ಮೇ 26ರ ಪ್ರತಿಭಟನೆ ಶಕ್ತಿಪ್ರದರ್ಶನವಲ್ಲ, ವಿರೋಧಧ ಪ್ರದರ್ಶನ: ರೈತ ಮುಖಂಡರ ಹೇಳಿಕೆ

Update: 2021-05-25 18:33 GMT

ಅಮೃತಸರ, ಮೇ 25: ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದಿಲ್ಲಿ ಗಡಿಭಾಗದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ 6 ತಿಂಗಳು ಪೂರ್ಣಗೊಳಿಸಿದ ಸಂಕೇತವಾಗಿ ಮೇ 26ರಂದು ಆಯೋಜಿಸಿರುವ ಪ್ರತಿಭಟನೆ ರೈತರ ಶಕ್ತಿಪ್ರದರ್ಶನವಲ್ಲ. ಇದು ಕೊರೋನ ನಿಯಮಾವಳಿಯ ಹಿನ್ನೆಲೆಯಲ್ಲಿ, ಸಾಂಕೇತಿಕ ಪ್ರತಿಭಟನೆಯಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚದ(ಎಸ್ಕೆಎಂ) ಮುಖಂಡರು ಹೇಳಿರುವುದಾಗಿ ವರದಿಯಾಗಿದೆ. ‌

ನಾವು ಗ್ರಾಮದಲ್ಲಿ, ನಗರಗಳಲ್ಲಿ ಮತ್ತು ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಕಪ್ಪು ಟರ್ಬನ್, ಶಾಲು ಅಥವಾ ಬಟ್ಟೆ ಧರಿಸಿ ಪ್ರತಿಭಟನೆ ನಡೆಯಲಿದೆ. ರೈತರು ತಮ್ಮ ಮನೆಯ ಮಾಡಿನ ಮೇಲೆ, ಟ್ರ್ಯಾಕ್ಟರ್ ಮೇಲೆ ಕಪ್ಪು ಧ್ವಜ ಹಾರಿಸುತ್ತಾರೆ. ಪ್ರತೀ ಗ್ರಾಮದಲ್ಲಿ ಮೋದಿ ಸರಕಾರದ ಪ್ರತಿಕೃತಿ ದಹನ ಹಾಘೂ ಪಂಜಾಬ್ ಮತ್ತು ದಿಲ್ಲಿ ಗಡಿಭಾಗದಲ್ಲಿ ಧರಣಿ ನಡೆಸುತ್ತೇವೆ. ಸಂಖ್ಯೆಯ ಲೆಕ್ಕಾಚಾರಕ್ಕೆ ನಾವು ಗಮನ ನೀಡುವುದಿಲ್ಲ. ಕೊರೋನ ನಿಯಮ ಪಾಲಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಯಲಿದೆ ಎಂದು ಎಸ್ಕೆಎಂ ಸದಸ್ಯ, ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ಡಾ. ದರ್ಶನ್ ಪಾಲ್ ಹೇಳಿದ್ದಾರೆ. 

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಪ್ರತಿಭಟನೆಯ ಹೆಸರಲ್ಲಿ ಗುಂಪುಗೂಡುವುದನ್ನು ಸಮರ್ಥಿಸಿಕೊಳ್ಳುವಿರಾ ಎಂದು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ ರೈತರ ಸ್ಥಿತಿಯ ಹೊಣೆಹೊತ್ತುಕೊಳ್ಳದೆ, ರೈತರನ್ನೇ ವಿಲನ್ಗಳಂತೆ ಚಿತ್ರಿಸುತ್ತಿದೆ. ರೈತರು ನ್ಯಾಯಯುತ ಬೇಡಿಕೆಗಳಿಗಾಗಿ ತಮ್ಮ ಪ್ರಾಣವನ್ನೇ ಅಪಾಯಕ್ಕೆ ಒಡ್ಡಿದ್ದಾರೆ ಎಂದರು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಪ್ರತಿಭಟನೆಯ ಭವಿಷ್ಯದ ರೂಪುರೇಶೆಯ ಬಗ್ಗೆ ನಿರ್ಧರಿಸಲು ಗ್ರಾಮಮಟ್ಟದ ಸಭೆ ನಡೆಸಿದ್ದೇವೆ. ಪ್ರತಿಭಟನೆ ಮುಂದುವರಿಯಬೇಕು(ಕಡಿಮೆ ಸಂಖ್ಯೆಯಲ್ಲಿ) ಎಂಬುದು ಗ್ರಾಮೀಣ ರೈತರ ನಿಲುವಾಗಿದೆ ಎಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಸುಖ್ದೇವ್ ಸಿಂಗ್ ಕೊಖ್ರಿಕಾಲನ್ ಹೇಳಿದ್ದಾರೆ.
 
