ಮೂಡಿಗೆರೆ: ತರಕಾರಿ ಖರೀದಿಗೆ ಬಂದಿದ್ದ ಮಹಿಳೆಗೆ ಕಬ್ಬಿಣದ ಪೈಪ್ ನಿಂದ ಹೊಡೆದ ಕಂದಾಯ ಇಲಾಖೆಯ ಸಿಬ್ಬಂದಿ

Update: 2021-05-24 17:54 GMT

ಚಿಕ್ಕಮಗಳೂರು, ಮೇ 24: ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ತರಕಾರಿ ಖರೀದಿಗೆ ಬಂದಿದ್ದ ಮಹಿಳೆಯೊಬ್ಬರ ಮೇಲೆ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬ ಕಬ್ಬಿಣದ ಪೈಪ್ ನಿಂದ ಹಲ್ಲೆ ಮಾಡಿರುವ ಘಟನೆ ವರದಿಯಾಗಿದ್ದು, ಸಿಬ್ಬಂದಿ ಮಹಿಳೆಗೆ ಹಲ್ಲೆ ಮಾಡುತ್ತಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಾರಿಯಲ್ಲಿದ್ದ ಸಂಪೂರ್ಣ ಲಾಕ್‍ಡೌನ್‍ಅನ್ನು ಮೇ 28ರವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಮಾಡಿದ್ದರು. ಇದರ ಮಾಹಿತಿ ಇಲ್ಲದ ಸಾರ್ವಜನಿಕರು ಸೋಮವಾರ ಬೆಳಗ್ಗೆ ಮೂಡಿಗೆರೆ ಪಟ್ಟಣದಲ್ಲಿ ತರಕಾರಿ, ದಿನಸಿ ಖರೀದಿಗೆಂದು ದಿಢೀರ್ ರಸ್ತೆಗಿಳಿದಿದ್ದರು. ಈ ವೇಳೆ ತಹಶೀಲ್ದಾರ್ ಜೊತೆಗೆ ಸಾರ್ವಜನಿಕರ ಸಂಚಾರ ನಿಯಂತ್ರಿಸಲು ಆಗಮಿಸಿದ್ದ ಜಾವಳಿ ಹೋಬಳಿಯ ನಾಡ ಕಚೇರಿಯ ಗ್ರಾಮಲೆಕ್ಕಾಧಿಕಾರಿ ಗಿರೀಶ್ ಎಂಬಾತ ಅಂಗಡಿಗಳ ಮುಂದೆ ಇದ್ದ ಸಾರ್ವಜನಿಕರಿಗೆ ಕಬ್ಬಿಣದ ಪೈಪ್ ನಿಂನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಪಟ್ಟಣದಲ್ಲಿ ಬಾಗಿಲು ತೆರದುಕೊಂಡಿದ್ದ ಅಂಗಡಿಗಳನ್ನು ಮುಚ್ಚಿಸುವ ಭರದಲ್ಲಿ ಗ್ರಾಮಲೆಕ್ಕಾಧಿಕಾರಿ ಗಿರೀಶ್, ತರಕಾರಿ ಖರೀದಿಗೆ ಬಂದಿದ್ದ ಶಬಾನಾ ಎಂಬವರ ಕೈಗಳಿಗೆ ಕಬ್ಬಿಣದ ರಾಡ್‍ನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆ ಚಿಕ್ಕಮಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.

ವಿಎ ಗಿರೀಶ್ ಈ ಮಹಿಳೆ ಮಾತ್ರವಲ್ಲದೇ ಪಟ್ಟಣದಲ್ಲಿ ಅನೇಕ ಜನರ ಮೇಲೂ ಕಬ್ಬಿಣದ ಪೈಪ್ ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಲಾಗಿದ್ದು, ಗಿರೀಶ್ ಸಾರ್ವಜನಿಕರ ಮೇಲೆ ಪೈಪ್ ನಿಂದ ಹಲ್ಲೆ ಮಾಡುತ್ತಿರುವ ದೃಶ್ಯವೊಂದ ಪಟ್ಟಣದ ಅಂಗಡಿಮುಂದಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ಘಟನೆ ಸಂದರ್ಭ ಮೂಡಿಗೆರೆ ತಹಶೀಲ್ದಾರ್ ಸ್ಥಳದಲ್ಲೇ ಇದ್ದರೂ ಅವರು ಈ ಹಲ್ಲೆ ತಡೆಯದೇ ಮೌನಕ್ಕೆ ಶರಣಾಗಿದ್ದರೆಂದು ತಿಳಿದು ಬಂದಿದ್ದು, ವಿಎ ಗಿರೀಶ್ ಹಾಗೂ ತಹಶೀಲ್ದಾರ್ ವಿರುದ್ಧ ಜಿಲ್ಲಾದ್ಯಂತ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ವಿಎ ಗಿರೀಶ್ ಹಾಗೂ ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿ ಶಿಸ್ತು ಕ್ರಮವಹಿಸಬೇಕು. ಗಿರೀಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು: ಮೋಟಮ್ಮ
ಪಟ್ಟಣದಲ್ಲಿ ಸೋಮವಾರ ಶಬನಾ ಎಂಬ ಮಹಿಳೆಯ ಮೇಲೆ ಗ್ರಾಮ ಲೆಕ್ಕಿಗ ಗಿರೀಶ್ ಎಂಬಾತ ಕಬ್ಬಿಣದ ಪೈಪ್‍ನಿಂದ ಹಲ್ಲೆ ನಡೆಸಿರುವ ಘಟನೆಯ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಸಚಿವೆ ಮೋಟಮ್ಮ ತಿಳಿಸಿದ್ದಾರೆ.

