ವ್ಯಕ್ತಿಯೋರ್ವರ ಮೇಲೆ ಗೋರಕ್ಷಕ ಗೂಂಡಾಗಳಿಂದ ಹಲ್ಲೆ: ಸಂತ್ರಸ್ತ ಶಕೀರ್‌ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು

Update: 2021-05-24 10:15 GMT
photo: ndtv

ಲಕ್ನೋ: ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕಟ್ಘರ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಮಾಂಸ ಸಾಗಾಟ ಮತ್ತು ಮಾರಾಟ ಉದ್ಯಮದಲ್ಲಿ ತೊಡಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಗೋರಕ್ಷಕರೆಂದು ಹೇಳಿಕೊಳ್ಳಲಾದ  ವ್ಯಕ್ತಿಗಳ ಗುಂಪೊಂದು ಹಲ್ಲೆ ನಡೆಸಿದೆ. ಸಂತ್ರಸ್ತ ಮೊಹಮ್ಮದ್ ಶಕೀರ್ ನ ಸೋದರ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಅದೇ ಸಮಯ ಸ್ವಯಂಪ್ರೇರಣೆಯಿಂದ ಸಂತ್ರಸ್ತನ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದಾರೆ.

ಪ್ರಾಣಿಯೊಂದನ್ನು ಹತ್ಯೆಗೈದು ಸೋಂಕು ವ್ಯಾಪಿಸುವ ಸಾಧ್ಯತೆಯ ಕೃತ್ಯವೆಸಗಿದ ಹಾಗೂ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪವನ್ನು ಸಂತ್ರಸ್ತನ ವಿರುದ್ಧ ಹೊರಿಸಲಾಗಿದೆ.

 ಶಕೀರ್ ಸದ್ಯ ತನ್ನ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಂದು ಆತನ ಕುಟುಂಬ ತಿಳಿಸಿದೆ. ಆದರೆ ಹಲ್ಲೆ ನಡೆಸಿದ ಗುಂಪಿನ ನೇತೃತ್ವ ವಹಿಸಿದ್ದ ಮನೋಜ್ ಠಾಕುರ್‍ನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಆದರೆ ಇತರ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ, ಇಬ್ಬರು ತಲೆಮರೆಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೀಡಿಯೋ ಆಧಾರದಲ್ಲಿ ಎಲ್ಲರನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಶಕೀರ್ ತನ್ನ ಸ್ಕೂಟರಿನಲ್ಲಿ 50 ಕೆಜಿ ಎಮ್ಮೆ ಮಾಂಸ ಸಾಗಿಸುತ್ತಿದ್ದಾಗ ಆತನನ್ನು ತಡೆದ ಆರೋಪಿಗಳು ಆತನಿಂದ ರೂ 50,000 ಬೇಡಿಕೆಯಿಟ್ಟು ಹಲ್ಲೆ ನಡೆಸಿ ನಂತರ ದೂರು ನೀಡದಂತೆ ಎಚ್ಚರಿಸಿದ್ದಾರೆ.

ಅತ್ತ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮನೋಜ್ ಠಾಕೂರ್ ಅಜ್ಞಾತ ಸ್ಥಳದಿಂದ ಹೇಳಿಕೆ ಬಿಡುಗಡೆಗೊಳಿಸಿ, ``ನಾವು ಶಕೀರ್‍ನನ್ನು ತಡೆಯಲು ಯತ್ನಿಸಿದಾಗ ಆತ ತನ್ನ ವಾಹನವನ್ನು ನಮಗೆ ಢಿಕ್ಕಿ ಹೊಡೆಯಲು ಯತ್ನಿಸಿದ. ಒಬ್ಬ ವ್ಯಕ್ತಿಗೆ ಹೊಡೆಯಲು ಎರಡು ಲಾಠಿ ಬಳಸಿದ್ದು  ಅಪರಾಧವಾದರೆ ಇನ್ನೊಬ್ಬರನ್ನು ಕೊಲೆಗೈಯ್ಯಲು ಯತ್ನಿಸುವುದು ಅಪರಾಧವಲ್ಲವೇ? ನಾನು ಗೋಹತ್ಯೆ ತಡೆಯಲು ಯತ್ನಿಸುತ್ತಿದ್ದೇನೆ, ಆಡಳಿತ ನನಗೆ ಒಂದು ಪೊಲೀಸ್ ತಂಡ ನೀಡಲಿ, ನಾನು ಈ ಜಾಲವನ್ನು ಬಯಲಿಗೆಳೆಯುತ್ತೇನೆ,''ಎಂದು ಆತ ಹೇಳಿಕೊಂಡಿದ್ದಾನೆ.

ಸಂತ್ರಸ್ತನ ಬಳಿ ಮಾಂಸ ಖರೀದಿ ಸಂಬಂಧ ರಶೀದಿಯಿತ್ತು ಆದರೂ ಆತನಿಗೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿರುವ ಸಮಾಜವಾದಿ ಪಕ್ಷದ ಸಂಸದ ಎಸ್ ಟಿ ಹಸನ್,  ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News