ಯಡಿಯೂರಪ್ಪ ಸರ್ವಸಮ್ಮತ ನಾಯಕ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ನಳಿನ್ ಕುಮಾರ್ ಸ್ಪಷ್ಟನೆ

Update: 2021-05-28 17:18 GMT

ಬೆಂಗಳೂರು, ಮೇ 28: `ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಮ್ಮ ಸರ್ವಸಮ್ಮತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಬದಲಾವಣೆ ಬಗ್ಗೆ ಮಾತುಗಳು ಕೇಳಿಬರುತ್ತಲಿವೆ. ಆದರೆ, ಅವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಯಶವಂತಪುರ ಕ್ಷೇತ್ರದ ಮಾಗಡಿ ರಸ್ತೆಯ ತಾವರೆಕೆರೆ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಅವರಿಂದ ವಿವರಣೆಯನ್ನು ಪಡೆಯುತ್ತೇನೆ. ಅವರ ಉತ್ತರದ ಬಳಿಕ ಯೋಗೇಶ್ವರ್ ಅವರು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಸಂಕಷ್ಟದಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಅವರ ಪ್ರಾಣ ರಕ್ಷಣೆ ನಮ್ಮ ಜವಾಬ್ದಾರಿ. ಉತ್ತಮ ಆಡಳಿತ ನಡೆಸಲು ಜನರು ಪಕ್ಷಕ್ಕೆ ಆಶೀರ್ವಾದ ನೀಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದು, ಇಂದು ಯಾವುದೇ ರಾಜಕೀಯ ಚಟುವಟಿಕೆಯನ್ನು ಯಾವುದೇ ಶಾಸಕರು ಮಾಡಬಾರದು. ಪ್ರತಿಯೊಬ್ಬ ಶಾಸಕರ ಜವಾಬ್ದಾರಿಯೆಂದರೆ ತಮ್ಮ ಕ್ಷೇತ್ರದಲ್ಲಿರಬೇಕು. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಕಟ್ಟಪ್ಪಣೆ ಮಾಡಿದರು.

ಕೋವಿಡ್ ಸಂಬಂಧಿತ ನೆರವನ್ನು ಸಂಕಷ್ಟದಲ್ಲಿರುವ ಜನತೆಗೆ ಒದಗಿಸಬೇಕು. ಕೋವಿಡ್ ನಿರ್ವಹಣೆಗೆ ಪೂರ್ಣ ಪ್ರಯತ್ನವನ್ನು ಎಲ್ಲ ಶಾಸಕರು ಮತ್ತು ಮುಖಂಡರು ಹಾಕಬೇಕು. ಈ ಬಗ್ಗೆ ಯಾವುದೇ ಗೊಂದಲಗಳು ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಇದೇ ವೇಳೆ ಸ್ಪಷ್ಟವಾಗಿ ಹೇಳಿದರು.

ನಮ್ಮದು ಬಿಜೆಪಿ ಸರಕಾರ: `ಯಾರೇ ಆಗಲಿ ಮೂರು ಪಕ್ಷದ ಸರಕಾರ ಎಂದು ಹೇಳಬಾರದು. ಮುಖ್ಯಮಂತ್ರಿಯಾದವರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಆ ರೀತಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆದುಕೊಂಡಿದ್ದಾರೆ. ನಮ್ಮ ಪಕ್ಷದ ಸಚಿವರ, ಶಾಸಕರ ಮಾತನ್ನಷ್ಟೇ ಕೇಳಿದರೆ ಸಾಲದು. ವಿರೋಧ ಪಕ್ಷದ ಮುಖಂಡರ ಸಲಹೆಗಳನ್ನೂ ಕೇಳಬೇಕಾಗುತ್ತದೆ' ಎಂದು ಸಚಿವ ಸೋಮಶೇಖರ್ ಅವರು ಯೋಗೇಶ್ವರ್ ಹೇಳಿಕೆಗೆ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದರು.

