ಕರಾವಳಿ ಭಾಗದ ಪಡಿತರ ಚೀಟಿದಾರರಿಗೆ ಕೆಂಪು ಕುಚ್ಚಲಕ್ಕಿ ನೀಡಲು ಸರಕಾರ ನಿರ್ಧಾರ

Update: 2021-05-27 17:35 GMT

ಬೆಂಗಳೂರು, ಮೇ 27: `ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ಪಡಿತರ ಫಲಾನುಭವಿಗಳಿಗೆ ನವೆಂಬರ್ ತಿಂಗಳಿಂದ ಕೆಂಪು ಕುಚ್ಚಲಕ್ಕಿ ಪೂರೈಸಲು ನಿರ್ಧರಿಸಲಾಗಿದೆ' ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ನೀಡುತ್ತಿರುವಂತೆ ರಾಗಿ ಹಾಗೂ ಜೋಳದ ಬದಲಿಗೆ ಕರಾವಳಿ ಭಾಗದಲ್ಲಿ ಕೆಂಪು ಕುಚ್ಚಲಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಡಿತರ ಫಲಾನುಭವಿಗಳ ಬೇಡಿಕೆ ಇತ್ತು ಎಂದು ತಿಳಿಸಿದರು.

ಇದೀಗ ಸರಕಾರ ಪಡಿತರ ಚೀಟಿದಾರರಿಗೆ ನೀಡುವ ಸಾಮಾನ್ಯ ಅಕ್ಕಿಯನ್ನು ಆ ಭಾಗದ ಜನರು ಊಟ ಮಾಡಲು ಕಷ್ಟ. ಜಿಲ್ಲೆಯಲ್ಲಿ ತಯಾರಾಗುವ ಕೆಂಪು ಕುಚ್ಚಲಕ್ಕಿ ಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು. ಅಲ್ಲದೆ, ಅನೇಕ ಕಡೆಗಳಲ್ಲಿ ಜನರು ಪಡಿತರ ಪಡೆಯದೆ ಅಕ್ಕಿ ಮಾರಾಟದ ದೂರುಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು, ಕೇಂದ್ರದ ಅನುಮತಿ ಪಡೆದು ಕೆಂಪು ಕುಚ್ಚಲಕ್ಕಿ ನೀಡಲಾಗುವುದು ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಂಪು ಕುಚುಲಕ್ಕಿಯ ಬೇಡಿಕೆ, ಸುಮಾರು ವಾರ್ಷಿಕ 12 ಲಕ್ಷ ಕ್ವಿಂಟಾಲ್ ಆಗಿದ್ದು, ಕೆಂಪು ಕುಚ್ಚಲಕ್ಕಿ ಪೂರೈಸಲು ರಾಜ್ಯದ ಬತ್ತದ ತಳಿಗಳಾದ ಎಂಒ 4, ಜಯ, ಅಭಿಲಾಷ, ಭದ್ರ ಕಜೆ, ಜ್ಯೋತಿ ಮುಂತಾದ ತಳಿಗಳನ್ನು ಖರೀದಿಸಲು ಕೇಂದ್ರ ಸರಕಾರದ ಅನುಮತಿಗಾಗಿ ಸಭೆ ಸುದೀರ್ಘ ಚರ್ಚೆ ನಡೆಸಿ ಕೇಂದ್ರದ ಅನುಮತಿ ಪಡೆಯಲು ಅಗತ್ಯ ಪ್ರಸ್ಥಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಕುಚ್ಚಲಕ್ಕಿ ಬೇಡಿಕೆಯನ್ನು ಪೂರೈಸಲು ಸುಮಾರು 20 ಲಕ್ಷ ಕ್ವಿಂಟಾಲ್ ಭತ್ತದ ಪೂರೈಕೆ ಆಗಬೇಕಾಗಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೊರತಾಗಿಯೂ ಮಂಡ್ಯ, ಮೈಸೂರು, ರಾಮನಗರ, ಬೆಳಗಾವಿ ಜಿಲ್ಲೆಗಳಿಂದ ಭತ್ತ ಖರೀದಿಸಲು ಸಭೆಯಲ್ಲಿ ಚರ್ಚೆ ನಡೆಯಿತು. ಕೇಂದ್ರದ ಅನುಮತಿ ಪಡೆದು ನವೆಂಬರ್ ತಿಂಗಳಿಂದ ಸ್ಥಳೀಯ ಅಕ್ಕಿ ಗಿರಣಿಗಳ ಮೂಲಕ ಕೆಂಪು ಕುಚ್ಚಲಕ್ಕಿ ಉತ್ಪಾದಿಸಿ ಪಡಿತರದ ಮೂಲಕ ಜನಸಾಮಾನ್ಯರಿಗೆ ಹಂಚಲು ಕ್ರಮಕೈಗೊಳ್ಳಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News