ಕೋವಿಡ್-19:11ನೇ ದಿನವೂ ಹೊಸ ಸೋಂಕು ಪ್ರಕರಣಗಳನ್ನು ಮೀರಿಸಿದ ಚೇತರಿಕೆ ಪ್ರಮಾಣ

Update: 2021-05-24 16:41 GMT

ಹೊಸದಿಲ್ಲಿ,ಮೇ 24: ಸತತ 11ನೇ ದಿನವೂ ದೇಶದಲ್ಲಿ ಕೋವಿಡ್-19ರಿಂದ ಚೇತರಿಸಿಕೊಂಡಿರುವವರ ಸಂಖ್ಯೆ ಹೊಸ ಸೋಂಕು ಪ್ರಕರಣಗಳನ್ನು ಮೀರಿಸಿದೆ. ಇದೇ ವೇಳೆ ಒಟ್ಟು ಪಾಸಿಟಿವಿಟಿ ದರವು ಶೇ.8.09ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ತಿಳಿಸಿದೆ.

ಮೇ 10ರಂದು ಉತ್ತುಂಗದಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಅಲ್ಲಿಂದೀಚಿಗೆ ತಗ್ಗುತ್ತಲೇ ಬಂದಿದೆ. ಸೋಮವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಒಟ್ಟು 3,02,544 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 2,37,28,011ಕ್ಕೇರಿದೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 27,20,716ಕ್ಕೆ ಇಳಿದಿದೆ. ಇದು ದೇಶದಲ್ಲಿಯ ಒಟ್ಟು ಸೋಂಕು ಪ್ರಕರಣಗಳ ಶೇ.10.17ರಷ್ಟಿದೆ. ಈ ಪೈಕಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ,ಪಶ್ಚಿಮ ಬಂಗಾಳ,ರಾಜಸ್ಥಾನ ಮತ್ತು ಒಡಿಶಾ ರಾಜ್ಯಗಳ ಪಾಲು ಶೇ.71.62ರಷ್ಟಿದೆ. 24 ಗಂಟೆಗಳಲ್ಲಿ ಒಟ್ಟು ಚೇತರಿಕೆಗಳಲ್ಲಿ 10 ರಾಜ್ಯಗಳ ಪಾಲು ಶೇ.72.23ರಷ್ಟಿದೆ. ರಾಷ್ಟ್ರೀಯ ಚೇತರಿಕೆ ದರವು ಶೇ.88.69ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 19,28,127 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರೊಂದಿಗೆ ಒಟ್ಟು ಪರೀಕ್ಷೆಗಳ ಸಂಖ್ಯೆ 33,05,36,064ಕ್ಕೆ ತಲುಪಿದೆ. ದೇಶದಲ್ಲಿ ಸತತ ಎಂಟನೇ ದಿನವೂ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಕೆಳಗೇ ಇದೆ. ದೈನಂದಿನ ಹೊಸ ಪ್ರಕರಣಗಳು ಮತ್ತು ದೈನಂದಿನ ಚೇತರಿಕೆಗಳ ಅಂತರ 80,229ಕ್ಕೆ ಇಳಿದಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,22,315 ಹೊಸ ಪ್ರಕರಣಗಳು ದಾಖಲಾಗಿದ್ದು,ಈ ಪೈಕಿ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಕೇರಳ,ಆಂಧ್ರಪ್ರದೇಶ,ಪ.ಬಂಗಾಳ, ಒಡಿಶಾ,ರಾಜಸ್ಥಾನ,ಪಂಜಾಬ ಮತ್ತು ಉತ್ತರ ಪ್ರದೇಶಗಳ ಪಾಲು ಶೇ.81.08ರಷ್ಟಿದೆ ಎಂದು ಸಚಿವಾಲಯವು ತಿಳಿಸಿದೆ. 35,483 ಹೊಸ ಪ್ರಕರಣಗಳೊಂದಿಗೆ ತಮಿಳುನಾಡು ಅಗ್ರಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ (26,672) ನಂತರದ ಸ್ಥಾನದಲ್ಲಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಹೊಸದಾಗಿ 4,454 ಸಾವುಗಳು ವರದಿಯಾಗಿದ್ದು,ಈ ಪೈಕಿ 10 ರಾಜ್ಯಗಳ ಪಾಲು ಶೇ.79.52ರಷ್ಟಿದೆ. ರಾಷ್ಟ್ರಿಯ ಮರಣದರವು ಶೇ.1.14ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ (1,320)ಸಾವುಗಳು ಸಂಭವಿಸಿದ್ದರೆ ಕರ್ನಾಟಕ (624)ವು ನಂತರದ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News