ಕೋವಿಡ್ ಹಾಟ್ ಸ್ಪಾಟ್ ಆಗಿದ್ದ ಮುಂಬೈನ ಧಾರಾವಿಯಲ್ಲಿ ಈಗ ಕನಿಷ್ಠ ಪ್ರಕರಣಗಳು

Update: 2021-05-27 14:22 GMT
ಸಾಂದರ್ಭಿಕ ಚಿತ್ರ

 ಮುಂಬೈ,ಮೇ 27: ಏಷ್ಯಾದ ಅತ್ಯಂತ ದೊಡ್ಡ ಕೊಳಗೇರಿ,2.5 ಚ.ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇಲ್ಲಿಯ ಧಾರಾವಿಯಲ್ಲಿ ಬುಧವಾರ ಮೂರು ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು,ಇದು ಎರಡನೇ ಅಲೆಯು ನಗರಕ್ಕೆ ದಾಳಿಯಿಟ್ಟಿದ್ದ ಫೆ.11ರಿಂದೀಚಿಗೆ ಕನಿಷ್ಠ ಸಂಖ್ಯೆಯಾಗಿದೆ.

ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ದಾಖಲೆಗಳಂತೆ ಕಳೆದ ವರ್ಷ ಕೊರೋನವೈರಸ್ ಸಾಂಕ್ರಾಮಿಕವು ಭುಗಿಲೆದ್ದ ಬಳಿಕ ಧಾರಾವಿಯಲ್ಲಿ ಒಟ್ಟು 6,798 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 2,500 (ಸುಮಾರು ಶೇ.36) ಪ್ರಕರಣಗಳು ಈ ವರ್ಷದ ಮಾರ್ಚ್ ಮತ್ತು ಎಪ್ರಿಲ್ನಲ್ಲಿ ದಾಖಲಾಗಿದ್ದವು.

ಫೆಬ್ರವರಿ ಮಧ್ಯಭಾಗದಲ್ಲಿ ಎರಡನೇ ಅಲೆ ಪ್ರಾರಂಭವಾದಾಗ ಧಾರಾವಿಯಲ್ಲಿ 10 ದೈನಂದಿನ ಪ್ರಕರಣಗಳು ವರದಿಯಾಗಿದ್ದು,37 ದಿನಗಳ ವಿರಾಮದ ಬಳಿಕ ಪ್ರಕರಣಗಳ ಸಂಖ್ಯೆ ಎರಡಂಕಿಗಳನ್ನು ತಲುಪಿತ್ತು. ಮಾರ್ಚ್ನಲ್ಲಿ ಪ್ರತಿದಿನ 50 ಹೊಸ ಪ್ರಕರಣಗಳು ಈ ಪ್ರದೇಶದಲ್ಲಿ ವರದಿಯಾಗುತ್ತಿದ್ದವು. ಮಾರ್ಚ್ 23ರ ವೇಳೆಗೆ ವನಿತಾ ಸಮಾಜ ಹಾಲ್ನಲ್ಲಿಯ 250 ಹಾಸಿಗೆಗಳ ಕ್ವಾರಂಟೈನ್ ಕೇಂದ್ರವು ಭರ್ತಿಯಾಗಿತ್ತು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 180ಕ್ಕೇರಿತ್ತು.

ಎ.8ರಂದು 99 ಪ್ರಕರಣಗಳು ದಾಖಲಾಗಿದ್ದು, ಅದು ದೈನಂದಿನ ಹೊಸ ಪ್ರಕರಣಗಳ ಸಾರ್ವಕಾಲಿಕ ದಾಖಲೆಯಾಗುವ ಮೂಲಕ ಕಳವಳಗಳನ್ನು ಸೃಷ್ಟಿಸಿತ್ತು. ಮೇ 1ರಂದು ಧಾರಾವಿಯಲ್ಲಿ 947 ಸಕ್ರಿಯ ಪ್ರಕರಣಗಳಿದ್ದು, ಬುಧವಾರ ಅದು 62ಕ್ಕೆ ಇಳಿದಿದೆ.
ಈ ಸಲ ಮಹಾನಗರ ಪಾಲಿಕೆಯ ಕಾರ್ಯತಂತ್ರವನ್ನು ವಿವರಿಸಿದ ಬಿಎಂಸಿಯ ಸಹಾಯಕ ಮುನ್ಸಿಪಲ್ ಆಯುಕ್ತ ಕಿರಣ ದಿಘವಾಕರ್ ಅವರು,‘‘ನಾವು ಕಳೆದ ವರ್ಷದ ತಪಾಸಣೆ,ಪರೀಕ್ಷೆ ಮತ್ತು ಕ್ವಾರಂಟೈನ್ನ ‘ಧಾರಾವಿ ಮಾದರಿ’ಗೆ ಮೊರೆ ಹೋಗಿದ್ದೆವು’’ ಎಂದು ತಿಳಿಸಿದರು.

ಧಾರಾವಿಯಲ್ಲಿ ಸುಮಾರು ಎಂಟೂವರೆ ಲಕ್ಷದಿಂದ ಹತ್ತು ಲಕ್ಷ ಜನರು ವಾಸವಾಗಿದ್ದು, ಇವರಲ್ಲಿ ಶೇ.40ರಷ್ಟು ವಲಸೆ ಕಾರ್ಮಿಕರಿದ್ದಾರೆ. ಹೆಚ್ಚಿನವರು 10X10 ಅಡಿ ವಿಸ್ತೀರ್ಣದ ರೆಪಡಿಗಳಲ್ಲಿ ಬದುಕು ಸಾಗಿಸುತ್ತಿದ್ದು,ಸಾಮಾಜಿಕ ಅಂತರ ಮತ್ತು ಐಸೊಲೇಷನ್ ಅಧಿಕಾರಿಗಳ ಪಾಲಿಗೆ ಸವಾಲು ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News