ಫೆಲೆಸ್ತೀನ್ ಕುಟುಂಬಗಳ ಒಕ್ಕಲೆಬ್ಬಿಸುವಿಕೆ ಪ್ರಕರಣದ ತೀರ್ಪು ಮುಂದೂಡಿದ ಇಸ್ರೇಲ್ ನ್ಯಾಯಾಲಯ

Update: 2021-05-26 18:32 GMT

ಜೆರುಸಲೇಮ್, ಮೇ 26: ಇಸ್ರೇಲ್ ಆಕ್ರಮಿತ ಪೂರ್ವ ಜೆರುಸಲೇಮ್‌ನ ಸಿಲ್ವಾನ್ ಜಿಲ್ಲೆಯಿಂದ ಫೆಲೆಸ್ತೀನಿ ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೊಕದ್ದಮೆಯ ಮೇಲಿನ ತೀರ್ಪನ್ನು ಇಸ್ರೇಲ್‌ನ ನ್ಯಾಯಾಲಯವೊಂದು ಬುಧವಾರ ಮುಂದೂಡಿದೆ.

2020ರಲ್ಲಿ ಇಸ್ರೇಲ್‌ನ ಇನ್ನೊಂದು ನ್ಯಾಯಾಲಯವು ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಕನವಿ ಸಲ್ಲಿಸಲಾಗಿತ್ತು. ಮೂಲತಃ ಅರಬ್ ಜಿಲ್ಲೆಯಲ್ಲಿ ಯಹೂದಿಯರು ನೆಲೆಸಲು ಸಾಧ್ಯವಾಗುವಂತೆ ಅಲ್ಲಿನ ಏಳು ಫೆಲೆಸ್ತೀನ್ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಇಸ್ರೇಲ್ ಸರಕಾರದ ಪ್ರಸ್ತಾವಕ್ಕೆ ನ್ಯಾಯಾಲಯವು ಅಂಗೀಕಾರ ನೀಡಿತ್ತು.

ಪೂರ್ವ ಜೆರುಸಲೇಮ್‌ನಲ್ಲಿ ಯಹೂದಿ ಕಾಲನಿಗಳನ್ನು ನಿರ್ಮಿಸುವ ಇಸ್ರೇಲ್ ಸರಕಾರದ ಯೋಜನೆಯಂತೆ ಅಲ್ಲಿಂದ ಫೆಲೆಸ್ತೀನಿ ಕುಟುಂಬಗಳನ್ನು ಹೊರದಬ್ಬಲು ಸರಕಾರ ನಿರ್ಧರಿಸಿತ್ತು.

ಪೂರ್ವ ಜೆರುಸಲೇಮನ್ನು ಫೆಲೆಸ್ತೀನೀಯರು ತಮ್ಮ ಭವಿಷ್ಯದ ಸ್ವತಂತ್ರ ದೇಶದ ರಾಜಧಾನಿ ಎಂಬುದಾಗಿ ಭಾವಿಸಿದ್ದಾರೆ.

ತೀರ್ಪು ನೀಡಬೇಕಾಗಿದ್ದ ಪೂರ್ವ ಜೆರುಸಲೇಮ್‌ನ ಸಲಾಹುದ್ದೀನ್ ರಸ್ತೆಯಲ್ಲಿರುವ ಇಸ್ರೇಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಗೆ ನೂರಾರು ಫೆಲೆಸ್ತೀನೀಯರು ನೆರೆದಿದ್ದರು ಹಾಗೂ ಫೆಲೆಸ್ತೀನೀಯರನ್ನು ಒಕ್ಕಲೆಬ್ಬಿಸುವ ಪ್ರಸ್ತಾವವನ್ನು ವಿರೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News