ವಾಟ್ಸ್ಆ್ಯಪ್ ನ ಸಾಮಾನ್ಯ ಬಳಕೆದಾರರಿಗೆ ನೂತನ ಸಾಮಾಜಿಕ ಜಾಲತಾಣ ನಿಯಮಗಳ ಬಗ್ಗೆ ಭಯ ಬೇಡ:ಕೇಂದ್ರ

Update: 2021-05-27 14:00 GMT

ಹೊಸದಿಲ್ಲಿ,ಮೇ 27: ವಾಟ್ಸ್ಆ್ಯಪ್ನ ಸಾಮಾನ್ಯ ಬಳಕೆದಾರರು ಕೇಂದ್ರವು ಮೇ 25ರಿಂದ ಜಾರಿಗೊಳಿಸಿರುವ ನೂತನ ಸಾಮಾಜಿಕ ಜಾಲತಾಣ ನಿಯಮಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ನೂತನ ನಿಯಮಗಳು ಭಾರತದ ಸಾರ್ವಭೌಮತೆ,ಸಮಗ್ರತೆ ಮತ್ತು ಭದ್ರತೆ,ಸಾರ್ವಜನಿಕ ಸುವ್ಯವಸ್ಥೆ,ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಅಪರಾಧಗಳ ಕುರಿತು ಸಂದೇಶಗಳ ಮೂಲವನ್ನು ಗುರುತಿಸುವ ಉದ್ದೇಶವನ್ನು ಹೊಂದಿವೆ ಎಂದು ಪ್ರಸಾದ ಟ್ವೀಟಿಸಿದ್ದಾರೆ.


ನೂತನ ನಿಯಮಾವಳಿಯಲ್ಲಿಯ,ಅಧಿಕಾರಿಗಳು ಕೇಳಿದಾಗ ಮಾಹಿತಿಯನ್ನು ಮೊಟ್ಟಮೊದಲು ಹಂಚಿಕೊಂಡಿರುವ ವ್ಯಕ್ತಿಯನ್ನು ಗುರುತಿಸುವುದನ್ನು ಕಂಪನಿಗೆ ಕಡ್ಡಾಯಗೊಳಿಸಿರುವ ನಿಬಂಧನೆಯನ್ನು ಪ್ರಶ್ನಿಸಿ ವಾಟ್ಸ್ಆ್ಯಪ್ ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ಈ ನಿಬಂಧನೆಯು ಸಂವಿಧಾನಬಾಹಿರವಾಗಿದೆ ಮತ್ತು ಜನರ ಖಾಸಗಿತನದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂದು ವಾಟ್ಸ್ಆ್ಯಪ್ ತನ್ನ ಅರ್ಜಿಯಲ್ಲಿ ವಾದಿಸಿದೆ.

ಸಾಮಾಜಿಕ ಜಾಲತಾಣ ಕಂಪನಿಗಳು,ಸ್ಟ್ರೀಮಿಂಗ್ ಮತ್ತು ಡಿಜಿಟಲ್ ಸುದ್ದಿ ವಿಷಯಗಳ ಮೇಲೆ ನಿಗಾಯಿರಿಸಲು ಫೆ.25ರಂದು ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳು, 2021ನ್ನು ಹೊರಡಿಸಲಾಗಿತ್ತು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಮೂರು ತಿಂಗಳು ಕಾಲಾವಕಾಶವನ್ನು ನೀಡಲಾಗಿತ್ತು. ಮೇ 25ರಂದು ಈ ಗಡುವು ಅಂತ್ಯಗೊಂಡಿದ್ದು, ನಿಯಮಗಳು ಜಾರಿಗೆ ಬಂದಿವೆ.

ತಾವು ನೂತನ ನಿಯಮಗಳನ್ನು ಪಾಲಿಸುವುದಾಗಿ ವಾಟ್ಸ್ ಆ್ಯಪ್ನ ಮಾತೃಸಂಸ್ಥೆ ಫೇಸ್ಬುಕ್ ಮತ್ತು ಗೂಗಲ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದವಾದರೂ, ವಾಟ್ಸ್ಆ್ಯಪ್ ಅದೇ ದಿನ ನ್ಯಾಯಾಲಯದ ಮೆಟ್ಟಿಲನ್ನೇರಿದೆ.

ವಾಟ್ಸ್ಆ್ಯಪ್ನ ಕಾನೂನು ಸವಾಲನ್ನು ಸರಕಾರವು ‘ಉದ್ಧಟತನದ ಸ್ಪಷ್ಟ ಕೃತ್ಯ ’ಎಂದು ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News