ತಾಕತ್ತಿದ್ದರೆ ಜಿಲ್ಲಾಧಿಕಾರಿ ಸಿಂಧೂರಿಯನ್ನು ವರ್ಗಾವಣೆ ಮಾಡಿಸಿ: ಪ್ರತಾಪ್ ಸಿಂಹಗೆ ಜಿ.ಟಿ.ದೇವೇಗೌಡ ಸವಾಲು

Update: 2021-05-28 11:19 GMT

ಮೈಸೂರು, ಮೇ 28: ನಿಮ್ಮದೆ ಸರ್ಕಾರ ಇದೆ. ನೀವು ಪ್ರಭಾವಿ ಸಂಸದರಿದ್ದೀರಿ, ನಿಮಗೆ ತಾಕತ್ತಿದ್ದರೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ನಿಂತು ಹೇಳಿಕೆ ಕೊಡುವುದಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಹತ್ತು ಮಂದಿ ಶಾಸಕರು ಕೆಲಸ ಮಾಡುತ್ತಿಲ್ಲ. ಅವರೆಲ್ಲ ಝೀರೊ,  ಇವನೊಬ್ಬನೆ ಹೀರೋ ಎಂದು ಹರಿಹಾಯ್ದರು.

ಮಾಧ್ಯಮಗಳ ಮುಂದೆ ನಿಂತು ಜಿಲ್ಲಾಧಿಕಾರಿಗಳನ್ನು ಟೀಕೆ ಮಾಡುವುದಲ್ಲ, ಅವರು ಸರಿ ಇಲ್ಲ ಎನ್ನುವುದಾದರೆ ನಿಮ್ಮದೆ ಸರ್ಕಾರ ಇದೆ, ತಾಕತ್ತಿದ್ದರೆ ವರ್ಗಾವಣೆ ಮಾಡಿಸಲಿ ಎಂದ ಅವರು, ಅಧಿಕಾರಿಗಳು ಇಲ್ಲದೆ ನಾವೇನು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಹತ್ತು ಮಂದಿ ಶಾಸಕರು ಕೆಲಸ ಮಾಡಿಲ್ಲ ಎನ್ನುವ ಈತ ಏನು ಮಾಡಿದ್ದಾನೆ ಎಂದು ತಿಳಿಸಲಿ. ಶಾಸಕರುಗಳಾದ ನಾವು ನಮ್ಮ ಶಾಸಕರ ನಿಧಿಯನ್ನು ಮತ್ತು ವೈಯಕ್ತಿವಾಗಿ ಎಷ್ಟು ಕೊಟ್ಟಿದ್ದೇವೆ‌, ಈತನ ಸಂಸದರ ನಿಧಿ ಮತ್ತು ವೈಯಕ್ತಿಕವಾಗಿ ಎಷ್ಟು ಕೊಟ್ಟಿದ್ದಾನೆ ಬಹಿರಂಗ ಪಡಿಸಲಿ ಎಂದು ವಾಗ್ದಾಳಿ ನಡೆಸಿದರು.

ಇದು ಮೈಸೂರು ಜಿಲ್ಲೆ, ಸಾಂಸ್ಕೃತಿಕ ನಗರಿ. ಇಲ್ಲಿಗೆ ಬಂದು ಏನೇನೊ ಮಾತನಾಡುವುದಲ್ಲ, ಬಹಳ ಎಚ್ಚರಿಕೆಯಿಂದ ಇರಬೇಕು. ಅಧಿಕಾರಿಗಳಲ್ಲಿ ಗೊಂದಲ ಉಂಟುಮಾಡಿ ಜಿಲ್ಲೆಯನ್ನು ಕೆಟ್ಟ ಪರಿಸ್ಥಿತಿಗೆ ಕೊಂಡೊಯ್ಯುವುದು ಬೇಡ ಎಂದು ಹೇಳಿದರು.

ಅಧಿಕಾರಿಗಳೆಲ್ಲರೂ ಉತ್ತಮವಾಗಿ ಕೆಲ ಮಾಡುತ್ತಿದ್ದಾರೆ. ಹಾಗಾಗಿ ಕೊರೋನ ಸೋಂಕು ಹೆಚ್ಚಾದರೂ ಸಾವಿನ ಸಂಖ್ಯೆ ಇಳಿಕೆ ಕಂಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News