ಘಟನೆಯ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಸರಕಾರಿ ವ್ಯವಸ್ಥೆ ಸಂಪೂರ್ಣವಾಗಿ ಸತ್ತು ಹೋಗಿದೆ. ಸೋಮವಾರ ಬೆಳಗ್ಗೆ ಮಹಿಳೆಯೊಬ್ಬರು ಸೊಪ್ಪು ಖರೀದಿಗಾಗಿ ಬಂದಿದ್ದ ವೇಳೆ ಯಾವುದೇ ವಿಚಾರಣೆ ನಡೆಸದೇ, ಗ್ರಾಮ ಲೆಕ್ಕಿಗ ಗಿರೀಶ್ ಎಂಬಾತ ತಹಶೀಲ್ದಾರ್ ಎದುರೇ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕರು, ವಿವಿಧ ಪಕ್ಷಗಳ ಮುಖಂಡರು ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮನೆಯಲ್ಲಿಯೇ ಮಹಿಳೆಯರ ಮೇಲೆ ಕೈ ಮಾಡುವುದು ಕಾನೂನು ಬಾಹಿರವಾಗಿದೆ. ಅಂತಹದರಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಗ್ರಾಮ ಲೆಕ್ಕಿಗನಿಗೆ ಸಾರ್ವಜನಿಕರಿಗೆ ಹಲ್ಲೆ ಮಾಡುವ ಅಧಿಕಾರ ನೀಡಿದವರು ಯಾರೂ ಎಂದು ಮೋಟಮ್ಮ ಪ್ರಶ್ನಿಸಿದ್ದಾರೆ.

ಗ್ರಾಮಲೆಕ್ಕಿಗ ಗಿರೀಶ್ ವಿರುದ್ಧ ಈ ಹಿಂದೆಯೇ ಅನೇಕ ಆರೋಪಗಳು ಬಂದಿವೆ. ಭ್ರಷ್ಟಾಚಾರದ ಆರೋಪವೂ ಇದ್ದು, ಈತನ ಬೆನ್ನಿಗೆ ತಾಲೂಕು ಆಡಳಿತವೇ ನಿಂತಿರುವುದರಿಂದ ವಿಎ ಗಿರೀಶ್ ಸಾರ್ವಜನಿಕರಿಗೆ ದರ್ಪ ತೋರಿಸುತ್ತಿದ್ದಾನೆ. ಇಂತಹ ದರ್ಪದ ಸರಕಾರಿ ಸಿಬ್ಬಂದಿ ವಿರುದ್ಧ ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು. ಕರ್ತವ್ಯದಿಂದ ಅಮಾನತುಗೊಳಿಸಬೇಕು. ಹಲ್ಲೆ ಮಾಡಿದ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮೋಟಮ್ಮ ಹೇಳಿದ್ದಾರೆ.

ರಾಜ್ಯದ ಕಾನೂನು ವ್ಯವಸ್ಥೆಯಲ್ಲಿ ಲಾಠಿ ಹಿಡಿಯಲು ಕೂಡ ಕೆಲವು ನಿಯಮಗಳಿವೆ. ಲಾಠಿ ಹಿಡಿಯುವುದಕ್ಕಾಗಿಯೇ ಪೊಲೀಸರಿಗೆ ತರಬೇತಿಗಳು ಕೂಡ ನಡೆದಿರುತ್ತವೆ. ಅಂತಹದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಾಠಿ ಹಿಡಿಯಲು ಅಧಿಕಾರ ನೀಡಿದವರು ಯಾರು? ಅದರಲ್ಲೂ ಕಬ್ಬಿಣದ ಪೈಪನ್ನು ಹಿಡಿದು ಹಲ್ಲೆ ನಡೆಸಿರುವುದು ಆಕ್ಷಮ್ಯವಾಗಿದೆ. ಮಹಿಳೆಗೆ ಮಾತ್ರವಲ್ಲದೇ ಹಲವಾರು ಪುರುಷರ ಮೇಲೂ ಹಲ್ಲೆ ನಡೆಸಿದ್ದು, ಹಲವರಿಗೆ ಕೈಕಾಲುಗಳು ಬಾಸುಂಡೆ ಬಂದಿವೆ. ಈಗಾಗಲೇ ಮಹಿಳೆ ಕೂಡ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಜಿಲ್ಲಾಡಳಿತ ಮೌನವಹಿಸಿದೆ. ಮಹಿಳೆಯ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿರುವ ಅವರು ಘಟನೆ ನಡೆದಾಗ ತಹಶೀಲ್ದಾರ್ ಸ್ಥಳದಲ್ಲೇ ಇದ್ದರು ಎನ್ನಲಾಗಿದ್ದು, ಘಟನೆಯನ್ನು ನೋಡಿಯೂ ತಹಶೀಲ್ದಾರ್ ವಿಎ ವಿರುದ್ಧ ಶಿಸ್ತು ಕ್ರಮ ವಹಿಸದಿರುವುದು ದುರದೃಷ್ಟಕರ. ಈ ಘಟನೆಗೆ ತಹಶೀಲ್ದಾರ್ ಕೂಡ ಕಾರಣ. ಅವರ ವಿರುದ್ಧ ಜಿಲ್ಲಾಧಿಕಾರಿ ಕ್ರಮವಹಿಸಬೇಕೆಂದು ಮೋಟಮ್ಮ ಒತ್ತಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News