ಕೋವಿಡ್ ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ: ಪ್ರಿಯಾಂಕ್ ಖರ್ಗೆ

Update: 2021-05-28 12:57 GMT

ಬೆಂಗಳೂರು, ಮೇ 28: `ಕೋವಿಡ್ ಸೋಂಕು ತಡೆಗಟ್ಟಲು ಆಯುರ್ವೇದ ಬಳಕೆ ಮಾಡಿ, ಗೋಮೂತ್ರ ಕುಡಿಯಿರಿ, ಸಗಣಿ ಮೆತ್ತಿಕೊಳ್ಳಿ ಎಂದು ಪ್ರಚಾರ ಮಾಡಿದ್ದ ಬಿಜೆಪಿ ನಾಯಕರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇದೀಗ ಕೋವಿಡ್ ಲಸಿಕೆ ಬಗ್ಗೆ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ, ಶಾಸಕ ರಿಝ್ವಾನ್ ಅರ್ಶದ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಡವರಿಗೆ ಗೋಮೂತ್ರ ಕುಡಿಯುರಿ, ಸಗಣಿ ಮೆತ್ತಿಕೊಳ್ಳಿ ಎಂದು ಹೇಳುವ ಬಿಜೆಪಿ ನಾಯಕರು ತಮಗೆ ಕೋವಿಡ್ ಬಂದರೆ ಪ್ರತಿಷ್ಠಿತ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅವೈಜ್ಞಾನಿಕ ಪ್ರಚಾರ ನಿಲ್ಲಿಸಿ, ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಡಿ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಇಂಡಿಯನ್ ಇನ್ಸ್‍ಟಿಟ್ಯೂಟ್, ಇಸ್ತ್ರೋ ನಿರ್ಮಾಣವಾದವು ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು' ಎಂದು ಟೀಕಿಸಿದರು.

ಬಿಸಿಲಿನಲ್ಲಿ 15 ನಿಮಿಷ ನಿಂತರೆ ಸೋಂಕು ಬರಲ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಕಲಬುರಗಿ ಬಿಸಿಲನಾಡು. ಅಲ್ಲಿ ಏಕೆ ಸೋಂಕು ಹೋಗುತ್ತಿಲ್ಲ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬಾಬಾ ರಾಮದೇವ್ ಅವರ ಕರೋನಿಲ್ ಔಷಧಿ ಬಿಡುಗಡೆ ಮಾಡಿದ್ದರು. ಆದರೆ, ರಾಮದೇವ್ ಆಲೋಪತಿ ಚಿಕಿತ್ಸೆಯನ್ನು `ಸ್ಟುಪಿಡ್' ಎಂದು ವ್ಯಂಗ್ಯವಾಡುತ್ತಾರೆ. ಬಿಸಿಲಲ್ಲಿ ನಿಂತು ರೋಗ ವಾಸಿ ಮಾಡಿಕೊಳ್ಳುವುದಾಗಿದ್ದರೆ ದೊಡ್ಡ ಆಸ್ಪತ್ರೆಗಳು ಏಕೆ ಬೇಕು?' ಎಂದು ಪ್ರಿಯಾಂಕ್ ಖರ್ಗೆ ಎಂದು ಪ್ರಶ್ನಿಸಿದರು.

ಕೋವಿಡ್ ಸೋಂಕಿಗೆ ಒಳಗಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಬಿಜೆಪಿಯ ಯಾವ ನಾಯಕರು ಗೋಮೂತ್ರ ಕುಡಿಯಲಿಲ್ಲ, ಬೆಳ್ಳುಳ್ಳಿ ತಿನ್ನಲಿಲ್ಲ. ಬದಲಿಗೆ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾದರು. ಸಲಹೆಗಳನ್ನು ಬಡವರು ಮಾತ್ರ ಪಾಲಿಸಬೇಕು ಎಂಬುದು ಬಿಜೆಪಿ ನಾಯಕರ ಧೋರಣೆ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದಿಂದ ಕೇಂದ್ರ ಸರಕಾರದ ಬೋಕ್ಕಸಕ್ಕೆ ಹೆಚ್ಚು ತೆರಿಗೆ ಕೊಡುತ್ತಿದ್ದೇವೆ, ನಮಗೂ ಅಗತ್ಯದಷ್ಟು ಔಷಧಿ, ಆರೋಗ್ಯ ಸೌಲಭ್ಯ, ಆರ್ಥಿಕ ಪ್ಯಾಕೇಜ್ ಕೊಡಿ ಎಂದು ಒತ್ತಾಯಿಸಿದರು.

ಕೊರೋನ ಲಸಿಕೆ ವಿರುದ್ಧ ಅಪಪ್ರಚಾರ ನಡೆಸಿದ್ದು ಬಿಜೆಪಿ ನಾಯಕರು. ಕಾಂಗ್ರೆಸ್ ಯಾವುದೇ ಅಪಪ್ರಚಾರ ನಡೆಸಿಲ್ಲ. ಆ ಪಕ್ಷದ ಶಾಸಕರು, ಸಂಸದರು, ಸಚಿವರು ಅಲೋಪತಿ ಮೆಡಿಷನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಜನತೆಗೆ ಸಮರ್ಪಕವಾಗಿ ಲಸಿಕೆ ಒದಗಿಸಲು ಸಾಧ್ಯವಾಗದೆ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಕಾರಾತ್ಮಕ ಮಾತ್ರ!

ಪಿಎಂ ಕೇರ್ಸ್ ಬಗ್ಗೆ ಲೆಕ್ಕ ಕೇಳಬಾರದು. ಗಂಗಾ ನದಿಯಲ್ಲಿ ಹೆಣಗಳು ತೇಲಿ ಬಂದರೆ ಪ್ರಶ್ನಿಸಬಾರದು, ಔಷಧಿ, ಲಸಿಕೆ, ವೈದ್ಯಕೀಯ ಸೌಲಭ್ಯ ಸಿಗದೆ ಇರುವ ಬಗ್ಗೆ ಮಾತನಾಡಬಾರದು. ಆದಷ್ಟು ಕೇಂದ್ರ ಸರಕಾರ ಬಗ್ಗೆ ಸಕಾರಾತ್ಮಕ ಪ್ರಚಾರ ಮಾಡಬೇಕು ಎಂದು ಫರ್ಮಾನು ಹೊರಡಿಸಲಾಗಿದೆ ಎಂದು ಟೀಕಿಸಿದ ಅವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಕಾರಾತ್ಮಕವಾಗಿ ಪ್ರಚಾರ ಮಾಡಬೇಕು, ಎಲ್ಲೆಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿವೆಯೋ ಅಲ್ಲಿ ಆಳುವ ಸರಕಾರಗಳನ್ನು ಹೊಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

-ಪ್ರಿಯಾಂಕ್ ಖರ್ಗೆ, ಶಾಸಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News