ರೈತರು, ಬಡವರು, ಆಶಾ ಕಾರ್ಯಕರ್ತರಿಗೆ ನೆರವಾಗಲು ಸಿಎಂಗೆ ಸಂಸದ ಡಿ.ಕೆ.ಸುರೇಶ್ ಪತ್ರ

Update: 2021-05-27 13:56 GMT

ಬೆಂಗಳೂರು, ಮೇ 27: ರೈತರ ಬೆಳೆ ಖರೀದಿಸಲು ತಾಲೂಕು ಮಟ್ಟದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ, ಆಶಾ ಕಾರ್ಯಕರ್ತೆಯರಿಗೆ 3 ತಿಂಗಳ ಗೌರವಧನ ಬಾಕಿ ಪಾವತಿ ಹಾಗೂ ಬಡ-ಮಧ್ಯಮ ವರ್ಗದ ಜನರಿಗೆ 3 ತಿಂಗಳ ವಿದ್ಯುತ್, ನೀರಿನ ಬಿಲ್ ಹಾಗೂ 1 ವರ್ಷ ಆಸ್ತಿ ತೆರಿಗೆ ಮನ್ನಾ ಮಾಡಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.

ಗುರುವಾರ ಮೂರು ಪ್ರತ್ಯೇಕ ಪತ್ರ ಬರೆದಿರುವ ಅವರು, `ಲಾಕ್‍ಡೌನ್‍ನಿಂದಾಗಿ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದ ಆದಾಯ ನಂಬಿ ಬದುಕುತ್ತಿದ್ದವರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಸರಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಎಲ್ಲರಿಗೂ ತಲುಪದ ಕಾರಣ, 3 ತಿಂಗಳ ವಿದ್ಯುತ್ ಮತ್ತು ನೀರಿನ ಬಿಲ್, 1 ವರ್ಷ ಆಸ್ತಿ ತೆರಿಗೆ ಮನ್ನಾ ಮಾಡಬೇಕು. ಇದು ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲಿದೆ' ಎಂದು ಕೋರಿದ್ದಾರೆ.

ಬೆಂಬಲ ಬೆಲೆ ಖರೀದಿ ಕೇಂದ್ರ: `ಕೋವಿಡ್ ಪಿಡುಗಿನಿಂದ ರಾಜ್ಯದ ರೈತರು ಬೆಳೆದ ಬೆಳೆ ಮಾರಾಟ ಮಾಡಲು ಮಾರುಕಟ್ಟೆ ಇಲ್ಲವಾಗಿದ್ದು, ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಸಾಲ ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ, ಜೀವನ ನಡೆಸುವುದೇ ಕಷ್ಟವಾಗಲಿದೆ. ಹೀಗಾಗಿ ರೈತರಿಗೆ ನೆರವಾಗಲು ಎಲ್ಲ ತಾಲೂಕು ಮಟ್ಟದಲ್ಲಿ ಬೆಂಬಲ ಬೆಲೆ ನೀಡಿ ಬೆಳೆ ಖರೀದಿಗೆ ಕೇಂದ್ರ ಸ್ಥಾಪನೆ ಮಾಡಬೇಕು. ಇದರಿಂದ ಸ್ವಲ್ಪಮಟ್ಟಿಗೆ ರೈತರ ರಕ್ಷಣೆಯಾಗಲಿದೆ' ಎಂದು ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ.

ಗೌರವ ಧನ ಬಿಡುಗಡೆ ಮಾಡಿ: `ಕೊರೋನ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆ, ಮನೆಗೆ ಭೇಟಿ ನೀಡಿ, ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪರೀಕ್ಷೆಯಿಂದ ಲಸಿಕೆ ಹಾಕುವವರೆಗೂ ಗ್ರಾಮ ಮಟ್ಟದಲ್ಲಿ ಜನರಿಗೆ ಮಾಹಿತಿ ಕೊಡುತ್ತಿರುವ ಇವರ ಸೇವೆ ಪ್ರಶಂಸನೀಯ. ಇವರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಸರಕಾರ 3 ತಿಂಗಳಿಂದ ಗೌರವಧನ ಕೊಟ್ಟಿಲ್ಲ. ಇದು ಸರಕಾರದ ಬೇಜವಾಬ್ದಾರಿಗೆ ಸಾಕ್ಷಿ. ಹೀಗಾಗಿ ಈ ಮುಂಚೂಣಿ ಯೋಧರಿಗೆ ನೆರವಾಗಲು ಸರಕಾರ ತಕ್ಷಣ ಗೌರವ ಧನ ಬಿಡುಗಡೆ ಮಾಡಬೇಕು' ಎಂದು ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News