ಕೊರೋನ ಸಂಕಟ ಕಾಲದಲ್ಲಿ ಕಾಲೆಳೆಯುವ ರಾಜಕಾರಣ

Update: 2021-05-29 05:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊನೆಗೂ ಸರಕಾರದೊಳಗಿರುವವರು ದಿಲ್ಲಿ ವರಿಷ್ಠರ ಬಳಿಗೆ ಧಾವಿಸಿದ್ದಾರೆ. ಹಾಗೆಂದು ಖುಷಿಪಡುವ ಅಗತ್ಯವಿಲ್ಲ. ಆಕ್ಸಿಜನ್, ಲಸಿಕೆ, ವೆಂಟಿಲೇಟರ್ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಅವರು ಧಾವಿಸಿರುವುದಲ್ಲ. ಬದಲಿಗೆ, ನಾಯಕತ್ವ ಬದಲಾವಣೆಯ ಬೇಡಿಕೆಯನ್ನಿಟ್ಟು ಹೈಕಮಾಂಡ್ ಬಳಿ ಧಾವಿಸಿದ್ದಾರೆ. ಒಟ್ಟಿನಲ್ಲಿ, ಅಗತ್ಯ ಬಿದ್ದಾಗ ವರಿಷ್ಠರ ಬಳಿ ಧಾವಿಸುವುದಕ್ಕೆ ನಮಗೆ ಸಾಧ್ಯವಿದೆ ಎನ್ನುವುದನ್ನು ಅವರು ಈ ಮೂಲಕ ನಿರೂಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯದ ಮೇಲೆ ಅನ್ಯಾಯಗಳಾಗುತ್ತಿದ್ದಾಗ ಅದರ ಕುರಿತಂತೆ ಯಾವೊಬ್ಬ ರಾಜ್ಯ ಸಚಿವರು, ಸಂಸದರು ತುಟಿ ಬಿಚ್ಚಿಲ್ಲ. ಮಳೆ ಪರಿಹಾರಕ್ಕಾಗಿ ರಾಜ್ಯ ವಿಶೇಷ ಅನುದಾನದ ಬೇಡಿಕೆ ಇಟ್ಟಾಗ, ಕೆಲವು ಸಂಸದರು ‘ರಾಜ್ಯಕ್ಕೆ ಕೇಂದ್ರದ ನೆರವಿನ ಅಗತ್ಯವಿಲ್ಲ. ನೆರೆ ಪರಿಹಾರವನ್ನು ಒದಗಿಸುವುದಕ್ಕೆ ಬೇಕಾದ ನಿಧಿ ಖಜಾನೆಯಲ್ಲಿದೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಕೇಂದ್ರದ ವರಿಷ್ಠರನ್ನು ಮೆಚ್ಚಿಸಲು ರಾಜ್ಯದ ಜನರಿಗೆ ದ್ರೋಹವೆಸಗಿದ್ದರು.

ಕೊರೋನದ ಸಂದರ್ಭದಲ್ಲಿ, ಕೇಂದ್ರ ಸರಕಾರ ತನಗೆ ಬೇಕಾದ ರಾಜ್ಯಗಳಿಗೆ ಆದ್ಯತೆಯ ಮೇಲೆ ಆಕ್ಸಿಜನ್‌ಗಳನ್ನು ಒದಗಿಸುತ್ತಿದ್ದಾಗಲೂ ರಾಜ್ಯದ ಸಂಸದರು ಬಾಯಿ ಹೊಲಿದು ಕೂತಿದ್ದರು. ಕೊನೆಗೆ ರಾಜ್ಯ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಬೇಕಾಯಿತು. ಆದರೆ ಹೈಕೋರ್ಟ್ ಆದೇಶವನ್ನೂ ಕೇಂದ್ರ ಸರಕಾರ ತಿರಸ್ಕರಿಸಿ, ಅದರ ವಿರುದ್ಧ ಸುಪ್ರೀಂಕೋರ್ಟ್‌ನ ಮೊರೆ ಹೋಯಿತು. ಈ ಸಂದರ್ಭದಲ್ಲೂ ರಾಜ್ಯದ ಸಂಸದರು ಕೇಂದ್ರ ವರಿಷ್ಠರನ್ನು ಭೇಟಿ ಮಾಡಿ, ಕರ್ನಾಟಕದ ಬೇಡಿಕೆಗಳನ್ನು ಅವರ ಮುಂದಿಡುವ ಪ್ರಯತ್ನ ಮಾಡಲಿಲ್ಲ. ಅಂತಿಮವಾಗಿ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಮೂಲಕ ರಾಜ್ಯಕ್ಕೆ ಬೇಕಾದ ಆಕ್ಸಿಜನ್‌ಗಳು ಸಿಗುವಂತಾಯಿತು. ಹಾಗೆಂದು ಕೊರೋನದಿಂದಾಗಿ ಬಿಗಡಾಯಿಸಿರುವ ರಾಜ್ಯದ ಆರೋಗ್ಯ ವ್ಯವಸ್ಥೆ ಇನ್ನೂ ಚೇತರಿಸಿಕೊಂಡಿಲ್ಲ. ಈ ನಿಟ್ಟಿನಲ್ಲಿ ಸರಕಾರದ ಜೊತೆಗೆ ಸರ್ವರೂ ಕೈ ಜೋಡಿಸಿ ಕೆಲಸ ನಿರ್ವಹಿಸಬೇಕು. ರಾಜ್ಯಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೇಂದ್ರವನ್ನು ಒತ್ತಾಯಿಸಬೇಕು. ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾದ 11 ಸಾವಿರ ಕೋಟಿ ರೂ. ಜಿಎಸ್‌ಟಿ ಹಣ ಬಾಕಿ ಉಳಿಸಿದೆ. ಅವುಗಳನ್ನು ಮರಳಿಸಿದರೂ, ರಾಜ್ಯದ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಆದರೆ ಕೇಂದ್ರದ ನಾಯಕರು ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.

