ಇಂತಹ ಸರ್ಕಾರ ಅಧಿಕಾರಕ್ಕೆ ತಂದೆವಲ್ಲ ಎಂದು ವ್ಯಥೆಯಾಗುತ್ತಿದೆ: ಪರಿಷತ್ ಸದಸ್ಯ ಎಚ್.ವಿಶ್ವನಾಥ್

Update: 2021-05-26 10:17 GMT

ಮೈಸೂರು, ಮೇ 26: ಜಿಂದಾಲ್ ಕಂಪನಿಗೆ ಭೂಮಿ ನೀಡಲು ವಿರೋಧಿಸುತ್ತಿದ್ದ ಬಿಜೆಪಿಯವರೇ ಇಂದು ಆ ಕಂಪನಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಇಂತಹ ಸರ್ಕಾರ ಅಧಿಕಾರಕ್ಕೆ ತಂದೆವಲ್ಲ ಎಂದು ವ್ಯಥೆಯಾಗುತ್ತಿದೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಭೂಮಿ ನೀಡಬಾರದು ಎಂದು ಇದೇ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯವರು ವಿಧಾನಸೌದದ ಒಳಗೆ ಧರಣಿ ನಡೆಸಿದರು. ಆದರೆ ಇಂದು ಇದೇ ಬಿಜೆಪಿಯವರು 1 ಕೋಟಿ ರೂ. ಗೆ ಬೆಲೆಬಾಳುವ 3,667 ಎಕರೆ ಜಮೀನನ್ನು ಕೇವಲ 1.12 ಲಕ್ಷ ರೂಗಳಿಗೆ ಮಾರಾಟ ಮಾಡಿರುವುದು ದುರದೃಷ್ಟಕರ. ಇಂತಹ ಸರ್ಕಾರವನ್ನು ನಾವು ಅಧಿಕಾರಕ್ಕೆ ತಂದೆವಲ್ಲ ಎಂಬ ವ್ಯಥೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಳೆ ಸಚಿವ ಸಂಪುಟದ ಸಭೆ ಕರೆಯಲಾಗಿದೆ. ಅಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ  ಮಾಡಿರುವುದರ ಬಗ್ಗೆ ಅಧಿಕೃತಗೊಳಿಸುವ ಚರ್ಚೆಗಳಾಗಬಹುದು. ಹಾಗಾಗಿ ಸಚಿವ ಸಂಪುಟದ ಸದಸ್ಯರು ಇದಕ್ಕೆ ಸಮ್ಮತಿ ಸೂಚಿಸಬಾರದು ಎಂದು ಮನವಿ ಮಾಡಿದರು.

ಈಗಾಗಲೇ ಜಿಂದಾಲ್ ಗೆ ಭೂಮಿ ಮಾರಾಟ ಮಾಡಿರುವುದರ ವಿರುದ್ಧ, ಶಾಸಕರಾದ ಉದಯ ಗರುಡಾಚಾರ್, ಪ್ರಕಾಶ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಶಾಸಕಿ ಪೂರ್ಣಿಮ ಸೇರಿದಂತರ ನಾನು ಸಹ ವಿರೋಧ ಮಾಡಿದ್ದೇನೆ. ಹಾಗಾಗಿ ಸಚಿವರು ಇದಕ್ಕೆ ಅವಕಾಶ ಕಲ್ಪಿಸಿಕೊಡಬಾರದು ಎಂದರು.

ದೇಶದಲ್ಲಿ ಕೋರೋನ ಸೋಂಕಿನಿಂದ ರಾಜ್ಯದಲ್ಲೆ ಹೆಚ್ಚು ಸಾವುಗಳು ಸಂಭವಿಸುತ್ತಿದೆ. ಕೊರೋನ ನಿಯಂತ್ರ ಮಾಡಲಾಗದೆ ಆರೋಗ್ಯ ಇಲಾಖೆಯನ್ನು 5 ಭಾಗಗಳನ್ನಾಗಿ ಮಾಡಲಾಗಿದೆ. ಹಾಸಿಗೆಗೊಬ್ಬ ಮಂತ್ರಿ, ಆಕ್ಸಿಜನ್ ಗೊಬ್ಬ ಮಂತ್ರಿ ಇದ್ದಾರೆ. ಇವರು ಯಾಕೆ ಕೊರೋನ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ. ಪ್ರಭಾವಿ ಖಾತೆಗಳನ್ನು ಹಿಂದಿರುವ ಬಸವರಾಜ ಬೊಮ್ಮಾಯಿ, ಅಶೋಕ ಸೇರಿದಂತೆ ಅನೇಕರನ್ನು ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಕೂಗು ಪ್ರಬಲವಾಗಿ ಎದ್ದಿದೆ. ನಾಯಕತ್ವ ಬದಲಾಯಿಸುವುದು ಹೈಕಮಾಂಡ್ ಗೆ ಬಿಟ್ಟಿದ್ದು. ಆದರೆ ಕೆಲವು ಸಚಿವರು ರಾಜಕಾರಣ ಮಾಡುವ ದೃಷ್ಟಿಯಿಂದ ಜೂನ್ 7ರ ನಂತರ ಮತ್ತೆ ಲಾಕ್ ಡೌನ್ ಮುಂದುವರೆಯಲಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ನಿಮ್ಮ ರಾಜಕೀಯ ತೆವಲಿಗೆ ಜನರನ್ನು ಬಲಿಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಾಕ್ಡೌನ್ ಮಾಡಿದರೆ ಜನರ ಪರಿಸ್ಥಿತಿ ಏನು ಎಂಬುದನ್ನು ತಿಳಿದಿದ್ದೀರ? ಜನ ಕೋವಿಡ್ ನಿಂದ ಸಾಯುವುದಿಲ್ಲ, ಸಂಸಾರ ನಡೆಸಲು ಆಗದೆ ಸಾಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಒಂದು ವೇಳೆ ನೀವು ಲಾಕ್ ಡೌನ್ ಮಾಡಲೇ ಬೇಕು ಎನ್ನುವುದಾದರೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಿ ನಂತರ ಲಾಕ್ಡೌನ್ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಿಂಧೂರಿ ಪರ ಬ್ಯಾಟ್ ಬೀಸಿದ ವಿಶ್ವನಾಥ್: ಅನವಶ್ಯಕವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಿಜೆಪಿ ನಾಯಕರು ಬಿದ್ದಿರುವುದು ಸರಿಯಲ್ಲ ಎಂದು ವಿಶ್ವನಾಥ್ ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿದರು.

