ಕೊರೋನ ಸೋಂಕಿನಿಂದ ಮೃತಪಟ್ಟ 67 ಪತ್ರಕರ್ತರ ಕುಟುಂಬಗಳಿಗೆ ಕೇಂದ್ರದಿಂದ ಆರ್ಥಿಕ ನೆರವು

Update: 2021-05-28 17:14 GMT

ಹೊಸದಿಲ್ಲಿ, ಮೇ 28: ಪ್ರಸಕ್ತ ವಿತ್ತ ವರ್ಷದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ಪತ್ರಕರ್ತರ 26 ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಇದರಂತೆ ಈ ಪತ್ರಕರ್ತರ ಕುಟುಂಬಗಳು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಪತ್ರಕರ್ತರ ಕಲ್ಯಾಣ ಯೋಜನೆ (ಜೆಡಬ್ಲುಸಿ) ಅಡಿಯಲ್ಲಿ ತಲಾ 5 ಲಕ್ಷ ಪರಿಹಾರ ಪಡೆಯಲಿದ್ದಾರೆ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.

ಎಪ್ರಿಲ್ನಿಂದ ಆರಂಭವಾದ 2021-22 ವಿತ್ತ ವರ್ಷದಲ್ಲಿ ಮೃತಪಟ್ಟ 26 ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಒದಗಿಸುವ ಸಮಿತಿಯ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಕಳೆದ ವಿತ್ತ ವರ್ಷದಲ್ಲಿ ಕೊರೋನದಿಂದ ಮೃತಪಟ್ಟ 41 ಪತ್ರಕರ್ತರ ಕುಟುಂಬಗಳಿಗೆ ಹಣಕಾಸು ನೆರವು ನೀಡಲಾಗಿತ್ತು. ಕಳೆದ ಹಣಕಾಸುವ ವರ್ಷದಿಂದ ಕೊರೋನ ಸೋಂಕಿನಿಂದ ಮೃತಪಟ್ಟ ಒಟ್ಟು 67 ಪತ್ರಕರ್ತರ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಕೊರೋನ ಸೋಂಕಿನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಕೇಂದ್ರದ ಯೋಜನೆ ಅಡಿಯಲ್ಲಿ ಪರಿಹಾರ ಒದಗಿಸುವುದನ್ನು ನಿರ್ವಹಿಸುವ ಜೆಡಬ್ಲುಎಸ್ ಸಮಿತಿ ಪರಿಹಾರ ನೀಡುವುದನ್ನು ತ್ವರಿತಗೊಳಿಸಲು ಪ್ರತಿ ವಾರ ಸಭೆ ಸೇರುತ್ತಿದೆ ಎಂದು ಅದು ತಿಳಿಸಿದೆ.

ಪತ್ರಕರ್ತರಿಗಿರುವ ಇತರ ಯೋಜನೆಗಳಿಗೆ ಭಿನ್ನವಾಗಿ ಜೆಡಬ್ಲುಎಸ್ ಅಡಿಯಲ್ಲಿ ಸೌಲಭ್ಯ ಪಡೆಯಲು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊ ಮಾನ್ಯತೆ ಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News