  ಇಂತಹ ಸಂದರ್ಭದಲ್ಲಿ, ಸರಕಾರದೊಳಗಿರುವ ಒಂದು ಗುಂಪು ರಾಜ್ಯದ ನಾಯಕತ್ವವನ್ನು ಬದಲಿಸುವುದಕ್ಕಾಗಿ ಕೇಂದ್ರದ ವರಿಷ್ಠರನ್ನು ಭೇಟಿ ಮಾಡುತ್ತದೆ ಎನ್ನುವ ಸುದ್ದಿಯೇ ವಿಲಕ್ಷಣವಾದುದು. ಕೊರೋನ ನಿರ್ವಹಿಸುವಲ್ಲಿ ಯಡಿಯೂರಪ್ಪ ಅವರು ವಿಫಲರಾಗಿರುವ ಕಾರಣವನ್ನು ಮುಂದೊಡ್ಡಿ ನಾಯಕತ್ವ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದರೆ ಅದಕ್ಕೆ ಒಂದಿಷ್ಟು ಘನತೆಯಿರುತ್ತಿತ್ತು. ಆದರೆ ಕೊರೋನ ಇವರಾರಿಗೂ ಒಂದು ಸಮಸ್ಯೆಯೇ ಆಗಿಲ್ಲ್ಲ. ಅವರಿಗೆ ಕೊರೋನಕ್ಕಿಂತ ದೊಡ್ಡ ಸಮಸ್ಯೆಯಾಗಿ ‘ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ’ ಕಾಡುತ್ತಿದ್ದಾರೆ. ತಮ್ಮ ಖಾತೆಯೊಳಗೆ ಯಡಿಯೂರಪ್ಪ ಅವರ ಪುತ್ರ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎನ್ನುವುದು ಸದ್ಯಕ್ಕೆ ಅವರ ದೊಡ್ಡ ಸಮಸ್ಯೆಯಾಗಿದೆ. ಈ ಹಿಂದೆ, ಇದೇ ಆರೋಪದೊಂದಿಗೆ ಈಶ್ವರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡಿರುವುದು ನೆನಪಿಸಿಕೊಳ್ಳಬಹುದು.

