ಯೋಗೀಶ್‍ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ

Update: 2021-05-24 11:49 GMT

ಬೆಂಗಳೂರು, ಮೇ 24: ಮಾಜಿ ಜಿ.ಪಂ. ಸದಸ್ಯ ಯೋಗೀಶ್‍ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧ ಮಾಜಿ ಸಚಿವ ವಿನಯ್‍ಕುಲಕರ್ಣಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಚಾರ್ಜ್‍ಶೀಟ್ ಪರಿಗಣಿಸಿದ ಹೈಕೋರ್ಟ್ ನ್ಯಾಯಪೀಠ, ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಹೇಳಿ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ಧಾರವಾಡ ಜಿಪಂ ಸದಸ್ಯ ಯೋಗೀಶ್‍ಗೌಡ ಅವರನ್ನು 2016ರ ಜೂ.15ರಂದು ಸಪ್ತಾಪುರದಲ್ಲಿ ಹತ್ಯೆ ಮಾಡಲಾಗಿತ್ತು. ಜಿಮ್‍ನಿಂದ ಹೊರಗೆ ಬಂದ ಯೋಗೀಶ್‍ಗೌಡ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಎಸಗಿ ಕೊಲೆ ಮಾಡಲಾಗಿತ್ತು.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಸುಪಾರಿ ಹಂತಕರು ಈ ಕೃತ್ಯ ಎಸಗಿದ್ದರು. ಆ ಘಟನೆ ಬಳಿಕ ಪೊಲೀಸರು ಧಾರವಾಡದ ಆರು ಮಂದಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದರು. 2019, ಸೆಪ್ಟೆಂಬರ್‍ನಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಸವರಾಜ ಉತ್ತಿಗೆ ಅವರು ಸಿಬಿಐ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಆದರೆ, ಸಿಬಿಐ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತೆರವು ಮಾಡಿಸಿಕೊಂಡಿತ್ತು.

ಕಳೆದ 2020ರ ನವೆಂಬರ್ ತಿಂಗಳಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಪೊಲೀಸರು ಬಂಧಿಸಿದ್ದರು. ಕೋವಿಡ್ ಸಂಕಷ್ಟದ ಮಧ್ಯೆಯೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಎಂಟು ಮಂದಿ ಆರೋಪಿಗಳನ್ನ ಈವರೆಗೆ ಬಂಧಿಸಿದೆ. ಯೋಗೀಶ್‍ಗೌಡ ಅವರನ್ನು ರಾಜಕೀಯ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಸಿಬಿಐ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News