ಕೊರೋನ ಸಂಕಷ್ಟ ಪರಿಹರಿಸುವ ಪ್ಯಾಕೇಜ್ ಗಾಗಿ ಜನಾಗ್ರಹ ಆಂದೋಲನ: 'ನಾವೂ ಬದುಕಬೇಕು' ಘೋಷವಾಕ್ಯದಡಿ ಜನ ಚಳವಳಿ

Update: 2021-05-24 17:47 GMT

ಬೆಂಗಳೂರು, ಮೇ 25: `ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ, ಎಲ್ಲರಿಗೂ ವ್ಯಾಕ್ಸಿನ್, ಎಲ್ಲ ಬಡವರಿಗೆ ಅಕ್ಕಿಯೊಂದಿಗೆ ಎಣ್ಣೆ, ದಿನಸಿ ಒದಗಿಸಬೇಕು ಹಾಗೂ ಮಾಸಿಕ 5 ಸಾವಿರ ರೂ.ನೆರವು ಹಾಗೂ ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ 5 ಲಕ್ಷ ರೂ.ಪರಿಹಾರ, ಕೋವಿಡ್ ಲಾಕ್‍ಡೌನ್‍ನಿಂದ ನಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡಬೇಕು' ಎಂದು ಆಗ್ರಹಿಸಿ `ಜನಾಗ್ರಹ ಆಂದೋಲನ' ಹಮ್ಮಿಕೊಂಡಿದ್ದ `ಖಾಲಿ ತಟ್ಟೆ, ಖಾಲಿ ಚೀಲ' ಹೋರಾಟಕ್ಕೆ ಭಾರಿ ಜನಬೆಂಬಲ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗೆಯಿಂದ ರಾಜಧಾನಿ ಬೆಂಗಳೂರು, ಮೈಸೂರು, ಬೆಳಗಾವಿ, ರಾಯಚೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ `ನಾವೂ ಬದುಕಬೇಕು' ಎಂಬ ಘೋಷಣೆಯೊಂದಿಗೆ ಆಂದೋಲನದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಜನರ ಜೀವ ಉಳಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಜನರ ಜೀವನೋಪಾಯಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿ ಜನರು ತಮ್ಮ ತಮ್ಮ ಮನೆಗಳ ಮುಂದೆ ಖಾಲಿ ತಟ್ಟೆ, ಲೋಟ ಬಡಿದು, ಖಾಲಿ ಚೀಲಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಸೋಂಕು ಮತ್ತು ಸರಕಾರ ಹೇರಿರುವ ಲಾಕ್‍ಡೌನ್ ಜನರ ಜೀವ ಮತ್ತು ಬದುಕು ಎರಡನ್ನು ಕಸಿದುಕೊಂಡಿದೆ. ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್, ಅಗತ್ಯ ಚಿಕಿತ್ಸೆ ಒದಗಿಸಬೇಕಾದ ಸರಕಾರ ನಿರ್ಲಕ್ಷ್ಯತೆ ವಹಿಸಿದೆ. ಮತ್ತೊಂದೆಡೆ ಬಡ ಜನರನ್ನು ಅವಮಾನಿಸುವ ರೀತಿಯಲ್ಲಿ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ಜನಾಗ್ರಹ ಆಂದೋಲನ ಆಕ್ಷೇಪಿಸಿದೆ.

ರಾಜ್ಯದಲ್ಲಿನ ಎಲ್ಲ ಬಡವರಿಗೆ ತಿಂಗಳ ಸಮಗ್ರ ದಿನಸಿ, ಮಾಸಿಕ 5 ಸಾವಿರ ರೂ.ಪರಿಹಾರ, ಉದ್ಯೋಗವಿಲ್ಲದ ಶಿಕ್ಷಕರು, ಉಪನ್ಯಾಸಕರು, ಪತ್ರಕರ್ತರು, ವಕೀಲರು ಸೇರಿದಂತೆ ಇನ್ನಿತರ ವೃತ್ತಿಪರರಿಗೆ ನೆರವು ನೀಡಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾಗೂ ಕೃಷಿ ಉಪಕರಣಗಳ ಬೆಲೆ ತಗ್ಗಿಸಬೇಕು ಹಾಗೂ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಜನಾಗ್ರಹ ಆಂದೋಲನ ಆಗ್ರಹಿಸಿದೆ.

