''ಪಾಕ್ ಪ್ರಧಾನಿಗೆ ಹಾರೈಸುವ ಮೋದಿಗೆ ಸ್ವಾತಂತ್ರ್ಯ ಹೋರಾಟಗಾರರ ನಿಧನಕ್ಕೆ ಸಂತಾಪ ಸೂಚಿಸಲು ಸಮಯವಿಲ್ಲ''

Update: 2021-05-27 11:55 GMT

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ಅವರು ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೆಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ರಾಜಕೀಯ, ಸಾಮಾಜಿಕ ನಾಯಕರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಆದರೆ ಗಣ್ಯರು, ರಾಜಕೀಯ ನಾಯಕರ ನಿಧನಕ್ಕೆ ಸಂತಾಪ ಸೂಚಿಸುವ ಪ್ರಧಾನಿ ನರೇಂದ್ರ ಮೋದಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸುವ ಯಾವುದೇ ಹೇಳಿಕೆ, ಟ್ವೀಟ್ ಮಾಡದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಹೆಚ್.ಎಸ್.ದೊರೆಸ್ವಾಮಿ ಅವರು ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದು, ಆದರೆ ಇದುವರೆಗೂ ಪ್ರಧಾನಿ ಮೋದಿಯಾಗಲಿ, ಪ್ರಧಾನ ಮಂತ್ರಿ ಕಚೇರಿಯಿಂದಾಗಲೀ ದೊರೆಸ್ವಾಮಿ ಅವರ ನಿಧನದ ಬಗ್ಗೆ ಯಾವುದೇ ಸಂತಾಪ ವ್ಯಕ್ತವಾಗಿಲ್ಲ. ಇದನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

''ಮಹಾನ್ ವ್ಯಕ್ತಿ ಹೆಚ್.ಎಸ್.ದೊರೆಸ್ವಾಮಿ ಅವರ ನಿಧನದ ಬಗ್ಗೆ ಪ್ರಧಾನಿ ಕಚೇರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಡೆಯಿಂದ ಯಾವುದೇ ಟ್ವೀಟ್ ಇಲ್ಲ. ನಾನು ಇನ್ನು ಹೆಚ್ಚು ಹೇಳಬೇಕೇ?'' ಎಂದು ರಾಮಚಂದ್ರ.ಎಮ್ ಎಂಬವರು ಟ್ವೀಟ್ ಮಾಡಿದ್ದಾರೆ.

'ಪಾಕ್ ಪ್ರಧಾನಿ ಕೋವಿಡ್‌ನಿಂದ ಚೇತರಿಸಿಕೊಳ್ಳಬೇಕೆಂದು ಹಾರೈಸಿ ಟ್ವೀಟ್ ಮಾಡಲು ಪ್ರಧಾನಿ ಸಮಯ ಬಿಡುವು ಮಾಡಿಕೊಂಡರು. ಆದರೆ ಸ್ವಾತಂತ್ರ್ಯ ಹೋರಾಟಗಾರರ ನಿಧನಕ್ಕೆ ಸಂತಾಪ ಸೂಚಿಸಲು ಅವರಿಗೆ ಸಮಯವಿಲ್ಲ. ಆದರೆ ಇವರು ನಿಜವಾದ ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ' ಎಂದು ಸೋಮಶೇಖರ್ ಎಂಬವರು ಕಮೆಂಟ್ ಮಾಡಿದ್ದಾರೆ.

'ದೊರೆಸ್ವಾಮಿ ಅವರು ಹಿಂದಿಯವರಾಗಿದ್ದರೆ ಖಂಡಿತವಾಗಿಯೂ ಅವರು ಸಂತಾಪ ಸೂಚಿಸುತ್ತಿದ್ದರು, ಆದರೆ ದೊರೆಸ್ವಾಮಿ ಅವರು ಹೆಮ್ಮೆಯ ಕನ್ನಡಿಗ ಆಗಿದ್ದರಿಂದ ಅವರು ಹಾಗೆ ಮಾಡಲಿಲ್ಲ' ಎಂದು ಗಿರೀಶ್ ಎಂಬವರು ಕುಟುಕಿದ್ದಾರೆ.

'ಮೊಸಳೆ ಕಣ್ಣೀರು ಕಂಡು ನಕ್ಕರು. ಇನ್ನು ಮೊಸಳೆ ಸಂತಾಪ ಕಂಡರೆ, ಮೇಲಿಂದಲೇ ದೊರೆಸ್ವಾಮಿ ತಾತ ನಕ್ಕಿರೋರು, ಬಿಡಿ. ಆ ದರಿದ್ರ ಬ್ರಿಟಿಷ್ ಬೂಟು ನೆಕ್ಕಿದವರ ಪರಮ ಶಿಷ್ಯಂದಿರು ಸಂತಾಪ ಸೂಚಿಸಿದರೆಷ್ಟು ಬಿಟ್ಟರೆಷ್ಟು, ಅಂದಿರೋರು, ತಾತಾ!' ಎಂದು ರಾಘವ ಎಂಬವರು ಕಮೆಂಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯವಾಗಿ ಗಣ್ಯರು, ಸಾಮಾಜಿಕ, ರಾಜಕೀಯ ನಾಯಕರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡುತ್ತಾರೆ. ಕಳೆದ ವಾರ ಉತ್ತರ ಪ್ರದೇಶ ಸಚಿವ ವಿಜಯ್‌ ಕಶ್ಯಪ್‌ ನಿಧನರಾದಾಗ ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು. ಈ ತಿಂಗಳ ಆರಂಭದಲ್ಲಿ  ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಜಗಮೋಹನ್, ರಾಜ್ಯಸಭಾ ಸದಸ್ಯ ರಘುನಾಥ್ ಮೊಹಪತ್ರ ಅವರು ವಿಧಿವಶರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.

