ಖಾಸಗಿ ಶಾಲಾ ವಾಹನ ಚಾಲಕರಿಗೆ ಸಹಾಯಧನಕ್ಕೆ ಆಗ್ರಹಿಸಿ ಆನ್‍ಲೈನ್ ಪ್ರತಿಭಟನೆ

Update: 2021-05-27 17:06 GMT

ಬೆಂಗಳೂರು, ಮೇ 27: ಶಾಲೆಗಳು ಪುನರಾರಂಭ ಆಗುವವರೆಗೂ ಖಾಸಗಿ ಶಾಲಾ ಚಾಲಕರಿಗೆ ಮಾಸಿಕ 7,500 ರೂ.ಸಹಾಯಧನ, ಶಾಲಾ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘದ ವತಿಯಿಂದ ಆನ್‍ಲೈನ್ ಪ್ರತಿಭಟನೆ ನಡೆಸಲಾಯಿತು.  

ಕೋವಿಡ್ ಲಾಕ್ ಡೌನ್‍ನಿಂದಾಗಿ ಶಾಲಾ ವಾಹನ ಚಾಲಕರು ನಿರುದ್ಯೋಗಿಗಳಾಗಿದ್ದಾರೆ. ಜೀವನ ನಡೆಸುವುದು ದುಸ್ತರವಾಗಿದೆ. ಇದರ ನಡುವೆ ರಸ್ತೆ ತೆರಿಗೆ ಪಾವತಿಸುವಂತೆ ಒತ್ತಡ ಹಾಕುತ್ತಿರುವುದು ಸರಿಯಲ್ಲ. ರಸ್ತೆ ತೆರಿಗೆ ವಿನಾಯಿತಿ ನೀಡಬೇಕು. ಹಾಗೂ ಈಗಾಗಲೇ ಯಾರಾದರೂ ರಸ್ತೆ ತೆರಿಗೆ ಪಾವತಿಸಿದ್ದಲ್ಲಿ ಅದನ್ನು ಹಿಂತಿರುಗಿಸಬೇಕೆಂದು ಪ್ರತಿಭಟನಾ ನಿರತ ಚಾಲಕರು ಒತ್ತಾಯಿಸಿದ್ದಾರೆ. 

ಶಾಲೆಗಳು ಪುನರಾರಂಭ ಆಗುವವರೆಗೂ ಬ್ಯಾಂಕ್ ಹಾಗೂ ಖಾಸಗಿ ಹಣಕಾಸಿನ ಸಂಸ್ಥೆಗಳಿಗೆ ಚಾಲಕರಿಂದ ಮಾಸಿಕ ಕಂತುಗಳನ್ನು ನಿರ್ಭಂದಿಸದಿರಲು ಸೂಕ್ತ ಆದೇಶ ನೀಡಬೇಕು. ರಾಜ್ಯದ ಎಲ್ಲಾ ಚಾಲಕರಿಗೂ ಆದ್ಯತೆ ಮೇರೆಗೆ ಕೊರೋನ ಲಸಿಕೆಯನ್ನು ನೀಡಬೇಕೆಂದು  ಚಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಒತ್ತಾಯಿಸಿದ್ದಾರೆ.

ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಜಿ.ಹನುಮೇಶ್, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ದುರ್ಗೇಶ್, ಸಂಘದ ಅಧ್ಯಕ್ಷ ಷಣ್ಮುಗಂ ಪಿ.ಎಸ್, ಗೌರವಾಧ್ಯಕ್ಷ ಎಂ ಗೋವಿಂದರಾಜನ್, ಕಾರ್ಯದರ್ಶಿ ಟಿ.ಜಿ.ದಾಮೋದರ್, ಸಂಘದ ಪದಾಧಿಕಾರಿಗಳು ಹಾಗೂ ಖಾಸಗಿ ಶಾಲಾ ವಾಹನ ಚಾಲಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News