ಮೇ 24ರಂದು ಮನೆ ಮುಂಭಾಗ ಖಾಲಿ ತಟ್ಟೆ, ಚೀಲ ಹಿಡಿದು ಜನಾಗ್ರಹ ಆಂದೋಲನ ವತಿಯಿಂದ ಪ್ರತಿಭಟನೆ

Update: 2021-05-23 12:58 GMT

ಬೆಂಗಳೂರು, ಮೇ 23: ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್‍ಗೆ ಉಚಿತ ಚಿಕಿತ್ಸೆಗೆ ಒತ್ತಾಯಿಸಿ ಜನಾಗ್ರಹ ಆಂದೋಲನ ವತಿಯಿಂದ ನಾಳೆ(ಮೇ 24)ರಂದು ಬೆಳಗ್ಗೆ 9ಕ್ಕೆ ಜನತೆ ತಮ್ಮ ಮನೆಯ ಮುಂಭಾಗ ಖಾಲಿ ತಟ್ಟೆ, ಖಾಲಿ ಚೀಲಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕೋವಿಡ್‍ನಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಸರಕಾರ ಜನತೆಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಜನಾಗ್ರಹ ಆಂದೋಲನ ವತಿಯಿಂದ ನಾವೂ ಬದುಕಬೇಕು ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್ ರೋಗಕ್ಕೆ ಉಚಿತ ಚಿಕಿತ್ಸೆಯ ಜತೆಗೆ ಎಲ್ಲಾ ಬಿಪಿಎಲ್ ಜನರಿಗೂ [ಕೇವಲ ಅಕ್ಕಿಯಷ್ಟೇ ಅಲ್ಲದೆ ಎಣ್ಣೆ, ಬೇಳೆಕಾಳು ಒಳಗೊಂಡಂತೆ] ಸಮಗ್ರ ದಿನಸಿ ಕಿಟ್ ವಿತರಿಸಬೇಕು ಹಾಗೂ ಮಾಸಿಕ 5 ಸಾವಿರ ರೂ. ನೆರವು ಧನ ನೀಡುವುದು ಸರಕಾರದ ಆದ್ಯ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಸಾವು-ನೋವಿನಿಂದ ಅನಾಥಗೊಂಡ ಕುಟುಂಬಗಳಿಗೆ ಬದುಕನ್ನು ಕಟ್ಟಿಕೊಳ್ಳಲು 5 ಲಕ್ಷ ರೂ.ಪರಿಹಾರ ನೀಡಬೇಕು. ಚಾಮರಾಜನಗರ ಮತ್ತು ಇತರೆಡೆ ಸರಕಾರದ ವೈಫಲ್ಯದಿಂದ ಸಾವಿಗೀಡಾದ ಜನರ ಕುಟುಂಬಗಳಿಗೆ 10 ಲಕ್ಷ ರೂ.ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ,

ಕೋವಿಡ್ ಲಾಕ್‍ಡೌನ್‍ನಿಂದಾಗಿ ಬೆಳೆ ವ್ಯರ್ಥಗೊಂಡಿರುವ ರೈತರಿಗೆ ಪರಿಹಾರ ಹೆಚ್ಚಿಸಬೇಕು ಮತ್ತು ಬೀಜ, ಗೊಬ್ಬರದ ಮೇಲೆ ವಿಶೇಷ ಸಬ್ಸಿಡಿ ಘೋಷಿಸಬೇಕೆಂದು ತಜ್ಞರ ಮತ್ತು ಆಡಳಿತಧಿಕಾರಿಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹಕ್ಕೊತ್ತಾಯಗಳನ್ನು ಸರಕಾರದ ಮುಂದಿಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಈ ಜನಾಗ್ರಹ ಆಂದೋಲನಕ್ಕೆ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಹೋರಾಟಗಾರರಾದ ಸಿದ್ದನಗೌಡ ಪಾಟೀಲ್, ಚಾಮರಸ ಮಾಲೀ ಮಾಟೀಲ್, ಎಚ್.ಆರ್.ಬಸವರಾಜಪ್ಪ, ಯೂಸೂಫ್‍ ಕನ್ನಿ, ಯಾಸೀನ್ ಮಲ್ಪೆ, ನೂರ್ ಶ್ರೀಧರ್, ಮಾವಳ್ಳಿ ಶಂಕರ್, ಸ್ವರ್ಣ ಭಟ್ ನೇತೃತ್ವ ವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News