ಜಿಲ್ಲಾಧಿಕಾರಿಯನ್ನೇ ಬಿಟ್ಟು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಹಾಗಿದ್ದ ಮೇಲೆ ಇದಕ್ಕೆ ಯಾವ ಮಾನ್ಯತೆ ಇದೆ. ರೂರಲ್ ಟಾಸ್ಕಫೋರ್ಸ್, ಹರ್ಬನ್, ಆಕ್ಸಿಜನ್, ಬೆಡ್ ಹೀಗೆ ಎಲ್ಲದಕ್ಕೂ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೀರಿ. ಜಿಲ್ಲಾಧಿಕಾರಿಯೇ ಇಲ್ಲದ ಮೇಲೆ ಸಂಸದರ ಪಾತ್ರ ಏನು ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದಾರೆಯೇ ಹೊರತು ಜಿಲ್ಲಾ ಮಂತ್ರಿಗಳ ಜೊತೆ ಮಾತನಾಡಲಿಲ್ಲ. ಜಿಲ್ಲೆಯ ಪರಮಾಧಿಕಾರ ಯಾರಿಗೆ ಇದೆ ಎಂಬುದನ್ನು ಮೋದಿ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.

ಜಿಲ್ಲಾಮಂತ್ರಿ ಜಿಲ್ಲೆಗೆ ಮಾರ್ಗದರ್ಶಕ ಅಷ್ಟೆ. ಜಿಲ್ಲಾಧಿಕಾರಿಯೇ ಸುಪ್ರೀಂ. ಜಿಲ್ಲಾ ಮಂತ್ರಿ ಇರುವುದು ರಾಷ್ಟ್ರೀಯ ಹಬ್ಬಗಳ ಆಚರಣೆಗಷ್ಟೆ. ಈ ಆಚರಣೆಗಳಲ್ಲಿ ಭಾಗವಹಿಸುವ ಮುನ್ನ ಸರ್ಕಾರದಿಂದ ಅಧಿಕೃತ ಆದೇಶ ಹೊತಡಿಸಬೇಕು, ಆದರೆ ಇವರು ರಚಿಸಿರುವ ಟಾಸ್ಕ್ ಫೋರ್ಸ್ ಗೆ ಯಾವ ಸರ್ಕಾರಿ ಆದೇಶ ಇದೆ ಎಂದು ಪ್ರಶ್ನಿಸಿದರು.

ಅಧಿಕಾರಿಗಳಲ್ಲಿ ಜಗಳ ತಂದು ಹಾಕಬೇಡಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಂತಹ ಜಿಲ್ಲಾಧಿಕಾರಿಯೇ ಇಲ್ಲ ಎನ್ನುತ್ತಿದ್ದ ಪ್ರತಾಪ್ ಸಿಂಹ ಈಗ ಏಕೆ ಜಿಲ್ಲಾಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪ್ರಶ್ನಿಸಿದ ವಿಶ್ವನಾಥ್, ಪ್ರತಾಪ್ ಸಿಂಹ ಅಧಿಕಾರಿಗಳ ಮಧ್ಯೆ ಜಗಳ ತಂದು ಹಾಕುವ ಕೆಲಸ ಮಾಡುತ್ತಿದ್ದಾರೆ. ಕಾರ್ಪೋರೇಷನ್ ಕಮೀಷನರ್ ಹೆಗಲ ಮೇಲೆ ಗನ್ ಇಟ್ಟು ಜಿಲ್ಲಾಧಿಕಾರಿಗಳನ್ನು ಶೂಟ್ ಮಾಡುತ್ತಿದ್ದಾರೆ ರಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News