'ಕಪ್ಪು ದಿನ' ಆಚರಣೆ ಬೆಂಬಲಿಸಿ ಹರ್ಯಾಣದಿಂದ ದಿಲ್ಲಿಯತ್ತ ಹೊರಟ ಸಾವಿರಾರು ರೈತರು

Update: 2021-05-23 09:21 GMT
ಸಾಂದರ್ಭಿಕ ಚಿತ್ರ

ಚಂಡೀಗಢ: ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ದಿಲ್ಲಿ ಗಡಿ ಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಮೇ 26ಕ್ಕೆ ಆರು ತಿಂಗಳು ಪೂರ್ಣವಾಗಲಿದೆ. ಮೇ 26 ರಂದು 'ಕಪ್ಪು ದಿನ' ಆಚರಿಸಲು ರೈತ ಸಂಘಟನೆಗಳು ನಿರ್ಧರಿಸಿದ್ದು, ಇದನ್ನು ಬೆಂಬಲಿಸಿ ಸಾವಿರಾರು ರೈತರು ರವಿವಾರ  ಹರಿಯಾಣದ ಕರ್ನಾಲ್ ನಿಂದ ದಿಲ್ಲಿಯ ಸಿಂಘು ಗಡಿಯತ್ತ ಹೊರಟಿದ್ದಾರೆ.

ಭಾರತ್ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ಗುರ್ನಮ್ ಸಿಂಗ್ ಚಾರುನಿ ನೇತೃತ್ವದಲ್ಲಿ, ರೈತರುಗಳು ಕರ್ನಾಲ್‌ನ ಬಸ್ತಡಾ ಟೋಲ್ ಪ್ಲಾಜಾದಿಂದ ನೂರಾರು ವಾಹನಗಳಲ್ಲಿ ಹೊರಟಿದ್ದಾರೆ.  ದಿಲ್ಲಿ  ಗಡಿಯನ್ನು ತಲುಪಿದ ನಂತರ ಅವರು ಒಂದು ವಾರ ಲಂಗರ್ ಸೇವೆಯನ್ನು ಮಾಡುತ್ತಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

"ರೈತರು ಕರ್ನಾಲ್ ನಿಂದ ಹೊರಟಿದ್ದಾರೆ. ಇದರಿಂದ ದಿಲ್ಲಿಯ ವಿವಿಧ ಜಿಲ್ಲೆಗಳಲ್ಲಿನ ಆಂದೋಲನವು ಉತ್ತಮವಾಗಿ ನಡೆಯಲಿದೆ" ಎಂದು ಚಾರುನಿ  ಹೇಳಿದರು.

ರಾಜ್ಯದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹರಿಯಾಣದಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಹರಿಯಾಣದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಂದಾಗಿಯೇ  ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಉಲ್ಬಣಗೊಂಡಿದೆ  ಎಂದು ರಾಜ್ಯ ಸರಕಾರ ಆರೋಪಿಸಿದೆ.

ಕಳೆದ ವರ್ಷ ಅಂಗೀಕರಿಸಿದ ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

"ಸರಕಾರ ತನ್ನದೇ ಆದ ಅಸಮರ್ಥತೆಯನ್ನು ಮರೆಮಾಚಲು ರೈತರನ್ನು ದೂಷಿಸುತ್ತಿದೆ. ಸರಕಾರದ ಬಳಿ ಕೊರೋನ ರೋಗಿಗಳಿಗೆ ನೀಡಲು  ಆಂಬ್ಯುಲೆನ್ಸ್‌ಗಳು, ಹಾಸಿಗೆಗಳು ಅಥವಾ ಆಸ್ಪತ್ರೆಗಳಿಲ್ಲ. ನಮಗೆ ನಮ್ಮದೇ ಆದ ನಿರ್ಬಂಧಗಳಿವೆ, ಆದರೆ ಜನಸಂದಣಿಯನ್ನು ಒಟ್ಟುಗೂಡಿಸುವ ಕಾರ್ಯಕ್ರಮಗಳನ್ನು ಸರಕಾರ ಏಕೆ ಆಯೋಜಿಸುತ್ತಿದೆ? "ಎಂದು ಚಾರುನಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News