ಪಾಂಡವಪುರ: ಮಹಿಳೆಯಿಂದ ಕಾರ್ಖಾನೆ ಕ್ವಾಟ್ರಸ್ ಮ್ಯಾನ್‍ಹೋಲ್ ಸ್ವಚ್ಛತೆ

Update: 2021-05-27 16:54 GMT

ಪಾಂಡವಪುರ, ಮೇ27: ಕಾರ್ಮಿಕ ಮಹಿಳೆಯಿಂದ ಮ್ಯಾನ್‍ಹೋಲ್ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ತಾಲೂಕಿನ ವಿಶ್ವೇಶ್ವರನಗರದಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ(ಪಿಎಸ್‍ಎಸ್‍ಕೆ)ಯ ಕ್ವಾಟ್ರಸ್‍ನಲ್ಲಿ ಕಳೆದ ಮೇ17ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮುರುಗೇಶ್ ನಿರಾಣಿ ಒಡೆತನದ ಎಂಆರ್‍ಎನ್ ಶುಗರ್ಸ್ ಗುತ್ತಿಗೆಗೆ ಪಡೆದಿರುವ ಪಿಎಸ್‍ಎಸ್‍ಕೆ ಉದ್ಯೋಗಿ ಮಂಜುಳ ಎಂಬವರು ಮ್ಯಾನ್‍ಹೋಲ್ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಕರಣಕ್ಕೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಮಂಡ್ಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಎಂಎಸ್ ಕಾಯ್ದೆ 2013 ಸೆಕ್ಷನ್ 24ರಂತೆ ಕೂಡಲೇ ಪ್ರಕರಣ ದಾಖಲಿಸುವಂತೆ ಪಾಂಡವಪುರ ಉಪ ವಿಭಾಗಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 

ಘಟನೆ ವಿವರ: ಪಾಂಡವಪುರ ತಾಲೂಕು ಕೆನ್ನಾಳು ಗ್ರಾಮದ ವಿಧವೆ ಮಂಜುಳ ಕಳೆದ 9 ತಿಂಗಳಿನಿಂದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದಿರುವ ಎಂಆರ್‍ಎನ್ ಶುಗರ್ಸ್ ಕಂಪನಿಯಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆ ಮತ್ತು ಕಚೇರಿಯ 15 ಶೌಚಾಲಯಗಳ ಸ್ವಚ್ಛತೆ, ಕಚೇರಿಗಳ ಕಸ ಗುಡಿಸುವುದು, ಗಿಡಗಳನ್ನು ಕತ್ತರಿಸಿ ಹುಲ್ಲು ಕೊಯ್ಯುವುದು ಸೇರಿದಂತೆ ಕಾರ್ಖಾನೆ ಅಧಿಕಾರಿಗಳು ಹೇಳಿದ ಸ್ವಚ್ಛತಾ ಕೆಲಸವನ್ನು ಮಾಡುತ್ತಿದ್ದರು ಎನ್ನಲಾಗಿದೆ.

ಕಳೆದ ಮೇ17 ರಂದು ಕಾರ್ಖಾನೆ ವ್ಯಾಪ್ತಿಯ ವಿಶ್ವೇಶ್ವರ ನಗರದಲ್ಲಿರುವ ಕಾರ್ಮಿಕರ ಕ್ವಾಟ್ರಸ್‍ನಲ್ಲಿ ಮ್ಯಾನ್‍ಹೋಲ್ ಕಟ್ಟಿಕೊಂಡಿದ್ದು, ಅದನ್ನು ಸ್ವಚ್ಛಗೊಳಿಸುತ್ತಿದ್ದಾಗ ಕೆಲವರು ಮೊಬೈಲ್ ಮೂಲಕ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ 30ರಂದು ಶಿವಣ್ಣ ಭೇಟಿ
ಘಟನೆ ತಿಳಿದ ಬಳಿಕ ಪಾಂಡವಪುರ ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಗಮನಕ್ಕೆ ಈ ವಿಷಯ ಬಂದಿದ್ದು, ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮೇ 31 ರಂದು ಸಂಜೆ 5 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆಂದು ತಿಳಿದು ಬಂದಿದೆ.

ಪಿಎಸ್‍ಎಸ್‍ಕೆ ಕಾರ್ಖಾನೆಯಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಯಾವುದೇ ರೀತಿಯ ಜೀವರಕ್ಷಕ ಸಲಕರಣೆಗಳನ್ನು ನೀಡದೆ ಅವರಿಗೆ ಕಡಿಮೆ ಸಂಬಳ ನೀಡಿ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಪಾಂಡವಪುರ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯ ಎಸ್.ಕುಮಾರ್ ಆರೋಪಿಸಿದ್ದಾರೆ.

ಕಾರ್ಮಿಕರಿಗೆ ಪಿಎಫ್, ಇಎಸ್‍ಐ ಸೌಲಭ್ಯ ನೀಡಿಲ್ಲ. ಜತೆಗೆ ಅವರನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಕಸ ಎತ್ತಿಸಿದ ಅಮಾನವೀಯ ಕೃತ್ಯ ಖಂಡನಾರ್ಹವಾಗಿದ್ದು. ಸರಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ತ ಮಹಿಳೆಗೆ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

'ಗುಂಡಿಗೆ ನಾನು ಇಳಿಯುವುದಿಲ್ಲ ಎಂದು ಹೇಳಿದರೂ ಕಾರ್ಖಾನೆ ಸಿವಿಲ್ ಎಂಜಿನಿಯರ್ ನಾಗೇಶ ಮತ್ತು ಸೂಪರ್‍ವೈಸರ್ ರಾಜಾಚಾರಿ ಬಲವಂತವಾಗಿ ನನ್ನನ್ನು ಇಳಿಸಿ ಕೆಲಸ ಮಾಡಿಸಿದರು'
-ಮಂಜುಳ, ಸ್ವಚ್ಛತಾ ಕಾರ್ಮಿಕರು

'ಘಟನೆ ಕಾರ್ಖಾನೆಯಲ್ಲಿ ನಡೆದಿಲ್ಲ. ಕಾರ್ಮಿಕರ ಕ್ವಾಟ್ರಸ್‍ನಲ್ಲಿ ಸ್ವಚ್ಛತೆಗೆ ಕಳಿಸಿದ್ದ ವೇಳೆ ನಮ್ಮ ಅರಿವಿಗೆ ಬಾರದಂತೆ ಇದು ನಡೆದಿದೆ'
-ಶಿವಾನಂದ ಸಲಗಾರ, ಸಿಜಿಎಂ, ಎಂಆರ್‍ಎನ್ ಶುಗರ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News