ರಾಜ್ಯದ 31 ಜಿಲ್ಲೆಗಳ 102 ತಾಲೂಕುಗಳಲ್ಲಿ ಜನರು ಚಳವಳಿ ನಡೆಸಿದ್ದು, ಜನರು ಬೆಳಗ್ಗೆಯಿಂದಲೇ ಖಾಲಿ ತಟ್ಟೆ ಹಾಗೂ ಖಾಲಿ ಚೀಲಗಳೊಂದಿಗೆ ಬೀದಿಗೆ ಬಂದು ಪ್ರತಿಭಟಿಸಿದ್ದಾರೆ. ಬಡ ಮಹಿಳೆಯರು ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಹಲವರು ಮುಖ್ಯಮಂತ್ರಿ ಯಡಿಯೂರಪ್ಪನವರೇ, `ಬದುಕೋದು ಕಷ್ಟವಾಗಿದೆ, ಏನಾದರೂ ಮಾಡಿ, ರೊಕ್ಕವಾದ್ರೂ ಹಾಕಿ' ಅಂತ ಆಗ್ರಹಿಸಿದ್ದಾರೆ.

ಜನಾಗ್ರಹ ಆಂದೋಲನಕ್ಕೆ ಕಾಂಗ್ರೆಸ್ ಸಹಿತ ರೈತ ಸಂಘ, ದಲಿತ ಸಂಘಟನೆಗಳು ಸೇರಿದಂತೆ ಅನೇಕ ಜನಪರ ಸಂಘಟನೆಗಳು ಹಾಗೂ ಪರ್ಯಾಯ ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ. ಈಗಾದರೂ ಸರಕಾರ ಜನರ ಆಗ್ರಹಕ್ಕೆ ಕಿವಿಗೊಡಬೇಕಿದೆ. ಇಲ್ಲವಾದರೆ `ಈ ಬಾರಿ ನಮ್ಮ ಮನೆಗಳ ಮುಂದೆ, ಮುಂದಿನ ಬಾರಿ ನಿಮ್ಮ ಮನೆಗಳ ಮುಂದೆ' ಎಂಬ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಮುಖ್ಯಮಂತ್ರಿಗೆ ಇದೇ ವೇಳೆ ನೀಡಿದರು.

ಈ ಆಂದೋಲನದಲ್ಲಿ ಮುಖಂಡರಾದ ಮಾವಳ್ಳಿ ಶಂಕರ್, ಸ್ವರ್ಣ ಭಟ್, ಕೆ.ಎಲ್.ಅಶೋಕ್, ಎಚ್.ಆರ್.ಬಸವರಾಜಪ್ಪ, ಯೂಸೂಫ್ ಕನ್ನಿ, ಚಾಮರಸ ಮಾಲೀಪಾಟೀಲ್, ಶಸಿಕಾಂತ್ ಸೆಂದಿಲ್, ಸಿದ್ದನಗೌಡ ಪಾಟೀಲ್, ಯಾಸಿನ್ ಮಲ್ಪೆ ಮತ್ತು ನೂರ್ ಶ್ರೀಧರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