ಕೊರೋನ ಸೋಂಕು ಹೆಚ್ಚಲು ರೈತರ ಪ್ರತಿಭಟನೆ ಕಾರಣ ಎಂದು ಸರಕಾರ ಸುಳ್ಳು ಹೇಳುತ್ತಿದೆ. ನಾವು ದಿಲ್ಲಿಯಲ್ಲಿ ತೆರೆದ ಬಯಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರತಿಭಟನಾಕಾರರ ಸಂಖ್ಯೆಯೂ ಕಡಿಮೆಯಾಗಿದೆ. ಮೇ 26ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಗರಿಷ್ಟ 4000 ಸದಸ್ಯರನ್ನು ಕಳಿಸುತ್ತಿದ್ದೇವೆ. ನಾವು ಪ್ರತಿಭಟನಾ ಸ್ಥಳದಲ್ಲಿ ಪ್ರತೀ ದಿನ ಸ್ಯಾನಿಟೈಸ್ ಮಾಡುತ್ತೇವೆ. ರೈತರಲ್ಲಿ ಸೋಂಕಿನ ಸೌಮ್ಯ ಲಕ್ಷಣ ಕಂಡುಬಂದರೂ ಅವರನ್ನು ಪ್ರತ್ಯೇಕವಾಗಿರಿಸುವ ವ್ಯವಸ್ಥೆಯಿದೆ. ಪ್ರತಿಯೊಂದು ಪ್ರತಿಭಟನಾ ಸ್ಥಳದಲ್ಲಿ ವೈದ್ಯರ ತಂಡ ನಮ್ಮೊಂದಿಗಿದೆ. ಸರಕಾರಕ್ಕಿಂತ ಹೆಚ್ಚು ಹೊಣೆಗಾರಿಕೆ ನಮಗಿದೆ ಎಂದವರು ಹೇಳಿದ್ದಾರೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ. ಈ ಹಿಂದೆ 15,000ದಿಂದ 20,000 ರೈತರು ಸೇರಿದ್ದರೆ ಈಗ ಸುಮಾರು 5,000ಕ್ಕೆ ಕಡಿತಗೊಳಿಸಲಾಗಿದೆ. ಪ್ರತೀ 15 ದಿನಕ್ಕೆ ಒಂದು ಗ್ರಾಮದಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೇವಲ 5 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
 
ರೈತರು ಕೊರೋನ ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಸಿದ್ಧರಿದ್ದಾರೆ ಎಂದು ಬಿಕೆಯು ಮಾಧ್ಯಮ ಸಂಯೋಜಕ ವೀರ್ಪಾಲ್ ಸಿಂಗ್ ಹೇಳಿದ್ದಾರೆ. ಎನ್ಜಿಒ ಸಂಸ್ಥೆಯೊಂದು ಪ್ರತಿಭಟನಾ ನಿರತ ರೈತರಿಗೆ 1 ಲಕ್ಷ ಮಾಸ್ಕ್ ಹಾಗೂ 50,000 ಸ್ಯಾನಿಟೈಸರ್ಸ್ ಒದಗಿಸಿದೆ. ಸುಮಾರು 20 ಮಂದಿಗೆ ಪ್ರತಿಭಟನಾ ಸ್ಥಳದಲ್ಲೇ ‘ಲೆವೆಲ್ 2’ರ ಚಿಕಿತ್ಸೆ ನೀಡುವ ವ್ಯವಸ್ಥೆ ನಮ್ಮಲ್ಲಿದೆ ಎಂದವರು ಹೇಳಿದ್ದಾರೆ.

ಗಡಿಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಡಿ, ನಿಮ್ಮ ನಿಮ್ಮ ಗ್ರಾಮದಲ್ಲೇ ಎನ್ಡಿಎ ಸರಕಾರದ ಪ್ರತಿಕೃತಿ ದಹಿಸಿ ನಿಮ್ಮ ಆಕ್ರೋಶ ಪ್ರದರ್ಶಿಸಿ ಎಂದು ರೈತರಿಗೆ ಮನವಿ ಮಾಡಿಕೊಂಡಿರುವುದಾಗಿ ಆಲ್ ಇಂಡಿಯಾ ಕಿಸಾನ್ ಸಭಾ, ಹರ್ಯಾನ ಘಟಕಾಧ್ಯಕ್ಷ ಪ್ರೇಮ್ಸಿಂಗ್ ಗೆಹ್ಲೋಟ್ ಹೇಳಿದ್ದಾರೆ. ಮೇ 26ರಂದು ತೊಡುವ ಕಪ್ಪು ಬಣ್ಣದ ಟರ್ಬನ್ ಅನ್ನು ರೈತರ ಬೇಡಿಕೆ ಈಡೇರುವವರೆಗೆ ಬದಲಿಸುವುದಿಲ್ಲ ಎಂದು ಪಂಜಾಬ್ ಕಿಸಾನ್ ಯೂನಿಯನ್ ಅಧ್ಯಕ್ಷ ರುಲ್ಡುಸಿಂಗ್ ಮಾನ್ಸ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News