ರಾಜ್ಯದಲ್ಲಿ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿದವರಿಗೆ ಮಾರ್ಗದರ್ಶನ ನೀಡಲು ವಾರ್ ರೂಮ್

Update: 2021-05-25 16:20 GMT

ಬೆಂಗಳೂರು ಮೇ 25: ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿದವರಿಗೆ ಮಾರ್ಗದರ್ಶನ ನೀಡಲು ಸುಸಜ್ಜಿತವಾದ ವಾರ್ ರೂಮ್ ಅನುಷ್ಠಾನಗೊಳ್ಳಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾನುವಾರು ಸಾಕಾಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡಲು ಸುಸಜ್ಜಿತವಾದ ವಾರ್ ರೂಮ್ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ತಯಾರಾಗಿದ್ದು ರೈತರು, ಜಾನುವಾರು ಸಾಕಾಣೆದಾರರು, ಪ್ರಾಣಿಪ್ರಿಯರು ಇದರ ಅನುಕೂಲ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾನುವಾರುಗಳ ಆರೋಗ್ಯ, ಸಾಕುವ ವಿಧಾನ, ಆರೋಗ್ಯ ಸಮಸ್ಯೆ, ತಕ್ಷಣಕ್ಕೆ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ವಿಷಯ ತಜ್ಞರು ವಾರ್ ರೂಮ್ ಮೂಲಕ ಮಾಹಿತಿ ನೀಡಲಿದ್ದಾರೆ. ವಾರ್ ರೂಮ್, ದಿನದ 24x7 ಕಾರ್ಯನಿರ್ವಹಿಸಲಿದ್ದು, Disaster Management Control Centre (DMCC) (ವಿಪತ್ತು ನಿರ್ವಹಣಾ ನಿಯಂತ್ರಣ ಕೇಂದ್ರವು (ವಾರ್ ರೂಮ್) ಪಶುಸಂಗೋಪನೆ ಇಲಾಖೆಯ 4212 ಸಂಸ್ಥೆಗಳು, 2900 ಪಶುವೈದ್ಯರು ಮತ್ತು 2200 ಪಶುವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಸೇವೆ ಒದಗಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿಕ್ರಿಯಾ ತಂಡವು ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ವಾರ್ ರೂಮ್‍ಗೆ ಕರೆ ಬಂದ ಕೆಲವೇ ಗಂಟೆಗಳಲ್ಲಿ ತಂಡ ಮಾಹಿತಿ ಆಧಾರದ ಮೇಲೆ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಹಾರ ನೀಡಲಿದೆ.

ವಾರ್ ರೂಮ್ ವೈಶಿಷ್ಟತೆಗಳು: ದಿನದ 24 ಗಂಟೆ ಸೇವೆ ಲಭ್ಯವಾಗಲಿದೆ. ಟೋಲ್ ಫ್ರೀ ನಂಬರ್ ವ್ಯವಸ್ಥೆ ಒಳಗೊಂಡಿದೆ. ಪಶುಸಂಗೋಪನಾ ಕ್ಷೇತ್ರದಲ್ಲಿನ ಅಧುನಿಕ ವಿಧಾನಗಳ ಬಗ್ಗೆ ಈ ಮೇಲ್, ಹತ್ತಿರದ ಪಶುವೈದ್ಯ ಸಂಸ್ಥೆ, ಮುದ್ರಿತ ಪ್ರತಿ, ಆಡಿಯೋ ವಿಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ರೈತರಿಗೆ ನಿರಂತರವಾಗಿ ಮಾಹಿತಿ ನೀಡುವುದು.

ಇಲಾಖೆಯಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳುವ ರೈತರ ಮೊಬೈಲ್‍ಗೆ ಪಶುಗಳಿಗೆ ನೀಡಲಾಗುವ ಲಸಿಕೆ ಬಗ್ಗೆ ಮಾಹಿತಿ ನೀಡುವುದು. ಜಾನುವಾರುಗಳಿಗೆ ಚಿಕಿತ್ಸೆ ಅವಶ್ಯಕತೆ ಇದ್ದ ರೈತರ ವಾರ್ ರೂಮ್ ಸಂಪರ್ಕಿಸಿದಾಗ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸುವುದು.

ತಜ್ಞರೊಂದಿಗೆ ಜಾನುವಾರುಗಳ ಆರೋಗ್ಯ, ಆಹಾರ, ಔಷಧಿಗಳ ಕುರಿತು ಸಂವಹನ ನಡೆಸುವ ವ್ಯವಸ್ಥೆ ಚಿಕಿತ್ಸಾಲಯಗಳಲ್ಲಿ ವೈದ್ಯರ ಲಭ್ಯತೆಯನ್ನು ತಂತ್ರಜ್ಞಾನ ಆಧಾರಿತವಾಗಿ ತಿಳಿಸುವ ವ್ಯವಸ್ಥೆ ಮಾಡಲಾಗಿದೆ.

ಲಭ್ಯ ತಂತ್ರಜ್ಞಾನವನ್ನು ಬಳಸಿ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಮಾಹಿತಿ ತಲುಪಿಸುವುದು ಹಾಗೂ ರೈತರಿಗೆ ಅವರ ಕುಂದುಕೊರತೆಗಳ ಬಗ್ಗೆ ದೂರವಾಣಿ ಮೂಲಕ ನೀಡುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸಿ ಸೂಕ್ತ ಪರಿಹಾರವನ್ನು ಒದಗಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News