ಧನ್ಯವಾದ ಹೇಳುವುದು ಯಾವ ಉಪಕಾರಕ್ಕಾಗಿ?

Update: 2021-05-27 17:38 GMT

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಆಡಳಿತ ಪಕ್ಷದ ನಾಯಕರು ಪೈಪೋಟಿಗೆ ಬಿದ್ದವರಂತೆ ಕೇಂದ್ರ ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ನಮ್ಮ ರಾಜ್ಯದ ಪಾಲಿನ ಆಮ್ಲಜನಕದ ಪ್ರಮಾಣವನ್ನು ಕೊಡಿಸಿದ್ದು ನಮ್ಮ ರಾಜ್ಯದ ಉಚ್ಚನ್ಯಾಯಾಲಯ, ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಗಳು. ಲಸಿಕೆಯ ವಿಚಾರದಲ್ಲಿಯೂ ರಾಜ್ಯದ ಉಚ್ಚ ನ್ಯಾಯಾಲಯ ಎಚ್ಚರಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಆಮ್ಲಜನಕ ಪೂರೈಸಿದರು ಎನ್ನುವ ಕಾರಣಕ್ಕೆ, ಅಲ್ಪಸ್ವಲ್ಪಲಸಿಕೆ ನೀಡಿದರು ಎನ್ನುವ ಕಾರಣಕ್ಕೆ ಧನ್ಯವಾದ ಹೇಳುವ ನಾಟಕಗಳನ್ನು ನಿಲ್ಲಿಸುವುದು ಉತ್ತಮ. ಕರ್ನಾಟಕವು ಭಾರತ ಒಕ್ಕೂಟದ ಒಂದು ಭಾಗ. ನಮ್ಮ ಅಗತ್ಯಗಳನ್ನು ಕಾಲಕಾಲಕ್ಕೆ ಪೂರೈಸಬೇಕಾಗಿರುವುದು ಕೇಂದ್ರ ಸರಕಾರದ ಕರ್ತವ್ಯ. ಇದರಲ್ಲಿ ವಿಶೇಷತೆ ಏನಿದೆ? ಕೇಂದ್ರ ಸರಕಾರ ರಾಜ್ಯಗಳಿಗೆ ಕೊಡುವುದೆಲ್ಲವೂ ರಾಜ್ಯ ಸರಕಾರಗಳು ನೀಡುವ ತೆರಿಗೆಯ ಪಾಲು ಎಂಬುದು ನೆನಪಿರಲಿ! ಧನ್ಯವಾದಗಳನ್ನು ಹೇಳುವುದೇ ಆದರೆ ರಾಜ್ಯದ ಜನರಿಗೆ ಮೊದಲು ಹೇಳಬೇಕು.

ಎಷ್ಟೇ ಕಷ್ಟದ ಸಂದರ್ಭ ಬಂದರೂ ರಾಜ್ಯದ ಜನರು ಸಂಯಮದಿಂದ ಇದ್ದಾರೆ. ಒಂದು ವರ್ಷದ ಹಿಂದೆಯೇ ಕೊರೋನ 2ನೇ ಅಲೆಯ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳದೆ, ತಯಾರಿಗಳನ್ನು ಮಾಡಿಕೊಳ್ಳದೆ ಜನರ ಬದುಕನ್ನು ಲಘುವಾಗಿ ಪರಿಗಣಿಸಿದ ಸರಕಾರದ ವಿರುದ್ಧ ಸಹನೆಯಿಂದ ಇರುವುದಕ್ಕೆ ರಾಜ್ಯದ ಜನರಿಗೆ ಧನ್ಯವಾದಗಳನ್ನು ಹೇಳಬೇಕು. ಪ್ರಪಂಚದ ಅನೇಕ ರಾಷ್ಟ್ರಗಳು ಆಮ್ಲಜನಕ, ವೈದ್ಯಕೀಯ ಉಪಕರಣ ಇತ್ಯಾದಿಗಳನ್ನು ಅಪಾರ ಪ್ರಮಾಣದಲ್ಲಿ ನೀಡಿವೆ. ನೆರವು ನೀಡಿದ ಆ ರಾಷ್ಟ್ರಗಳಿಗೆ ಧನ್ಯವಾದಗಳನ್ನು ಹೇಳಬೇಕು. ಪ್ರಾಣದ ಹಂಗನ್ನು ತೊರೆದು ದುಡಿಯುತ್ತಿರುವ ವೈದ್ಯರು, ನರ್ಸ್‌ಗಳು, ಪ್ರಯೋಗಾಲಯದ ಸಿಬ್ಬಂದಿ, ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು, ಆ್ಯಂಬುಲೆನ್ಸ್ ಚಾಲಕರು, ಸ್ಮಶಾನಗಳಲ್ಲಿ ಹಗಲುರಾತ್ರಿ ಎನ್ನದೆ ಮೃತ ಶರೀರಗಳ ಅಂತ್ಯಸಂಸ್ಕಾರವನ್ನು ಮಾಡುತ್ತಿರುವ ಸಿಬ್ಬಂದಿ -ಇವರಿಗೆ ಧನ್ಯವಾದಗಳನ್ನು ಹೇಳಬೇಕು. ಅದೇರೀತಿ ಅನೇಕ ಸಂಘ-ಸಂಸ್ಥೆಗಳು, ಸಾಮಾನ್ಯ ಜನರು ತಮ್ಮ ಇತಿಮಿತಿಯಲ್ಲಿ ರೋಗಿಗಳಿಗೆ, ಬಡವರಿಗೆ ನೆರವು ನೀಡುತ್ತಿದ್ದಾರೆ. ಈ ಹೃದಯವಂತರಿಗೆ ಧನ್ಯವಾದ ಹೇಳಬೇಕು.
ನಮ್ಮ ಲೋಕಸಭಾ ಸದಸ್ಯರು, ನಮ್ಮ ರಾಜ್ಯದ ಪಾಲನ್ನು ಪ್ರಧಾನಿಯ ಮುಂದೆ ನಿಂತು ಕೇಳಲು ಅಸಮರ್ಥರಾಗಿರುವುದರಿಂದ ಕೇಂದ್ರವೂ ರಾಜ್ಯದ ಬಗ್ಗೆ ಪ್ರೀತಿ ಹೊಂದಿರದ ಕಾರಣದಿಂದ ಯಾವುದೇ ವಿಶೇಷ ಸವಲತ್ತುಗಳು ದೊರಕಿರುವುದಿಲ್ಲ. ಪ್ರಧಾನಿಯನ್ನು ಮೆಚ್ಚಿಸಿಕೊಳ್ಳಲು ಪದೇ ಪದೇ ಧನ್ಯವಾದವನ್ನು ಹೇಳಿ ಆತ್ಮವಂಚನೆಯನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಲಿ.

Similar News