ತಮ್ಮ ತಮ್ಮ ಖಾತೆಗಳನ್ನು ಮುಕ್ತವಾಗಿ ಮೇಯುವುದಕ್ಕೆ ಅಡ್ಡಿಯಾದಾಗ ರಾಜ್ಯಪಾಲರು, ದಿಲ್ಲಿ ವರಿಷ್ಠರು ಇವರಿಗೆ ನೆನಪಾಗುತ್ತಾರೆ. ಆದರೆ, ಆಕ್ಸಿಜನ್ ಕೊರತೆಯಿಂದ ನೂರಾರು ರೋಗಿಗಳು ಪ್ರಾಣ ಬಿಡುತ್ತಿರುವಾಗ, ಅವರ ನೆರವಿಗಾಗಿ ವರಿಷ್ಠರನ್ನು ಭೇಟಿ ಮಾಡಬೇಕು ಎಂದು ಇವರಿಗೆ ಈವರೆಗೆ ಅನ್ನಿಸಿಲ್ಲ. ಸರಕಾರದೊಳಗೆ ಮುಖ್ಯಮಂತ್ರಿಯವರ ಪುತ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದು ರಾಜ್ಯ ಸರಕಾರದೊಳಗಿರುವ ಹಲವು ಸಚಿವರು, ಶಾಸಕರ ಆರೋಪವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಸಂದರ್ಭವನ್ನು ಬಳಸಿಕೊಂಡು ವಿಜಯೇಂದ್ರ ಅವರು ಭವಿಷ್ಯದ ಮುಖ್ಯಮಂತ್ರಿಯಾಗಿ ಬೆಳೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಹಲವರ ಆತಂಕವಾಗಿದೆ. ಈಗಾಗಲೇ ಸಂತೋಷ್ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಎಂದು ಗುರುತಿಸಿ ಇಟ್ಟುಕೊಂಡಿರುವ ಆರೆಸ್ಸೆಸ್‌ಗೂ ಇದೇ ಭಯವಿದೆ. ಈ ಅವಧಿ ಮುಗಿದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವಂತಿಲ್ಲ. ಆದರೆ ಯಡಿಯೂರಪ್ಪ ಅವರು ಆ ಸ್ಥಾನಕ್ಕೆ ಅಭ್ಯರ್ಥಿಯಾಗಿ ತನ್ನ ಬದಲಿಗೆ ವಿಜಯೇಂದ್ರ ಅವರನ್ನು ಇಳಿಸಬಹುದು ಎನ್ನುವ ಆತಂಕ ಹಲವರನ್ನು ಕಾಡುತ್ತಿದೆ. ಸದ್ಯದ ಭಿನ್ನಮತದ ನೇತೃತ್ವವನ್ನು ಸಚಿವ ಯೋಗೇಶ್ವರ್ ಅವರು ವಹಿಸಿಕೊಂಡಿದ್ದರೂ, ಹಲವರು ಅವರ ಬೆನ್ನ ಹಿಂದೆ ನಿಂತಿದ್ದಾರೆ. ಅಶೋಕ್, ಈಶ್ವರಪ್ಪ ಅವರು ಬಹಿರಂಗವಾಗಿ ಹೇಳಿಕೆ ನೀಡದೇ ಇದ್ದರೂ, ಭಿನ್ನರನ್ನು ಯಡಿಯೂರಪ್ಪ ವಿರುದ್ಧ ಪ್ರಚೋದಿಸುತ್ತಿದ್ದಾರೆ ಎನ್ನುವುದು ಗುಟ್ಟಾಗಿಲ್ಲ. ಆರೆಸ್ಸೆಸ್‌ನ ನಾಯಕರು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ.

 ಕೊರೋನ ಎದುರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದು, ನಾಯಕತ್ವವನ್ನು ಬದಲಿಸಿದರೆ ಈ ಕೊರೋನ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇ? ಅದೂ ಇಲ್ಲ. ಕೊರೋನ ಸಂದರ್ಭದಲ್ಲಿ ನಾಯಕತ್ವವನ್ನು ಬದಲಿಸುವ ಸಾಹಸಕ್ಕೇನಾದರೂ ವರಿಷ್ಠರು ಕೈ ಹಾಕಿದರೆ, ರಾಜ್ಯದಲ್ಲಿ ಸರಕಾರವೇ ಇಲ್ಲದೆ ಅರಾಜಕತೆ ಸೃಷ್ಟಿಯಾಗಬಹುದು. ಬಿಜೆಪಿ ಒಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಕೊರೋನವನ್ನು ಎದುರಿಸಬೇಕಾದ ನಾಯಕರು, ತಮ್ಮ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಸಂದರ್ಭ ಬರಬಹುದು. ಇಷ್ಟಕ್ಕೂ ರಾಜ್ಯದಲ್ಲಿ ಕೊರೋನ ಉಲ್ಬಣಿಸಲು ನಾಯಕತ್ವದ ವೈಫಲ್ಯವೊಂದೇ ಕಾರಣವಲ್ಲ. ಕೇಂದ್ರ ಸರಕಾರದ ನಿರ್ಧಾರಗಳು ಕೊರೋನ ಉಲ್ಬಣಿಸುವುದಕ್ಕೆ ಮುಖ್ಯ ಕಾರಣವಾಗಿದೆ. ಕುಂಭಮೇಳ, ಉಪಚುನಾವಣೆಯ ಸಂದರ್ಭದಲ್ಲಿ ಸುರಕ್ಷಿತ ಅಂತರವನ್ನು ಸಂಪೂರ್ಣ ಉಲ್ಲಂಘಿಸಿದ ಫಲವನ್ನು ರಾಜ್ಯ ಮಾತ್ರವಲ್ಲ ಇಡೀ ದೇಶ ಅನುಭವಿಸುತ್ತಿದೆ. ಹಾಗೆಯೇ, ಕೊರೋನ ಎದುರಿಸಲು ಬೇಕಾದ ಸಂಪನ್ಮೂಲಗಳನ್ನು ಕೇಂದ್ರ ಒದಗಿಸದೇ ಇದ್ದರೆ, ರಾಜ್ಯ ಸರಕಾರವಾದರೂ ಏನು ಮಾಡಬೇಕು? ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಬೇಕು ಎನ್ನುವ ಆಸೆ, ಯಡಿಯೂರಪ್ಪ ವಿರೋಧಿಗಳಿಗೂ ಇರುವಂತಿದೆ. ಇಲ್ಲವಾದರೆ, ಕೇಂದ್ರ ಈ ಮಟ್ಟಿಗೆ ರಾಜ್ಯವನ್ನು ನಿರ್ಲಕ್ಷಿಸುತ್ತಿರಲಿಲ್ಲ.

