ಪ್ರಧಾನಿ ಮೋದಿ ಚುನಾವಣೆ ಹಿಂದೆ ಬಿದ್ದು ಕೊರೋನ ನಿರ್ವಹಣೆ ಮರೆತು ಹೋದರು: ದೇವೇಗೌಡ ಆಕ್ರೋಶ

Update: 2021-05-24 14:56 GMT

ಬೆಂಗಳೂರು, ಮೇ 24: ಕೊರೋನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಕುಮಾರಸ್ವಾಮಿ ಒಂದು ತಿಂಗಳ ಮುಂಚೆಯೇ ಸಲಹೆ ಕೊಟ್ಟಿದ್ದರು. ಆದರೆ ಆಗ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಹಳ್ಳಿಗಳಲ್ಲೂ ಸೋಂಕು ಹೆಚ್ಚುತ್ತಿದೆ, ಹಾಗಾಗಿ ಇನ್ನು ಹೆಚ್ಚಿನ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಸೋಮವಾರ ನಗರದ ಜೆಡಿಎಸ್ ಕೇಂದ್ರ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 12 ಸಲಹೆಗಳನ್ನು ಕೊಟ್ಟಿದ್ದೀನಿ. ಅದರಲ್ಲಿ ಕೆಲವು ಸಲಹೆಗಳನ್ನ ಕಾರ್ಯಗತ ಮಾಡುತ್ತಿದ್ದಾರೆ. ಮೊದಲ ಅಲೆಯಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ರು ಅಂತ ಮೋದಿಯನ್ನ ಎಲ್ಲರೂ ಹೊಗಳಿದ್ದರು. ಎರಡನೇ ಅಲೆಯಲ್ಲಿ ಸೋಂಕು ತೀವ್ರವಾಗಿ ಹೆಚ್ಚಳ ಆಗಿದೆ. ಜೊತೆಗೆ ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಬಗ್ಗೆ ಆತಂಕ ಹುಟ್ಟುಕೊಂಡಿದೆ. ದೇಶ, ವಿದೇಶಗಳ ತಜ್ಞರು ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನನ್ನ ಜೀವಿತಾವಧಿಯಲ್ಲಿ ಇಂತಹ ದೊಡ್ಡ ಸಾಂಕ್ರಾಮಿಕ ರೋಗ ನೋಡಿಲ್ಲ. ಇದರಿಂದ ದೇಶದ ಜನ ಸಮಸ್ಯೆಗೆ ಸಿಲುಕಿದ್ದಾರೆ. ರೆಮ್‍ಡಿಸಿವಿರ್ ಲಸಿಕೆ ಕಳ್ಳದಾರಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಜನರನ್ನು ಬಂಧನ ಮಾಡಿದ್ದಾರೆ. ಆಡಳಿತದಲ್ಲಿ ಕೆಲ ಲೋಪಗಳು ಇರಬಹುದು ಇದನ್ನ ಸರಿ ಮಾಡೋ ಕೆಲಸ ಸರಕಾರ ತಕ್ಷಣ ಮಾಡಬೇಕು ಎಂದು ದೇವೇಗೌಡ ಹೇಳಿದರು.

ಕೊರೋನ ವಿಶ್ವದಾದ್ಯಂತ ನಿರೀಕ್ಷೆ ಮೀರಿ ಹರಡಿದೆ. ಮನೆಯಲ್ಲಿ ಕುಳಿತುಕೊಳ್ಳಬಾರದು ಅಂತ ಇಂದು ಕಚೇರಿಗೆ ಬಂದಿದ್ದೇನೆ. ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆ ಸಂಬಂಧ ನಮ್ಮ ಮುಖಂಡರ ಜೊತೆ ಸಭೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲರ ಜೊತೆ ಚರ್ಚೆ ಮಾಡಿ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 3 ವಿಭಾಗಗಳಾಗಿ ಮಾಡಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಎಲ್ಲ ಜಿಲ್ಲೆಗಳ ಮುಖಂಡರ ಸಭೆಯನ್ನು ಕುಮಾರಸ್ವಾಮಿ ಅವರೇ ಮಾಡಿ ಮುಂದಿನ ನಿರ್ಧಾರ ಮಾಡುತ್ತಾರೆ. ಅವರು ಶಾಸಕರ ಜೊತೆ ನಿರಂತರವಾಗಿ ಸಭೆ ಮಾಡುತ್ತಿದ್ದಾರೆ. ಸರಕಾರದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಟ್ವಿಟರ್ ಮೂಲಕ ಸಲಹೆಗಳನ್ನ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನ ಅವಧಿಯಲ್ಲಿ ಬೆಂಗಳೂರಿಗೆ, ರಾಜ್ಯಕ್ಕೆ ಏನು ಕೆಲಸ ಆಗಿದೆ, ಕುಮಾರಸ್ವಾಮಿ ಕಾಲದಲ್ಲಿ ಏನಾಗಿದೆ ಎಂಬುದನ್ನು ಮನೆ ಮನೆಗೂ ತಲುಪಿಸುವ ಕೆಲಸ ಆಗಬೇಕು. ಎಲ್ಲ ವಾರ್ಡ್‍ಗಳ ಮುಖಂಡರನ್ನು ಭೇಟಿ ಮಾಡಿ ಚುನಾವಣೆ ಬರುವ ಮುಂಚೆ ಎಲ್ಲ ವಾರ್ಡ್‍ನಲ್ಲಿ ಸಭೆ ಮಾಡುತ್ತೇವೆ. ರಾಜ್ಯದ ಸಂಘಟನೆ ವಿಚಾರ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ. ಈಗಾಗಲೇ ಪಂಚರತ್ನ ಯೋಜನೆ ಬಿಡುಗಡೆ ಮಾಡೋದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯದ ಜವಾಬ್ದಾರಿಯನ್ನ ಅವರು ನಿಭಾಯಿಸುತ್ತಾರೆ ಎಂದು ದೇವೇಗೌಡ ಹೇಳಿದರು.

