ಒಂದು ದಶಕದಲ್ಲೇ ಗರಿಷ್ಠ ಮಟ್ಟ ತಲುಪಿದ ಖಾದ್ಯ ತೈಲಗಳ ಬೆಲೆ

Update: 2021-05-26 10:39 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ : ದೇಶದಲ್ಲಿ ತೆಂಗಿನೆಣ್ಣೆ, ಸಾಸಿವೆ ಎಣ್ಣೆ, ವನಸ್ಪತಿ, ಸೋಯಾ, ಸೂರ್ಯಕಾಂತಿ ಹಾಗೂ ತಾಳೆ ಎಣ್ಣೆ-ಹೀಗೆ ಎಲ್ಲಾ ಖಾದ್ಯ ತೈಲಗಳ ಬೆಲೆ ಈ ತಿಂಗಳು ಕಳೆದ ಒಂದು ದಶಕದಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಅಧಿಕೃತ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನತೆಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಖಾದ್ಯ ತೈಲಗಳ ಬೆಲೆ ಇಳಿಸಲು ಎಲ್ಲಾ ಸಾಧ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೋಮವಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಸಂಬಂಧಿತ ಉದ್ದಿಮೆಗಳ ಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಸೂಚಿಸಿದೆ ಎಂದು ವರದಿಯಾಗಿದೆ.

ಭಾರತದ ಖಾದ್ಯ ತೈಲಗಳ ಶೇ.60ರಷ್ಟು ಬೇಡಿಕೆಯನ್ನು ಆಮದು ಮೂಲಕ ಈಡೇರಿಸಲಾಗುತ್ತಿದೆ. ಆರು ಖಾದ್ಯ ತೈಲಗಳ ಸರಾಸರಿ ಮಾಸಿಕ ರಿಟೇಲ್ ದರಗಳು ಜನವರಿ 2010ರಿಂದೀಚೆಗೆ ಈಗ ಗರಿಷ್ಠ ಮಟ್ಟ ತಲುಪಿದೆ.

ಸಾಸಿವೆ ಎಣ್ಣೆಯ ಒಂದು ಕೆಜಿ ರಿಟೇಲ್ ದರ  ಈ ತಿಂಗಳು ರೂ. 164.44 ಆಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಈ ಎಣ್ಣೆಯ ಬೆಲೆ ರೂ .118.25 ಆಗಿತ್ತು. ಎಪ್ರಿಲ್ ತಿಂಗಳಿನಲ್ಲಿ ಸಾಸಿವೆ ಎಣ್ಣೆಯ ಬೆಲೆ ಕೆಜಿಗೆ ರೂ 155.39 ಆಗಿತ್ತು. ಹತ್ತು ವರ್ಷಗಳ ಹಿಂದೆ, ಮೇ 2010ರಲ್ಲಿ ಈ ಎಣ್ಣೆಯ ಬೆಲೆ ಕನಿಷ್ಠ ರೂ 63.05 ಆಗಿತ್ತು.

ತಾಳೆ ಎಣ್ಣೆ ಅಥವಾ ಪಾಮೋಲೀನ್ ಎಣ್ಣೆ ಬೆಲೆ ಕೂಡ ಭಾರೀ ಏರಿಕೆ ಕಂಡಿದೆ. ಈ ವರ್ಷ ಈ ಎಣ್ಣೆಯ ಸರಾಸರಿ ರಿಟೇಲ್ ದರ ಕೆಜಿಗೆ ರೂ. 131.69 ಅಗಿದೆ.  ಇದು ಕಳೆದ 11 ವರ್ಷಗಳಲ್ಲಿಯೇ ಗರಿಷ್ಠವಾಗಿದ್ದು ,ಕಳೆದ ವರ್ಷ ಇದೇ ಅವಧಿಯಲ್ಲಿ ಕೆಜಿಗೆ ರೂ 88.27 ಆಗಿದ್ದು ಒಂದು ವರ್ಷದಲ್ಲಿ ಬೆಲೆ ಶೇ.49ರಷ್ಟು ಏರಿಕೆ ಕಂಡಿದೆ. ಎಪ್ರಿಲ್ 2010ರಲ್ಲಿ ಪಾಮೋಲೀನ್ ಎಣ್ಣೆ ಬೆಲೆ ಕೆಜಿಗೆ ರೂ 49.13 ಆಗಿತ್ತು.

ತೆಂಗಿನೆಣ್ಣೆಯ ಸರಾಸರಿ ಮಾಸಿಕ ರಿಟೇಲ್ ದರ ರೂ 175.55 ಆಗಿದ್ದರೆ ವನಸ್ಪತಿ ಬೆಲೆ ಕೆಜಿಗೆ ರೂ. 128.7, ಸೋಯಾ ಎಣ್ಣೆಯ ಬೆಲೆ ರೂ. 148.27 ಹಾಗೂ ಸೂರ್ಯಕಾಂತಿ ಎಣ್ಣೆಯ ಬೆಲೆ ರೂ. 169.54 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News