ಇನ್ನು ವಿವಿಧ ಇಲಾಖೆಗಳಲ್ಲಿ ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎನ್ನುವ ಆರೋಪಗಳ ಬಗ್ಗೆ ಚರ್ಚಿಸೋಣ. ಈ ಆರೋಪದಲ್ಲಿ ಹುರುಳಿದೆ. ಇಂದು ಯಡಿಯೂರಪ್ಪ ಮೂಲಕ ಅವರ ಪುತ್ರನೇ ಪರೋಕ್ಷವಾಗಿ ಇಲಾಖೆಗಳನ್ನು ನಿಯಂತ್ರಿಸುತ್ತಿರುವ ಬಗ್ಗೆ ಹಲವು ಸಚಿವರು ಕಿಡಿಯಾಗಿದ್ದಾರೆ. ವಿಜಯೇಂದ್ರ ಅವರು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದೂ ದೂರಲಾಗುತ್ತಿದೆ. ಆದರೆ ವಿಜಯೇಂದ್ರ ಸ್ಥಾನದಲ್ಲಿ ಕುಳಿತು ಆರೆಸ್ಸೆಸ್ ಮುಖಂಡನೊಬ್ಬ ಹಸ್ತಕ್ಷೇಪ ನಡೆಸಲು ಆರಂಭಿಸಿದರೆ ಅದರ ಪರಿಣಾಮ ಏನಾಗಬಹುದು? ಆರೆಸ್ಸೆಸ್ ಕೂಸು ತೇಜಸ್ವಿ ಸೂರ್ಯ ನಾರಾಯಣ ರಾವ್, ಬಿಬಿಎಂಪಿಯ ಕೊರೋನ ವಾರ್ ರೂಂಗೆ ತೆರಳಿ ನಡೆಸಿದ ಅವಾಂತರಗಳನ್ನು ಗಮನಿಸಿದರೆ ಸಾಕು. ಬೆಡ್ ದಂಧೆಯಲ್ಲಿ ಸ್ವತಃ ಭಾಗಿಯಾಗಿ ಅಕ್ರಮಗಳನ್ನು ನಡೆಸಿದ್ದೂ ಅಲ್ಲದೆ, ಆ ಅಕ್ರಮಗಳನ್ನು ಒಂದು ನಿರ್ದಿಷ್ಟ ಸಮುದಾಯದ ಸಿಬ್ಬಂದಿಯ ತಲೆಗೆ ಕಟ್ಟಲು ಪ್ರಯತ್ನಿಸಿದರು. ಒಂದೆಡೆ ಭ್ರಷ್ಟಾಚಾರ ನಡೆಸುತ್ತಾ, ಅದನ್ನು ಮುಚ್ಚಿ ಹಾಕಲು ಜನರನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವ ಕೆಲಸ ಮಾಡುವ ಆರೆಸ್ಸೆಸ್‌ನ ಕುಡಿಗಳಿಗಿಂತ, ಯಡಿಯೂರಪ್ಪ ಕುಡಿಯೇ ವಾಸಿ. ನಾಯಕತ್ವ ಬದಲಾವಣೆಗೆ ಇದು ಯಾವ ರೀತಿಯಲ್ಲೂ ಸೂಕ್ತ ಸಮಯವಲ್ಲ. ಕೊರೋನ ವಿರುದ್ಧದ ಹೋರಾಟದಲ್ಲಿ ಯಡಿಯೂರಪ್ಪ ಅವರ ಜೊತೆಗೆ ಗಟ್ಟಿಯಾಗಿ ನಿಲ್ಲಬೇಕಾದುದು ಸರಕಾರದೊಳಗಿರುವ ಸಚಿವರ ಆದ್ಯ ಕರ್ತವ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News