ಸಿದ್ದರಾಮಯ್ಯರಿಗಾಗಿ ಚಾಮರಾಜಪೇಟೆ ಕ್ಷೇತ್ರ ತ್ಯಾಗ ಮಾಡಲು ಸಿದ್ಧ: ಝಮೀರ್ ಅಹ್ಮದ್ ಖಾನ್

Update: 2021-05-26 14:34 GMT

ಬೆಂಗಳೂರು, ಮೇ 26: ರಾಜ್ಯದ ಹಾಗೂ ಬಡವರ ಕಲ್ಯಾಣದ ದೃಷ್ಟಿಯಿಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು. ಆದುದರಿಂದ, ಅವರು ಎಲ್ಲೋ ದೂರದ ಬಾದಾಮಿ ಕ್ಷೇತ್ರದ ಬದಲು ನಾನು ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಕ್ಷೇತ್ರ ತ್ಯಾಗ ಮಾಡಲು ಸಿದ್ಧ ಎಂದು ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಬುಧವಾರ ಚಾಮರಾಜಪೇಟೆಯಲ್ಲಿರುವ ಶಾಸಕರ ಕಚೇರಿ ಆವರಣದಲ್ಲಿ ಆಟೋ ಚಾಲಕರಿಗೆ ರೇಷನ್ ಹಾಗೂ ನಗದು ನೆರವು ನೀಡುವ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

2018ರಲ್ಲಿ ನಾವು ತಪ್ಪು ಮಾಡಿದೆವು. ಸಿದ್ದರಾಮಯ್ಯ ಸರಕಾರದಲ್ಲಿ ಕೊಟ್ಟಿರುವ ಕಾರ್ಯಕ್ರಮಗಳನ್ನು ಈ ಹಿಂದೆ ಯಾರು ಕೊಟ್ಟಿರಲಿಲ್ಲ, ಮುಂದೆ ಕೊಡಲು ಸಾಧ್ಯವಾಗುವುದಿಲ್ಲ. ನಮ್ಮ ರಾಜ್ಯಕ್ಕೆ ಹಾಗೂ ಬಡವರಿಗೆ ಒಳ್ಳೆಯದಾಗಬೇಕಾದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ರಾಜ್ಯದೆಲ್ಲೆಡೆ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಆದುದರಿಂದ, ಬಾದಾಮಿ ಕ್ಷೇತ್ರ ಬೇಡ. ನೀವು ರಾಜ್ಯಾದ್ಯಂತ ಪ್ರವಾಸ ಮಾಡಿ, ನಾನು ನನ್ನ ಕ್ಷೇತ್ರವನ್ನು ನಿಮಗೆ ಬಿಟ್ಟುಕೊಡಲು ಸಿದ್ಧನಿದ್ದೇನೆ. ನೀವು ಕೇವಲ ನಾಮಪತ್ರ ಸಲ್ಲಿಕೆ ಮಾಡಿ ಹೋಗಿ, ನಿಮ್ಮನ್ನು ಕನಿಷ್ಠ 70 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ನಾನು ಆಹ್ವಾನ ನೀಡಿದ್ದೇನೆ. ಆದರೆ, ಈವರೆಗೆ ಅವರು ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಬಿಜೆಪಿಯವರು ಯಾವ ದುಡ್ಡಿನಿಂದ ಜನರಿಗೆ ನೆರವು ನೀಡುತ್ತಿದ್ದಾರೆ. ಲಸಿಕೆ, ಚಿಕಿತ್ಸೆ ಎಲ್ಲವೂ ಜನರ ತೆರಿಗೆ ಹಣದಿಂದಲೆ ತಾನೇ ಖರ್ಚು ಮಾಡುತ್ತಿರುವುದು. ನಾವು ನಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಎರಡು ಕೋಟಿ ರೂ.ಗಳಲ್ಲಿ ಒಂದು ಕೋಟಿ ರೂ.ಗಳನ್ನು ಲಸಿಕೆಗಾಗಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಕಾಂಗ್ರೆಸ್‍ನವರಿಗೆ ಲಸಿಕೆ ನೀಡಲು ಅವಕಾಶ ಮಾಡಿಕೊಟ್ಟರೆ ಅವರ ಜನಪ್ರಿಯತೆ ಹೆಚ್ಚಾಗುತ್ತದೆ ಎಂದು ಬಿಜೆಪಿಯವರು ಅನುಮತಿ ನೀಡುತ್ತಿಲ್ಲ ಎಂದು ಅವರು ದೂರಿದರು.

ಕೋವಿಡ್ ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಆದುದರಿಂದ, ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಜನರ ಸೇವೆ ಮಾಡುತ್ತಿದ್ದಾರೆ. ನಾನು ನನ್ನ ಸ್ವಂತ ಖರ್ಚಿನಿಂದ 80 ಹಾಸಿಗೆಗಳ ಆಸ್ಪತ್ರೆ ತೆರೆದಿದ್ದೇನೆ. ಪುಲಿಕೇಶಿನಗರದಲ್ಲಿ ಅಲ್ಲಿನ ಯುವಕರೇ ಐಸಿಯು ಸಹಿತ 80 ಹಾಸಿಗೆಗಳ ಆಸ್ಪತ್ರೆ ತೆರೆದಿದ್ದಾರೆ. ಈ ಸರಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದರೆ, ಬೇರೆಯವರು ಯಾಕೆ ಬರಬೇಕಿತ್ತು ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

ಸರಕಾರ ಹೇಗೆ ನಡೆಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಬಳಿ ಪಾಠ ಮಾಡಿಸಿಕೊಳ್ಳಲಿ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಒಂದೇ ಒಂದು ಕಪ್ಪು ಚುಕ್ಕೆ ಅವರ ಮೇಲೆ ಇಲ್ಲ. ಜನರ ಒಳಿತಿಗಾಗಿ ಮುಖ್ಯಮಂತ್ರಿ ಅವರ ಬಳಿ ಹೋಗಿ ಸಲಹೆ, ಚರ್ಚೆ ಮಾಡಲಿ ಎಂದು ಅವರು ಹೇಳಿದರು.

ತೇಜಸ್ವಿ ಸೂರ್ಯ ಎಲ್ಲಿದ್ದಾರೆ

ಬಿಬಿಎಂಪಿ ಬೆಡ್ ಬ್ಲಾಕಿಂಗ್ ಅಕ್ರಮದಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಆಪ್ತ ಬಾಬು ಎಂಬುವವರ ಕೈವಾಡ ಇರುವುದು ತನಿಖೆಯಿಂದ ಸಾಬೀತಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈಗ ಎಲ್ಲಿದ್ದಾರೆ. ಯಾಕೆ ಈ ಬಗ್ಗೆ ಮೌನವಹಿಸಿದ್ದಾರೆ? ಈ ಅಕ್ರಮದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿ ನೀಡಿರುವ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.

-ಝಮೀರ್ ಅಹಮದ್ ಖಾನ್, ಶಾಸಕರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News