ಜಿಲ್ಲಾಧಿಕಾರಿ ವರ್ಗಾವಣೆ ಬಗ್ಗೆ ಜಿ.ಟಿ.ದೇವೇಗೌಡರ ಸವಾಲಿಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು ಹೀಗೆ...

Update: 2021-05-28 14:06 GMT

ಮೈಸೂರು,ಮೇ.28: ವರ್ಗಾವಣೆ ಮಾಡೋದೆ ತಾಕತ್ತಾದರೆ, ಅಂತಹ ತಾಕತ್ತು ನನಗೆ ಬೇಡ. ಒಬ್ಬ ಸಂಸದನಾಗಿ ನಾನು ನನ್ನ ಕೆಲಸದಲ್ಲಿ ತಾಕತ್ತು ತೋರಿಸಿದ್ದೇನೆ ಎಂದು ಶಾಸಕ ಜಿ.ಟಿ.ದೇವೇಗೌಡರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ನಾನು ಹೊರಗಿನವನು. ಆದರೂ ಮೊದಲ ಚುನಾವಣೆಯಲ್ಲಿ ಮೈಸೂರು- ಕೊಡಗಿನ ಜನ ಮೂವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು. ನನ್ನ ತಾಕತ್ತು ತೋರಿಸಿ ಒಳ್ಳೆಯ ಕೆಲಸ ಮಾಡಿದೆ. ಅದಕ್ಕಾಗಿ ಎರಡನೇ ಚುನಾವಣೆಯಲ್ಲಿ ಒಂದು ಲಕ್ಷದ ನಲವತ್ತು ಸಾವಿರ ಮತಗಳಿಂದ ಗೆಲ್ಲಿಸಿದರು. ಇದಕ್ಕಿಂತಲೂ ನಾನು ಯಾವ ತಾಕತ್ತು ತೋರಿಸಬೇಕು ಎಂದರು.

ಜಿಲ್ಲಾಧಿಕಾರಿಗಳನ್ನೋ ಅಥವಾ ಇನ್ಯಾವುದೋ ಅಧಿಕಾರಿಯನ್ನು ವರ್ಗಾವಣೆ ಮಾಡಿಸುವುದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನು ನಾನು ಮಾಡಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಸಾ.ರಾ ಮಹೇಶ್ ಅವರನ್ನು ಹೊಗಳಿದ್ದು ಜಿ.ಟಿ ದೇವೇಗೌಡರಿಗೆ ಇಷ್ಟವಾಗಿಲ್ಲ ಅನ್ನಿಸುತ್ತದೆ. ಹೀಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡರು ನನಗೆ ತಂದೆ ಇದ್ದಂತೆ. ಅವರು ಹರೀಶ್ ಗೌಡರನ್ನು ಹೇಗೆ ನೋಡಿಕೊಂಡಿದ್ದಾರೋ ಹಾಗೇ ನನ್ನನ್ನ ನೋಡಿಕೊಂಡಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಜಿ.ಟಿ ದೇವೇಗೌಡರಿಗೆ ಇದೆ. ಅವರು ಬೈಯುವುದನ್ನ ನಾನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ ಎಂದು  ಹೇಳಿದರು.

ನಾನು ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾಗ ಶಾಸಕರ ಕಾರ್ಯವೈಖರಿ ನೋಡಿದ್ದೇನೆ. ಕೆ.ಆರ್ ನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಶಾಸಕ ಸಾರಾ.ಮಹೇಶ್ ಜಿಲ್ಲೆಗೆ ಮೇಲ್ಪಂಕ್ತಿಯಾಗುವಂತೆ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದು ನಿಜ. ಇದರಲ್ಲಿ ಯಾರನ್ನು ಹೊಗಳುವ, ತೆಗಳುವ ಉದ್ದೇಶವಿಲ್ಲ. ಇದನ್ನು ಅಪಾರ್ಥ ಮಾಡಿಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News