ಉತ್ಪಾದನೆಯಾಗುವ ಲಸಿಕೆಯಲ್ಲಿ 57% ಮಾತ್ರ ರಾಜ್ಯಗಳಿಗೆ ಹಂಚಿಕೆ:ಕೇರಳ ಹೈಕೋರ್ಟ್ಗೆ ಕೇಂದ್ರ ನೀಡಿದ ಮಾಹಿತಿಯಲ್ಲಿ ಉಲ್ಲೇಖ

Update: 2021-05-25 14:33 GMT

ತಿರುವನಂತಪುರಂ, ಮೇ 24: ಭಾರತದಲ್ಲಿ ತಿಂಗಳಿಗೆ 8.5 ಕೋಟಿ ಕೊರೋನ ಲಸಿಕೆ ಉತ್ಪಾದಿಸಲಾಗುತ್ತದೆ. ಪ್ರತೀ ದಿನಾ ದೇಶದಾದ್ಯಂತ ಸರಾಸರಿ 12ರಿಂದ 13 ಲಕ್ಷ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಸೋಮವಾರ ಕೇರಳ ಹೈಕೋರ್ಟ್ಗೆ ಮಾಹಿತಿ ನೀಡಿದೆ. 

ಈ ಮಾಹಿತಿಯ ಪ್ರಕಾರ ತಿಂಗಳಿಗೆ 8.5 ಕೋಟಿ ಎಂದರೆ ಪ್ರತೀ ದಿನ ಸರಾಸರಿ 28.33 ಲಕ್ಷ ಲಸಿಕೆ ಉತ್ಪಾದನೆಯಾದಂತಾಗಿದೆ. ಅಂದರೆ ಉತ್ಪಾದನೆಯಾಗುವ ಲಸಿಕೆಯಲ್ಲಿ ಕೇವಲ 57% ಮಾತ್ರ ಜನರನ್ನು ತಲುಪುತ್ತದೆ ಎಂದು ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮಾಡಿವೆ.

ಲಸಿಕೆ ಕೊರತೆಯ ಕಾರಣ ದಿಲ್ಲಿ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳು ಲಸಿಕಾ ಕೇಂದ್ರವನ್ನು ಮುಚ್ಚುವಂತಾಗಿದೆ. ಇನ್ನೂ ಕೆಲವು ರಾಜ್ಯಗಳು ವಿದೇಶದಿಂದ ಲಸಿಕೆ ಪಡೆದು ಕೊರತೆಯ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿವೆ. ಕೇರಳದಲ್ಲಿ ಕೋವಿಡ್ ಸ್ಥಿತಿಗತಿಯ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಕೇರಳ ಹೈಕೋರ್ಟ್, ಲಸಿಕೀಕರಣ ನೀತಿಯ ಬಗ್ಗೆ ವಿವರಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಅಫಿದಾವಿತ್ ಸಲ್ಲಿಸಿದ ಕೇಂದ್ರ ಸರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ವಿತರಣೆಗೆ ಯಾವುದೇ ನಿಗದಿತ ಗುರಿ ಇಲ್ಲ ಎಂದು ತಿಳಿಸಿದೆ.

ಅಲ್ಲದೆ ಪ್ರತೀ ತಿಂಗಳು 6.5 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ, 2 ಕೋಟಿ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲಾಗುತ್ತಿದೆ. ಮುಂದಿನ 2 ತಿಂಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚುವ ನಿರೀಕ್ಷೆಯಿದೆ. ಸೆರಂ ಸಂಸ್ಥೆ ಈಗಾಗಲೇ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಯನ್ನು  ತಿಂಗಳಿಗೆ 5 ಕೋಟಿಯಿಂದ 6.5 ಕೋಟಿ ಲಸಿಕೆಗೆ, ಭಾರತ್ ಬಯೊಟೆಕ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯನ್ನು   90 ಲಕ್ಷದಿಂದ 2 ಕೋಟಿಗೆ ಹೆಚ್ಚಿಸಿದೆ. ಈಗ ಭಾರತದಲ್ಲಿ ಲಭ್ಯವಿರುವ ರಶ್ಯಾದ ಲಸಿಕೆ ಸ್ಪುಟ್ನಿಕ್ ವಿಯ ಉತ್ಪಾದನೆ ಜುಲೈ ವೇಳೆಗೆ 1.2 ಕೋಟಿ ಲಸಿಕೆಗೆ ಹೆಚ್ಚುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದೆ.

ಲಸಿಕೆಯ ದರದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸರಕಾರ, ಲಸಿಕೆಯ ದರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿದರೆ ಸಾಕಷ್ಟು ಲಸಿಕೆಯನ್ನು ಖರೀದಿಸಲು, ವಿಶೇಷವಾಗಿ ವಿದೇಶದಿಂದ, ತೊಂದರೆಯಾಗಬಹುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News