`ಮುಖ್ಯಮಂತ್ರಿ ಯಡಿಯೂರಪ್ಪ ಇಲ್ಲಿ ಬಾ ನಮ್ಮ ಕಷ್ಟ ನೋಡು, ನಮ್ಮಿಂದ ನೀವು, ನಿಮ್ಮಿಂದ ನಾವಲ್ಲ, ಏಯ್ ಯಡಿಯೂರಪ್ಪ ಎಲ್ಲಿ ಹೋಗಿದ್ದೀ..' ಎಂದು ಪ್ರತಿಭಟನಾನಿರತ ಮಹಿಳೆಯರು ತಮ್ಮ ಸಂಕಟವನ್ನು ಹೊರಹಾಕಿದರು. ಇದೇ ವೇಳೆ ಪ್ರತಿಭಟನಾಕಾರರು ಆಂದೋಲನ ಸಿದ್ಧಪಡಿಸಿರುವ ಪೋಸ್ಟರ್ ಪತ್ರಗಳನ್ನು ಸಿಎಂ ಆಪ್ತ ಕಾರ್ಯದರ್ಶಿಯವರ ವಾಟ್ಸ್ ಆ್ಯಪ್ ನಂಬರಿಗೆ ಜನರು ಕಳುಹಿಸಿದ್ದಾರೆ. ಅದರಲ್ಲಿ `ಕೋವಿಡ್ ನಮ್ಮ ಜೀವವನ್ನು ಅನಿಶ್ಚಿತಗೊಳಿಸಿದೆ. ಲಾಕ್‍ಡೌನ್ ನಮ್ಮ ಬದುಕನ್ನು ಅತಂತ್ರಗೊಳಿಸಿದೆ. ದುಡಿಮೆಯೂ ಇಲ್ಲ, ಕೈಯಲ್ಲಿ ಕಾಸೂ ಇಲ್ಲ. ತಲೆಯ ಮೇಲೆ ಸಾಲದ ಹೊರೆ ಮಾತ್ರ ಇದೆ. ಆಸ್ಪತ್ರೆಯಲ್ಲಿ ಬೆಡ್ಡಿಲ್ಲ, ಸ್ಮಶಾನದಲ್ಲಿ ಜಾಗವಿಲ್ಲ ಎಂಬಂತಾಗಿದೆ ನಮ್ಮ ಸ್ಥಿತಿ. ಖಾಸಗಿ ಆಸ್ಪತ್ರೆಗಳು ಸುಲಿಗೆ ನಡೆಸಿವೆ. ಸರಕಾರ ಕಣ್ಣುಮುಚ್ಚಿ ಕೂತಿದೆ. ಒಟ್ಟಿನಲ್ಲಿ ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ' ಎಂದು ಸರಕಾರದ ಗಮನ ಸೆಳೆದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಕೊರೋನ ಬ್ಯಾನಿ(ರೋಗ) ಎಂದು ಲಾಕ್‍ಡೌನ್ ಮಾಡಿದ್ದೀಯ. ನಮ್ಮ ಕೂಸು ಕುನ್ನಿಗಳು ಉಪವಾಸ, ನಮ್ಮ ಜೀವನ ಹೇಗೆ ನಡೆಯಬೇಕು. ನಮಗೆ ಊಟ ಯಾರು ಕೊಡಬೇಕು. ನಮ್ಮಿಂದು ನೀನು ಮುಖ್ಯಮಂತ್ರಿ ಆಗಿದ್ದೀಯ. ಬದುಕೋದು ಕಷ್ಟವಾಗಿದೆ, ಏನಾದರೂ ಮಾಡಿ, 5ಸಾವಿರ ರೂ. ರೊಕ್ಕ ಕೂಡಲೇ ನಮಗೆ ಹಾಕಬೇಕು. ಇಲ್ಲದೇ ಇದ್ದರೆ ನೀನು ಇರುವ ಬೆಂಗಳೂರಿಗೆ ನಾವು ಬರ್ತೀವಿ'

-ಸೋಮಕ್ಕ ಹಂಪಿ, ಕಮಲಾಪುರ ಬಳ್ಳಾರಿ

ಮೊದಲು ನಾವು ಮನೆಯಲ್ಲಿ ಹೋರಾಟ ಮಾಡಿದ್ದೇವೆ. ಈಗ ಮನೆಯ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಈಗ ಇದನ್ನು ಪರಿಗಣಿಸದಿದ್ದರೆ ಲಾಕ್‌ಡೌನ್ ಬಳಿಕ ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ

-ಕೆ.ಎಲ್.ಅಶೋಕ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News