ಲಸಿಕೆಯನ್ನು ಮಾರಾಟ‌ ಮಾಡುತ್ತಿರುವ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಯಾಕಿಲ್ಲ‌: ಸಿದ್ದರಾಮಯ್ಯ ಪ್ರಶ್ನೆ

Update: 2021-05-28 13:59 GMT

ಬೆಂಗಳೂರು, ಮೇ 28: ಖಾಸಗಿ ಆಸ್ಪತ್ರೆಗಳು ನೀಡುವ ಲಸಿಕೆಗೆ ಸೇವಾ ಶುಲ್ಕವನ್ನು ರೂ.100ರಿಂದ 200ಕ್ಕೆ ಹೆಚ್ಚಿಸಿರುವ ರಾಜ್ಯದ ಬಿಜೆಪಿ ಸರಕಾರ ಯಾರ ಹಿತರಕ್ಷಣೆ‌ ಮಾಡುತ್ತಿದೆ? ರಾಜ್ಯದ ಜನರದ್ದೋ? ಖಾಸಗಿ ಆಸ್ಪತ್ರೆಗಳದ್ದೋ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ಎಪ್ರಿಲ್‌ನಲ್ಲಿ ರಾಜ್ಯ ಬಿಜೆಪಿ ಸರಕಾರ ಖಾಸಗಿ‌ ಸಂಸ್ಥೆಗಳು ನೀಡುವ ಲಸಿಕೆಗೆ ರೂ.100 ಸೇವಾ ಶುಲ್ಕವನ್ನು‌ ನಿಗದಿಪಡಿಸಿದ್ದರೂ, ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಹೆಚ್ಚುವರಿ‌ ಶುಲ್ಕ ವಸೂಲಿ‌ ಮಾಡುತ್ತಿದ್ದಾರೆನ್ನುವ ದೂರುಗಳಿವೆ. ಹೀಗಿರುವಾಗಲೇ ಸರಕಾರ ಸೇವಾ ಶುಲ್ಕ‌ವನ್ನು ದುಪ್ಪಟ್ಟುಗೊಳಿಸಿ ಸುಲಿಗೆಯನ್ನು ಬೆಂಬಲಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಲಸಿಕೆ, ಸರಕಾರಿ ಆಸ್ಪತ್ರೆಗಳಲ್ಲಿ ಯಾಕಿಲ್ಲ ಎಂದು ಹೈಕೋರ್ಟ್‌ ಚಾಟಿ‌ ಬೀಸಿದರೂ ರಾಜ್ಯದ ಬಿಜೆಪಿ ಸರಕಾರ ಖಾಸಗಿ‌ ಆಸ್ಪತ್ರೆಗಳ‌ ಸುಲಿಗೆಯನ್ನು ಬೆಂಬಲಿಸುತ್ತಿರುವುದು ನಿರ್ಲಜ್ಜತನದ ಪರಮಾವಧಿ ಎಂದು ಟೀಕಿಸಿದ್ದಾರೆ.

ರಾಜ್ಯದ ಜನತೆಗೆ‌ ಉಚಿತವಾಗಿ ಸರಕಾರಿ ಆಸ್ಪತ್ರೆಗಳಲ್ಲಿಯೇ ಕೊರೋನ ಲಸಿಕೆ‌ ಸಿಗುವಂತೆ ಮಾಡಬೇಕಾಗಿರುವ ಆರೋಗ್ಯ ಸಚಿವ ಸುಧಾಕರ್ ಖಾಸಗಿ ಆಸ್ಪತ್ರೆಗಳ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ. ಇವರು ಸಚಿವರೋ? ಖಾಸಗಿ ಆಸ್ಪತ್ರೆಗಳ ಪ್ರಚಾರಕರೋ ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಲಸಿಕಾ ತಯಾರಕ ಸಂಸ್ಥೆ ನಿಗದಿಪಡಿಸಿದ ದರದ ಜೊತೆಗೆ ರೂ.100 ಸೇವಾಶುಲ್ಕ ಮಾತ್ರ ವಸೂಲಿ ಮಾಡಬೇಕೆಂದು ಕೇಂದ್ರ ಬಿಜೆಪಿ ಸರಕಾರದ ಸುತ್ತೋಲೆ ಇದ್ದರೂ ಲಸಿಕೆಯನ್ನು 900 ರೂ.ಗೆ‌ ಮಾರಾಟ‌ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಯಾಕಿಲ್ಲ‌ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News