ಡಿಸಿಎಂ, ಆರೋಗ್ಯ ಸಚಿವರು ನಮ್ಮ ಜಿಲ್ಲೆಗೂ ವೆಂಟಿಲೇಟರ್, ಔಷಧಿ ಎಲ್ಲ ಕಳುಹಿಸಿದ್ದಾರೆ. ಸರಕಾರ ಏನು ಮಾಡಿಲ್ಲ ಅಂತ ನಾನು ಹೇಳೊಲ್ಲ. ಆದರೆ ಇನ್ನು ಸಾಕಷ್ಟು ಕೆಲಸ ಮಾಡುವ ಅವಶ್ಯಕತೆ ಇದೆ. ಅರಸೀಕೆರೆ ತಾಲೂಕಿನಲ್ಲಿ ಸೋಂಕಿತರೊಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ 4 ಲಕ್ಷ ರೂ.ಖರ್ಚಾಗಿದೆ. ಅದೇ ಮನೆಯಲ್ಲಿ ತಾಯಿ, ಹೆಂಡತಿ, ತಂದೆಗೂ ಸೋಂಕು ಬಂದಿದೆ. ನಾನೇ ಮೆಡಿಕಲ್ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮವಹಿಸಲು ಸೂಚನೆ ನೀಡಿದೆ ಎಂದು ಅವರು ತಿಳಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯಗಳ ಕೊರತೆ ಇದೆ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವ ಘಟನೆ ಆಗುತ್ತಿದೆ. ವ್ಯವಸ್ಥೆಯಲ್ಲಿ ಕೆಲ ದೋಷಗಳು ಇವೆ. ಇದನ್ನ ಸರಿ ಮಾಡೋ ಕೆಲಸ ಸರಕಾರ ಮಾಡಬೇಕು ಎಂದ ಅವರು, ಕೇಂದ್ರ ಸರಕಾರ ಲಸಿಕೆ, ಔಷಧಿ, ವೆಂಟಿಲೇಟರ್, ಆಕ್ಸಿಜನ್ ನಿಡೋದ್ರಲ್ಲಿ ಮಲತಾಯಿ ಧೋರಣೆ ತೋರಿದೆ ಅನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಹಾಗೂ ಕುಮಾರಸ್ವಾಮಿ ಮೋದಿ ಅವರಿಗೆ ಪತ್ರ ಬರೆದಿದ್ದೇವೆ ಎಂದರು.

ಹಣಕಾಸು ಹಂಚಿಕೆಯಲ್ಲಿ ನಮಗೆ ಅನ್ಯಾಯ ಆಗಿದೆ. ಚಿಕ್ಕ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುತ್ತಾರೆ. ನಮಗೆ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಮೋದಿ ಅವರ ಕ್ಷೇತ್ರದಲ್ಲೂ ಸೋಂಕು ಹೆಚ್ಚಾಗಿದೆ, ಸ್ವಲ್ಪ ಅವರು ಭಾವೋದ್ವೇಗಕ್ಕೆ ಒಳಗಾಗಿ ಮಾತಾಡಿದ್ದಾರೆ. ಸೋಂಕು ಹೆಚ್ಚಳಕ್ಕೆ ಪಂಚ ರಾಜ್ಯಗಳ ಚುನಾವಣೆ ಕೂಡ ಕಾರಣವಾಗಿರಬಹುದು ಎಂದು ದೇವೇಗೌಡ ಹೇಳಿದರು.

ಕೇಂದ್ರ ಸರಕಾರದವರು 5 ರಾಜ್ಯಗಳ ಚುನಾವಣೆ ಕಡೆ ಹೆಚ್ಚು ಗಮನ ಕೊಟ್ಟರು. ಆದರೆ, ಚುನಾವಣೆ ವೇಳೆ ಕೊರೋನ ಬಗ್ಗೆ ಗಮನ ಕೊಡಲಿಲ್ಲ. ಚುನಾವಣೆ ಬದಲು ಕೊರೋನ ಕಡೆ ಗಮನ ಕೊಟ್ಡಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಹೀಗೆ ಆಗುತ್ತಿರಲಿಲ್ಲವೇನೋ? ನರೇಂದ್ರ ಮೋದಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಪಣಕ್ಕೆ ಬಿದ್ರು. ಚುನಾವಣೆ ಗಮನದಲ್ಲಿ ಕೊರೋನ ನಿರ್ವಹಣೆ ಮರೆತು ಹೋದರು ಎಂದು ದೇವೇಗೌಡ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News