ಕಳೆದ ತಿಂಗಳು ಖ್ಯಾತ ಭಾಷಾ ತಜ್ಞ ಪ್ರೊ.ಜಿ ವೆಂಕಟಸುಬ್ಬಯ್ಯ ಅವರು ನಿಧನರಾಗಿದ್ದರು. ಇದರ ನಿಧನಕ್ಕೆ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ, ‘ಪ್ರೊ. ಜಿ.ವೆಂಕಟಸುಬ್ಬಯ್ಯ ಅವರ ನಿಧನವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿದೆ. ತಮ್ಮ ಕೆಲಸದ ಬಗ್ಗೆ ಸದಾ ಒಲವು ಹೊಂದಿದ್ದ ಅವರು ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದರು. ಓಂ ಶಾಂತಿ’ ಎಂದು ಉಲ್ಲೇಖಿಸಿದ್ದರು.

ಎಪ್ರಿಲ್ ಕೊನೆಯ ವಾರದಲ್ಲಿ ನಿಧನರಾದ ಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ಅವರ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿ, ಶೋಕ ವ್ಯಕ್ತಪಡಿಸಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನಾನು ಸಂತಾಪ ಸೂಚಿಸುತ್ತೇನೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದರು.

ಅಲ್ಲದೇ, ಕಳೆದ ತಿಂಗಳು ನಿಧನರಾದ ಆಜ್ ತಕ್ ಸುದ್ದಿ ಚಾನೆಲ್ ನಿರೂಪಕ ರೋಹಿತ್ ಸರ್ದಾನಾ ಅವರ ಬಗ್ಗೆ ಮೋದಿ ಸಂತಾಪ ವ್ಯಕ್ತಪಡಿಸಿ, 'ರೋಹಿತ್ ಸರ್ದಾನಾ ನಮ್ಮನ್ನು ಬೇಗನೆ ಅಗಲಿದ್ದಾರೆ. ಭಾರತದ ಪ್ರಗತಿಯ ಬಗ್ಗೆ ಉತ್ಸಾಹ ಹೊಂದಿದ್ದ ಮತ್ತು ಕರುಣಾಳು ಆತ್ಮ ರೋಹಿತ್ ಅವರನ್ನು ಅನೇಕ ಜನರು ಕಳೆದುಕೊಂಡಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದರು.

ಹೀಗೆ ಪ್ರತೀ ಬಾರಿಯೂ ಟ್ವೀಟ್ ಮೂಲಕ ಗಣ್ಯರು, ಸಾಮಾಜಿಕ, ರಾಜಕೀಯ ನಾಯಕರ ನಿಧನಕ್ಕೆ ಸಂತಾಪ ಸೂಚಿಸುವ ಪ್ರಧಾನಿ ಅಪ್ಪಟ ಗಾಂಧಿವಾದಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನದ ಬಗ್ಗೆ ಸಂತಾಪ ಸೂಚಿಸದೇ ಇರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. 

ಕ್ರಿಕೆಟಿಗ ಶಿಖರ್ ಧವನ್ ಕೈಬೆರಳಿಗೆ ಗಾಯವಾದಾಗ 'ಶೀಘ್ರದಲ್ಲೇ ಗುಣಮುಖರಾಗಿ ಮತ್ತೆ ತಂಡಕ್ಕೆ ವಾಪಸ್ ಬನ್ನಿ' ಎಂದು ಧೈರ್ಯ ತುಂಬುವ, ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದಾಗ 'ನಿಮ್ಮ ಕಠಿಣ ಪರಿಶ್ರಮ, ತ್ಯಾಗ ಎಂದೆಂದಿಗೂ ಸ್ಮರಣೀಯ' ಎಂದು ಶುಭಕೋರುವ, ವಿರಾಟ್ ಕೊಹ್ಲಿ ಜೊತೆ ಫಿಟ್ನೆಸ್ ಬಗ್ಗೆ ಚರ್ಚೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಹೋರಾಟಗಾರ ದೊರೆಸ್ವಾಮಿಯ ನಿಧನಕ್ಕೆ ಸಂತಾಪ ಸೂಚಿಸಲು ಒಂದು ಟ್ವೀಟ್ ಕೂಡಾ ಮಾಡದಿರುವುದು ಮಾತ್ರ ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News