ಹೈಡ್ರೋಜನ್ ಬಲೂನ್ ನಲ್ಲಿ ನಾಯಿ ಮರಿಯನ್ನು ಕಟ್ಟಿ ಹಾರಿಸಿದ ಯೂಟ್ಯೂಬರ್ ಬಂಧನ

Update: 2021-05-27 15:03 GMT
ಫೋಟೊ ಕೃಪೆ: NDTV

ಹೊಸದಿಲ್ಲಿ, ಮೇ 27: ತನ್ನ ಸಾಕು ನಾಯಿಯನ್ನು ಹೈಡ್ರೋಜನ್ ಬಲೂನ್ ಗೆ ಕಟ್ಟಿ ಆಗಸದಲ್ಲಿ ಹಾರಿಬಿಟ್ಟು ಅದರ ವೀಡಿಯೊ ಚಿತ್ರೀಕರಣವನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ದಿಲ್ಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ದಿಲ್ಲಿ ನಿವಾಸಿ ಗೌರವ್ ಎಂಬಾತ ‘ಗೌರವ್ ಝೋನ್’ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ. ಗೌರವ್ ಹಾಗೂ ಇತರರು ಡಾಲರ್ ಎಂಬ ಹೆಸರಿನ ಸಾಕುನಾಯಿಯನ್ನು ಜಲಜನಕದ ಬಲೂನ್ ಗಳಿಗೆ ಕಟ್ಟಿ ಗಾಳಿಯಲ್ಲಿ ಹಾರಿಸುವ ಪ್ರಾತ್ಯಕ್ಷಿಕೆಯನ್ನು ತೋರಿಸುವ ವೀಡಿಯೊ ಮಾಡಿದ್ದಾನೆ. ಈ ವೀಡಿಯೊದಲ್ಲಿ ಮಹಿಳೆಯೊಬ್ಬರೂ ಇದ್ದಾರೆ. 

ಇದೇ ವೀಡಿಯೊದಲ್ಲಿರುವ ಇನ್ನೊಂದು ದೃಶ್ಯದಲ್ಲಿ ಗೌರವ್ ಇಕ್ಕಟ್ಟಾದ ರಸ್ತೆಯೊಂದರಲ್ಲಿ ಕಾರಿನಲ್ಲಿ ಕುಳಿತು, ತನ್ನ ನಾಯಿಯನ್ನು ಹೈಡ್ರೋಜನ್ ಬಲೂನ್ ಗೆ ಕಟ್ಟಿ ಮೇಲಕ್ಕೆ ಹಾರಿಸಿದ್ದು, ಬಲೂನ್ ಸಹಿತ ಗಾಳಿಯಲ್ಲಿ ಮೇಲೇರಿದ ನಾಯಿ ಮನೆಯೊಂದರ ಟೆರೇಸ್ ಮೇಲೆ ಇಳಿದಿದೆ. 

ಈ ವೀಡಿಯೋಗೆ ಈತ ವೀಕ್ಷಕ ವಿವರಣೆಯನ್ನೂ ನೀಡಿದ್ದು ಈ ವೀಡಿಯೊ ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ವೀಡಿಯೋ ಮಾಡುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇನೆ. ಸಾಕು ಪ್ರಾಣಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇನೆ. ಹಾರುವ ನಾಯಿಯ ವೀಡಿಯೊದ ಬಗ್ಗೆ ನಿಮಗೆ ಬೇಸರವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಗೌರವ್ ಟ್ವೀಟ್ ಮಾಡಿದ್ದಾನೆ. ಈತನ ಯೂಟ್ಯೂಬ್ ಚಾನೆಲ್ ಗೆ 4 ಮಿಲಿಯನ್‌ಗೂ ಅಧಿಕ ಚಂದಾದಾರರಿದ್ದಾರೆ ಎಂದು ಮೂಲಗಳು ಹೇಳಿವೆ.

ಗೌರವ್ ಹಾಗೂ ಆತನ ತಾಯಿ ವಿರುದ್ಧ ದಕ್ಷಿಣ ದಿಲ್ಲಿಯ ಮಾಳವೀಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News