ನೃತ್ಯ ಕಲಾವಿದೆ ಭಾನುಮತಿ ಕೊರೋನ ಸೋಂಕಿನಿಂದ ನಿಧನ

Update: 2021-05-24 17:40 GMT

ಬೆಂಗಳೂರು, ಮೇ 24: ಅಪ್ರತಿಮ ನೃತ್ಯ ಕಲಾವಿದೆ ಹಾಗೂ ನೃತ್ಯ ಗುರು ಬಿ. ಭಾನುಮತಿ ಅವರು ಸೋಮವಾರ ಕೊರೋನ ಸೋಂಕಿನಿಂದಾಗಿ ನಿಧನ ಹೊಂದಿದ್ದಾರೆ. ಕೊರೋನ ಸೋಂಕಿನಿಂದಾಗಿ ಕಳೆದ ಒಂದು ವಾರದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಮೂಲತಃ ಕಲಾವಿದರ ಕುಟುಂಬದಿಂದಲೇ ಬಂದ ಬಿ.ಭಾನುಮತಿ ಭರತನಾಟ್ಯ ನೃತ್ಯ ಪ್ರಕಾರದಲ್ಲಿ ಬಹುದೊಡ್ಡ ಹೆಸರು ಮಾಡಿದವರು. ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ನೃತ್ಯ ಕಲೆಯ ಬೆಳಕನ್ನು ಪಸರಿಸಿದ್ದರು.

'ನೃತ್ಯ ಕಲಾ ಮಂದಿರಂ' ಶಾಲೆ ಮೂಲಕ ನೂರಾರು ನೃತ್ಯ ಕಲಾವಿದರನ್ನು ತಯಾರು ಮಾಡಿದ ಕೀರ್ತಿ ಭಾನುಮತಿ ಅವರಿಗೆ ಸಲ್ಲುತ್ತದೆ. ಅವರ ಸಂಯೋಜನೆಯ 'ಭರತಾಂಜಲಿ' ನೃತ್ಯ ರೂಪಕ ಅಮೆರಿಕ, ಬ್ರಿಟನ್ ಮುಂತಾದ ದೇಶಗಳಲ್ಲಿ ಪ್ರದರ್ಶಿತವಾಗಿ ಹೆಸರುವಾಸಿಯಾಗಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಸೇರಿ ಅಸಂಖ್ಯ ಸನ್ಮಾನಗಳಿಗೆ ಭಾಜನರಾದ ಭಾನುಮತಿ ಅವರ ನಿಧನದಿಂದ ಕರ್ನಾಟಕ ಸಾಂಸ್ಕೃತಿಕ ಲೋಕ ದೊಡ್ಡ ನಷ್ಟ ಅನುಭವಿಸಿದೆ.

ಅರವಿಂದ ಲಿಂಬಾವಳಿ ಸಂತಾಪ: ಕಲಾವಿದೆ ಬಿ. ಭಾನುಮತಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News