`ಕೆಲವು ತೊಂದರೆಗಳ ಬಗ್ಗೆ ಪ್ರತಿಪಕ್ಷಗಳವರು ಗಮನಕ್ಕೆ ತಂದಾಗ ಬಗೆಹರಿಸಬೇಕಾಗುತ್ತದೆ. ಆ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅಷ್ಟಕ್ಕೇ ಇಂತಹ ಹೇಳಿಕೆಯನ್ನು ಯಾರೂ ಕೊಡಬಾರದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲವೊಮ್ಮೆ ಮಾಧ್ಯಮಗಳ ಮುಖಾಂತರ ಸಮಸ್ಯೆಗಳನ್ನು ತಿಳಿಸಿದಾಗ ಅದನ್ನು ಸಿಎಂ ಬಗೆಹರಿಸುತ್ತಾರೆ ಎಂದು ಸೋಮಶೇಖರ್ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನಗೆ ಉತ್ತರಿಸಿದರು.

ಹಸ್ತಕ್ಷೇಪ ಸುಳ್ಳು: ವಿಜಯೇಂದ್ರ ಅವರಿಗೂ ಆಡಳಿತಕ್ಕೂ ಯಾವುದೇ ಸಂಬಂಧ ಇಲ್ಲ. ಅವರು ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದು, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ನಾನು ಮಂತ್ರಿಯಾಗಿ ಒಂದೂವರೆ ವರ್ಷವಾಯಿತು. ಆದರೆ, ಇಲಾಖೆಗೆ ಸಂಬಂಧಪಟ್ಟಂತೆ, ಇನ್ಯಾವುದೇ ಕಾರಣಕ್ಕೆ ವಿಜಯೇಂದ್ರ ಅವರನ್ನು ಈವರೆಗೆ ಭೇಟಿ ಮಾಡಿಲ್ಲ. ಅವರೂ ಹಸ್ತಕ್ಷೇಪ ಮಾಡಿಲ್ಲ. ಅವರು ಸರಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ ಬಗ್ಗೆ ನನಗೆ ಇದುವರೆಗೂ ಯಾವುದೇ ನಿದರ್ಶನ ಸಿಕ್ಕಿಲ್ಲ' ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.

`ಮೈಸೂರಿನಲ್ಲಿ ಜಿಲ್ಲಾಧಿಕಾರಿ ವಿರುದ್ಧ ಜನಪ್ರತಿನಿಧಿಗಳು ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿ ಮೈಸೂರಿಗೆ ಬಂದು ಏಳೆಂಟು ತಿಂಗಳಾಗಿದೆ. ಈವರೆಗೆ ಅಷ್ಟಾಗಿ ಸಮಸ್ಯೆ ಕಂಡಿರಲಿಲ್ಲ. ನಾನು ಮುಂಚೆ ವಾರದಲ್ಲಿ ಮೂರು ದಿನ ಮೈಸೂರಿಗೆ ಭೇಟಿ ನೀಡಿ ನೋಡಿಕೊಳ್ಳುತ್ತಿದೆ. ಆದರೆ, ಈಗ ನನ್ನ ಕ್ಷೇತ್ರದಲ್ಲಿಯೇ ಕೊರೋನ ಉಲ್ಬಣವಾಗುತ್ತಿರುವ ಕಾರಣ, ವಾರದಲ್ಲಿ ಶನಿವಾರದಂದು ಮಾತ್ರ ಮೈಸೂರಿಗೆ ಭೇಟಿ ನೀಡುತ್ತಿದ್ದೇನೆ. ನಾಳೆ ಪುನಃ ಮೈಸೂರಿಗೆ ಹೋಗುತ್ತಿದ್ದೇನೆ. ಶಾಸಕರ ಸಹಿತ ಜನಪ್ರತಿನಿಧಿಗಳ ಸಭೆಯನ್ನು ಸಿಎಂ ನಾಳೆ ಕರೆದಿದ್ದು, ಅದಕ್ಕಿಂತ ಮುಂಚಿತವಾಗಿ ಜನಪ್ರತಿನಿಧಿಗಳ ಜೊತೆ ನಾನೂ ಒಂದು ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸುತ್ತೇನೆ'

-ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News