೂ ಬಗೆಹರಿದೆ ಎಂದು ಅವರು ತಿಳಿಸಿದರು.

ಲಸಿಕೆ ಖರೀದಿಸಲು ಹಣಕಾಸಿನ ಸಮಸ್ಯೆ ಇಲ್ಲ. ಪ್ರತಿಯೊಬ್ಬರು ಉತ್ತಮ ಚಿಕಿತ್ಸೆ ನೀಡುವುದು ಸರಕಾರ ಬದ್ಧವಾಗಿದೆ. ಇದರಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಮೊದಲು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಲಸಿಕೆ ಇಲ್ಲ ಎಂದು ಹೇಳ್ತಿದ್ದಾರೆ. ಇದು ರಾಜಕೀಯ ಮಾಡುವ ಸಮಯ ಅಲ್ಲ, ಸರಕಾರಕ್ಕೆ ಸಲಹೆ ಕೊಡಲಿ. ಈ ಸಮಯದಲ್ಲಿ ಟೀಕೆ ಮಾಡುವದು ಬೇಡ  ಎಂದು ನಿರಾಣಿ ಕಿವಿಮಾತು ಹೇಳಿದರು.

ಡಿಜಿಎಂಎಸ್ ಪರವಾನಿಗೆ ಕಡ್ಡಾಯ: ಜಿಲ್ಲೆಯಲ್ಲಿ 110 ಬಿಲ್ಡಿಂಗ್ ಸ್ಟೋನ್ ಕ್ರಷರ್‍ಗಳಿದ್ದು, 53 ಕ್ರಷರ್‍ಗಳಿದ್ದು, 13 (ಡೈರೆಕ್ಟರ್ ಜನರಲ್ ಆಫ್ ಮೈನ್ಸ್ ಸೇಫ್ಟಿ) ಡಿಜಿಎಂಎಸ್ ಪರವಾನಿಗೆ ಹೊಂದಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಪುರದಲ್ಲಿ ನಡೆದ ಘಟನೆಯಿಂದ ಡಿಜಿಎಂಎಸ್ ಪರವಾನಗಿ ಕಡ್ಡಾಯ ಮಾಡಲಾಗಿದೆ. ರಾಜ್ಯದಲ್ಲಿ ಶೇ.5ರಷ್ಟು ಗಣಿಗಾರಿಕೆ ನಡೆಸುವವರ ಬಳಿ ಮಾತ್ರ ಡಿಜಿಎಂಎಸ್ ಪರವಾನಿಗೆ ಇರುತ್ತದೆ ಉಳಿದ ಗಣಿಗಾರಿಕೆ ನಡೆಸುವವರು ಡಿಜಿಎಂಎಸ್ ಪರವಾನಿಗೆ ಪಡೆದುಕೊಳ್ಳಲು 90 ದಿನ ಕಾಲಾವಕಾಶ ನೀಡಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ ಎಂದರು.

ಬಹಳಷ್ಟು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಗಣಿಕಾರಿಕೆ ಸಂಬಂಧಿಸಿದಂತೆ ಯಾವುದೇ ಅನಾಹುತ ಸಂಭವಿಸದಂತೆ ಗಣಿ ಮಾಲಕರಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡಲಾಗುತ್ತಿದೆ ಎಂದ ಅವರು, ಹೊಸದಾಗಿ ನ್ಯೂ ಮೈನಿಂಗ್ ಪಾಲಿಸಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ವಿಭಾಗೀಯವಾರು ಮೈನಿಂಗ್ ಅದಾಲತ್‍ನ್ನು ಲಾಕ್‍ಡೌನ್ ತೆರವುಗೊಳಿಸಿದ ನಂತರ ನಡೆಸಲಾಗುವುದು ಎಂದರು.

ಇದರಿಂದ ಗಣಿಗಾರಿಕೆಗೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಸ್ಥಳೀಯವಾಗಿ ನಿವಾರಿಸಬಹುದು. ಸಿಂಗಲ್ ವಿಂಡೋ ಸಿಸ್ಟಂ ಜಾರಿಗೆ ತಂದು ಗಣಿಗಾರಿಕೆಗೆ ಅರ್ಜಿ ಸಲ್ಲಿಸುವವರು ಬೇರೆ ಬೇರೆ ಇಲಾಖೆಗೆ ಹೋಗಿ ಎನ್‍ಓಸಿ ತರುವುದನ್ನು ತಪ್ಪಿಸಿ ಸಮಯ ಉಳಿತಾಯ ಮಾಡಬಹುದು. ಗಣಿಗಾರಿಕೆ ಹಾಗೂ ಡೀಮ್ಡ್ ಅರಣ್ಯ ಕುರಿತು ತೊಂದರೆಗಳಿವೆ. ಗಣಿಗಾರಿಕೆಗೆ ಪರವಾನಿಗೆ ನೀಡಿ ನಂತರ ಸ್ಥಳ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಬರುತ್ತದೆ ಎಂಬ ಗೊಂದಲಗಳಿದ್ದು, ಅದನ್ನು ನಿವಾರಿಸಲು ಕೇಂದ್ರ ಗಣಿಗಾರಿಕೆ ಸಚಿವ ಪ್ರಹ್ಲಾದ್ ಜೋಷಿ, ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಸರಕಾರದ ಹಿರಿಯ ಅಧಿಕಾರಿಗಳು ಸೇರಿ ಸಭೆ ನಡೆಸಿ ಪರಿಹರಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಜವರೇಗೌಡ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News