ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಿರ್ವಹಿಸಿ ಮಾದರಿಯಾದ ದಂಪತಿ

Update: 2021-05-24 18:36 GMT
Photo: timesofindia.indiatimes.com

ಭುವನೇಶ್ವರ, ಮೇ 24: ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ನಿರಾಕರಿಸುತ್ತಿರುವ ಸಂದರ್ಭದಲ್ಲಿ ಒಡಿಶಾದ ದಂಪತಿ, ಅಂತ್ಯಸಂಸ್ಕಾರ ಕ್ರಿಯೆ ನಡೆಸಿ ಮಾದರಿಯಾಗಿದ್ದಾರೆ.

ರೈಲು ಹಳಿಗಳಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗುವ ಅಥವಾ ಅಪಘಾತದಲ್ಲಿ ಮೃತರಾಗುವ ವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುತ್ತಿರುವ ಪ್ರದೀಪ್, ಈಗ ಕೊರೋನ ಸೋಂಕಿನಿಂದ ಮೃತರಾಗುವ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನೂ ಶೃದ್ಧೆಯಿಂದ ಮಾಡುತ್ತಿದ್ದಾರೆ. `ರೈಲಿನಡಿ ಸಿಲುಕಿದ್ದ ನನ್ನ ತಾಯಿಯ ಮೃತದೇಹ ಹಳಿಯಲ್ಲಿ ಅನಾಥರೀತಿಯಲ್ಲಿ ಬಿದ್ದಿತ್ತು. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಆ ದಿನವೇ ನಿರ್ಧರಿಸಿ ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸುತ್ತಿದ್ದೇನೆ.

ಕೆಲ ದಿನಗಳ ಹಿಂದೆ ಕಾಲಿಗೆ ಏಟು ಬಿದ್ದ ಕಾರಣ ಇತರರ ನೆರವಿಗೆ ಕಾಯಬೇಕಾಯಿತು. ಆಗ ಪತ್ನಿ ಕೆಲಸ ಬಿಟ್ಟು ಬಂದು ನನ್ನ ಕೆಲಸಕ್ಕೆ ಜತೆಯಾದಳು ಎಂದು ಪ್ರದೀಪ್ ಹೇಳಿದ್ದಾರೆ.

ಪ್ರದೀಪ್ ಪತ್ನಿ ಮಧುಸ್ಮಿತಾ ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ 9 ವರ್ಷದಿಂದ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಗಂಡನಿಗೆ ನೆರವಾಗಲೆಂದು ಈಗ ನರ್ಸ್ ಕೆಲಸಕ್ಕೆ ರಾಜೀನಾಮೆ ನೀಡಿ ಪತಿಯ ಸಮಾಜಸೇವೆಗೆ ಹೆಗಲು ನೀಡಿದ್ದಾರೆ. ಕಳೆದ ವರ್ಷ ಕೊರೋನ ಸೋಂಕಿನ ಸಂದರ್ಭ 300ಕ್ಕೂ ಅಧಿಕ ಸೋಂಕಿತರ ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ. ಕಳೆದ ಸುಮಾರು ಎರಡೂವರೆ ವರ್ಷದಲ್ಲಿ ಕೊರೋನೇತರ ರೋಗಿಗಳೂ ಸೇರಿದಂತೆ ಸುಮಾರು 500 ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ. ನಮ್ಮ ಕೆಲಸಕ್ಕೆ ಸಮಾಜದವರ ಟೀಕೆ, ಅಪಹಾಸ್ಯ ಕೇಳಿಬಂದರೂ ಎದೆಗುಂದದೆ ಈ ಕಾಯಕ ಮುಂದುವರಿಸಿದ್ದೇವೆ ಎಂದು ಮಧುಸ್ಮಿತಾ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಮೃತರಾಗುವ ಕೊರೋನ ಸೋಂಕಿತರ ಮೃತದೇಹಗಳನ್ನು ಆಸ್ಪತ್ರೆಯಿಂದ ಭುವನೇಶ್ವರದ ಚಿತಾಗಾರಕ್ಕೆ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸುವ ಬಗ್ಗೆ ಭುನವೇಶ್ವರ ನಗರಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ದಂಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News