ಕೊರೋನ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಕ್ಕೆ ಟಾಸ್ಕ್ ಪೋರ್ಸ್ ರಚನೆ: ಸಂಸದ ಪ್ರತಾಪ್ ಸಿಂಹ

Update: 2021-05-27 17:01 GMT

ಮೈಸೂರು,ಮೇ.27: ರಾಜ್ಯದಲ್ಲಿ ಆಡಳಿತ ಯಂತ್ರ ವಿಫಲತೆ ಕಂಡಿದ್ದರಿಂದ ಕೊರೋನ ನಿಯಂತ್ರಣಕ್ಕೆ ಜನಪ್ರತಿನಿಧಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾದ ಹಿನ್ನಲೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಹಾಗಾಗಿಯೇ ಮುಖ್ಯಮಂತ್ರಿಗಳು ಆಕ್ಸಿಜನ್ ಸರಬರಾಜಿಗೆ ಜಗದೀಶ್ ಶೆಟ್ಟರ್, ರೆಮ್ಡಿಸಿವಿರ್ ಪೂರೈಕೆಗೆ ಡಾ.ಅಶ್ವತ್ಥ ನಾರಾಯಣ್, ಹಾಸಿಗೆ ನಿರ್ವಹಣೆಗೆ ಅಶೋಕ್ ಸೇರಿದಂತೆ ಅನೇಕರಿಗೆ ಜವಾಬ್ದಾರಿ ನೀಡಿದ್ದಾರೆ ಎಂದರು.

ಅದೇ ರೀತಿ ಮೈಸೂರಿನಲ್ಲಿಯೂ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಇದರಿಂದ ನಮಗೆ ಟಿಎಡಿಎ ನೀಡುವುದಿಲ್ಲ. ಸರ್ಕಾರದಿಂದ ನೀಡಿರುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖ್ ವಹಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಬಹಳ ತಿಳಿದವರು, ನ್ಯಾಯಾಂಗ ಪಂಡಿತರು, ಸಂವಿಧಾನ ತಜ್ಞರು ಟಾಸ್ಕ್ ಫೋರ್ಸ್ ಬಗ್ಗೆ ಟೀಕೆ ಮಾಡುತ್ತಾರೆ. ಅವರ ಹೇಳಿಕೆಗಳಿಗೆ ಉತ್ತರ ನೀಡುವ ಅಗತ್ಯ ಇಲ್ಲ. ಅವರು ಬಂದು ನಮ್ಮ ಜೊತೆ ಕೈಜೋಡಿಸಿದರೆ ಅವರಿಗೂ ಅವಕಾಶ ನೀಡುವುದಾಗಿ ಪರೋಕ್ಷವಾಗಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದರು.

ಪಾಸಿಟಿವ್ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಸೆಂಟರ್ ಗೆ ಬರಬೇಕು. ಬರದೆ ಇದ್ದರೆ ಬಲವಂತವಾಗಿ ಎತ್ತಿಕೊಂಡು ಬರಬೇಕಾಗುತ್ತದೆ. ಹೋಂ ಐಸೋಲೇಷನ್ ಅನ್ನ ಕಡ್ಡಾಯವಾಗಿ ರದ್ದು ಮಾಡುತ್ತೇವೆ. ಯಾರೇ ಆಗಲಿ ಕೊರೋನ ಪಾಸಿಟಿವ್ ಬಂದ ಮೇಲೆ ಆಸ್ಪತ್ರೆ ಅಥವಾ ಕೋವಿಡ್ ಸೆಂಟರ್ ಬರಬೇಕು. ಇನ್ನ ಮೇಲೆ ಯಾರು ಸಬೂಬು ಹೇಳುವಂತಿಲ್ಲ ಎಂದರು.

ಪಿಎಂ ಕೇರ್ ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟ್ ಯೂನಿಟ್ ಸಿಗಲಿದೆ. ನಿಮಿಷಕ್ಕೆ 1000KL ಆಕ್ಸಿಜನ್ ಉತ್ಪಾದಿಸುವ ಯೂನಿಟ್ ಇದಾಗಿದ್ದು, ಅದನ್ನ ಕೆ.ಆರ್.ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗುವುದು. ಇದಲ್ಲದೆ ಮುಡಾದಿಂದ ತುಳಿಸಿ ದಾಸಪ್ಪ ಆಸ್ಪತ್ರೆಗೂ ಆಕ್ಸಿಜನ್ ಜನರೇಟರ್ ಯೂನಿಟ್ ಸಿಗಲಿದೆ. ಇನ್ನೊಂದು ತಿಂಗಳಲ್ಲಿ ಮೈಸೂರಿನ ಎಲ್ಲ ತಾಲೂಕಿನಲ್ಲೂ ಆಕ್ಸಿಜನ್ ಜನರೇಟರ್ ಯೂನಿಟ್ ಅಳವಡಿಸಲಾಗುವುದು. ಹೀಗಾಗಿ ಮುಂದಿನ ತಿಂಗಳ ಹೊತ್ತಿಗೆ ಮೈಸೂರಿನಲ್ಲಿ ಆಕ್ಸಿಜನ್ ಸಮಸ್ಯೆ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಕೋವಿಡ್ ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು ಹರಡಲು ಕಾರಣವಾಯಿತು. ಇದನ್ನ ಮುಕ್ತವಾಗಿ ನಾನು ಒಪ್ಪಿಕೊಳ್ಳುತ್ತೇನೆ. ನಾವು ಟೆಸ್ಟ್ ಕಡಿಮೆ ಮಾಡಬಾರದಿತ್ತು. ಇದು ಸ್ವಲ್ಪ ಸೋಂಕು ಹೆಚ್ಚಾಗಲು ಕಾರಣ ಆಯ್ತು. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಬಿಟ್ಟಿದೆ. ಇದಕ್ಕೆ ಕೋವಿಡ್ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ. ವಾಕ್ಸಿನೇಷನ್ ಬಗ್ಗೆ ಕೂಡ ಜನರಲ್ಲಿ ಗೊಂದಲ ಇತ್ತು. ಇದೇಲ್ಲದರ ಪರಿಣಾಮ ಹಿಂದಿನ ಲಾಕ್‍ಡೌನ್‍ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ನಾವು ಪಂಚಸೂತ್ರ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ನಿಯಂತ್ರಣ ಮಾಡಲು ಮುಂದಾಗಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News