ಉತ್ತರಪ್ರದೇಶ: ಕೋವಿಡ್‌ ನೆಗೆಟಿವ್‌ ಯುವತಿಗೆ ಪಾಸಿಟಿವ್‌ ಮಗು ಜನನ

Update: 2021-05-28 06:33 GMT

ವಾರಣಾಸಿ: ಯುವತಿಯನ್ನು ಕೋವಿಡ್‌ ಪರೀಕ್ಷೆ ನಡೆಸಿದಾಗ ಫಲಿತಾಂಶವು ನೆಗೆಟಿವ್‌ ಆಗಿದ್ದು, ಆದರೆ ಆಕೆ ಜನ್ಮ ನೀಡಿದ ಮಗುವಿನಲ್ಲಿ ಪಾಸಿಟಿವ್‌ ಫಲಿತಾಂಶ ಕಂಡುಬಂದ ಘಟನೆಯು ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ವಾರಣಾಸಿಯ ಕ್ಯಾಂಟ್‌ ಪ್ರದೇಶದ 26ರ ಹರೆಯದ ಯುವತಿಯು ಬನಾರಸ್‌ ಹಿಂದೂ ಯುನಿವರ್ಸಿಟಿಯ ಎಸ್ಸೆಸ್‌ ಆಸ್ಪತ್ರೆಗೆ ಮೇ 24ರಂದು ದಾಖಲಾಗಿದ್ದರು ಎಂದು indiatoday.in ವರದಿ ಮಾಡಿದೆ.

ಹೆರಿಗೆ ನಡೆಸುವ ಮುಂಚೆ ಆಸ್ಪತ್ರೆಯಲ್ಲಿನ ವೈದ್ಯರು ಯುವತಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಆಕೆಯ ಫಲಿತಾಂಶವು ನೆಗೆಟಿವ್‌ ಆಗಿತ್ತ ಎನ್ನಲಾಗಿದೆ. ಮೇ 25ರಂದು ಯುವತಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವೇಳೆ ಕೋವಿಡ್‌ ಟೆಸ್ಟ್‌ ನಡೆಸಿದಾಗ ಮಗುವಿನಲ್ಲಿ ಪಾಸಿಟಿವ್‌ ಕಂಡು ಬಂದಿದೆ ಎಂದು ವರದಿಯಾಗಿದೆ.

ಈ ಘಟನೆಯಿಂದಾಗಿ ಯುವತಿಯ ಕುಟುಂಬಸ್ಥರು ಮತ್ತು ಆಸ್ಪತ್ರೆಯ ವೈದ್ಯರು ಆಘಾತಕ್ಕೊಳಗಾಗಿದ್ದು, "ಕೆಲವೇ ದಿನಗಳಲ್ಲಿ ಇಬ್ಬರ ಕೋವಿಡ್‌ ಟೆಸ್ಟ್‌ ಅನ್ನು ಮತ್ತೊಮ್ಮೆ ನಡೆಸಲಾಗುವುದು" ಎಂದು ವೈದ್ಯರು ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿರುವುದಾಗಿ ಆಸ್ಪತ್ರೆಯ ಅಧಿಕೃತರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News