ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಬರಲು ಪ್ರಧಾನಿ ಮೋದಿಗೆ ದೇವೇಗೌಡ ಪತ್ರ

Update: 2021-05-25 13:29 GMT

ಬೆಂಗಳೂರು, ಮೇ 25: ಕೋವಿಡ್ ತಡೆಗಟ್ಟಲು ಜಾರಿಗೊಳಿಸಿರುವ ಲಾಕ್‍ಡೌನ್ ಪರಿಣಾಮ ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒತ್ತಾಯ ಮಾಡಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡ, ಗ್ರಾಮೀಣ ಭಾಗದಲ್ಲಿ ಸಣ್ಣ, ಮಧ್ಯಮ ಮತ್ತು ಅತಿ ಸಣ್ಣ ರೈತರ ಜೀವನೋಪಾಯದ ಮೇಲೆಯೂ ದೊಡ್ಡ ಪರಿಣಾಮ ಬೀರಿದೆ. ಹಾಗಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ತೋಟಗಾರಿಕಾ ಬೆಳೆಗಾರರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಲಾಕ್‍ಡೌನ್‍ನಿಂದಾಗಿ ನಗರ ಪ್ರದೇಶಗಳಿಂದ ಜನರು ಗ್ರಾಮೀಣ ಭಾಗಕ್ಕೆ ಮರು ವಲಸೆ ಬಂದಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮೇಲೆ ಒತ್ತಡ ಹೆಚ್ಚಾಗಿದೆ. ಅಲ್ಲದೆ, ನಿರುದ್ಯೋಗದ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯೂ ರೈತರ ನೆರವಿಗೆ ಬರುತ್ತಿಲ್ಲ. ಶೀಘ್ರವಾಗಿ ಹಾಳಾಗುವ ಹಣ್ಣು, ತರಕಾರಿ ದಾಸ್ತಾನು ಮಾಡಲು ಸೂಕ್ತ ಶೀಥಲ ಗೃಹಗಳ ವ್ಯವಸ್ಥೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಟೊಮ್ಯಾಟೋ, ಹೂವು, ತರಕಾರಿ ಹಾಗೂ ಹಣ್ಣು ಸೇರಿದಂತೆ ವಿವಿಧ ತೋಟಗಾರಿಕೆ ಉತ್ಪನಗಳ ಬೆಲೆ ಕುಸಿತವಾಗಿದೆ. ಯೋಗ್ಯ ಬೆಲೆ ಸಿಗದೆ ಕಂಗೆಟ್ಟ ರೈತರು ಹಣ್ಣು, ತರಕಾರಿ ರಸ್ತೆಗೆ ಸುರಿದು ನಾಶಪಡಿಸಿರುವ ವರದಿಗಳು ಪ್ರಕಟವಾಗಿವೆ. ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಐದಾರು ಜಿಲ್ಲೆಗಳಿಂದ ಹಣ್ಣು, ತರಕಾರಿ ಬರುತ್ತದೆ. ಇತ್ತೀಚೆಗೆ ಬೆಲೆ ಕುಸಿತದಿಂದ ರೈತರು ಟೊಮ್ಯಾಟೋ ಸುರಿದು ನಾಶಪಡಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಹೂವು, ಹಣ್ಣು, ತರಕಾರಿ ಬೆಳೆಯಲಾಗುತ್ತಿದೆ. ಕೋವಿಡ್‍ನಿಂದಾಗಿ ಮಾರುಕಟ್ಟೆ ಜಾಲವೇ ಅಸ್ತವ್ಯಸ್ತಗೊಂಡಿದೆ ಎಂದು ದೇವೇಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News