ಚಂಡಮಾರುತಗಳ ಪರಿಣಾಮ: ನಾಲ್ಕು ದಿನ ಮುಂಚಿತವಾಗಿ ರಾಜ್ಯಕ್ಕೆ ಮುಂಗಾರು ಪ್ರವೇಶ

Update: 2021-05-24 11:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 24: ತೌಕ್ತೆ, ಯಾಸ್ ಚಂಡಮಾರುತಗಳ ಪರಿಣಾಮ ನಾಲ್ಕು ದಿನಗಳ ಮುನ್ನವೇ ಈ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ.

ಪ್ರತಿ ವರ್ಷದಂತೆ ಕೇರಳದ ಕಡೆಯಿಂದ ನೈಋತ್ಯ ಮುಂಗಾರು ಮಳೆ ಜೂನ್ ಮೊದಲ ಮೊದಲ ವಾರದಲ್ಲಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ತೌಕ್ತೆ, ಯಾಸ್ ಚಂಡಮಾರುತಗಳ ಪರಿಣಾಮ ನಾಲ್ಕು ದಿನಗಳ ಮುನ್ನವೇ ಈ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಕೇರಳದಲ್ಲಿ ಜೂ.1ಕ್ಕೆ ನೈಋತ್ಯ ಮುಂಗಾರು ಪ್ರವೇಶ ಪಡೆದರೆ ಜೂ. 3-4 ರಂದು ಕರ್ನಾಟಕದಲ್ಲಿ ಮುಂಗಾರು ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಹೇಳಿತ್ತು. ಆದರೆ, ಯಾಸ್ ಚಂಡಮಾರುತದಿಂದಾಗಿ ಮೇ 31ಕ್ಕೆ ರಾಜ್ಯದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೂ ಮಳೆ ಸುರಿಸಲಿದೆ. ವಾಡಿಕೆಯಷ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಈ ಬಾರಿ ಮುಂಗಾರು ಮಳೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಸಾಮಾನ್ಯವಾಗಿ ಮುಂಗಾರು ಕಾಲದಲ್ಲಿ ಗುಡುಗು, ಸಿಡಿಲಿನ ಆರ್ಭಟದ ಮಳೆಯಿರುವುದಿಲ್ಲ. ಆದರೆ, ಈಗ ತೌಕ್ತೆ ಮತ್ತು ತದನಂತರ ಯಾಸ್ ಚಂಡಮಾರುತಗಳ ಹಾವಳಿಯಿಂದ ಅಬ್ಬರದ ಮಳೆಯಾಗುತ್ತಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News