ಆಕ್ಸಿಜನ್ ದುರಂತ: ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ತೀರಾ ಕಡಿಮೆ ಎಂದ ಹೈಕೋರ್ಟ್

Update: 2021-05-27 17:22 GMT

ಬೆಂಗಳೂರು, ಮೇ 27: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟ 24 ಕೋವಿಡ್ ಸೋಂಕಿತರ ಕುಟುಂಬಗಳಿಗೆ ನೀಡಿರುವ ತಲಾ 2 ಲಕ್ಷ ರೂಪಾಯಿ ಪರಿಹಾರ ಅತ್ಯಂತ ಕಡಿಮೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಮೃತಪಟ್ಟ ಸೋಂಕಿತರ ಕುಟುಂಬಗಳಿಗೆ ಈಗ ನೀಡಿರುವ ಪರಿಹಾರ ಮೊತ್ತ ಏನೇನೂ ಅಲ್ಲ, ಅದರ ಬಗ್ಗೆ ಸರಕಾರ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿ, ಜೂನ್ 3ಕ್ಕೆ ವಿಚಾರಣೆ ಮುಂದೂಡಿತು. 

ಮೃತರ ಕುಟುಂಬಗಳಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಸಿರುವ ಚಾಮರಾಜನಗರದವರೇ ಆದ ವಕೀಲ ಕೆ.ಎಂ. ಶ್ರೀನಿವಾಸಮೂರ್ತಿ ಪೀಠಕ್ಕೆ ಮನವಿ ಮಾಡಿ, ಮೃತಪಟ್ಟವರೆಲ್ಲಾ 30ರಿಂದ 40 ವರ್ಷ ಅಸುಪಾಸಿನವರು, ಅವರಲ್ಲಿ ಬಹುತೇಕ ಮಂದಿ ತೀರಾ ಬಡವರು. ಹೀಗಾಗಿ, ಪರಿಹಾರದ ಜೊತೆಗೆ ಮೃತರ ಕುಟುಂಬಕ್ಕೆ ಸರಕಾರದಿಂದ ಉದ್ಯೋಗ ನೀಡಲು ಆದೇಶಿಸಬೇಕು ಎಂದು ಕೋರಿದರು. ಕೋರಿಕೆ ಆಲಿಸಿದ ಪೀಠ ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಗಮನ ಹರಿಸುವುದಾಗಿ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News