ಅಶ್ಲೀಲ ಸಿಡಿ ಪ್ರಕರಣ: ರಮೇಶ್‌ ಜಾರಕಿಹೊಳಿಗೆ ವಿಶೇಷ ತನಿಖಾ ದಳದಿಂದ ʼಕ್ಲೀನ್‌ ಚಿಟ್‌ʼ ಸಾಧ್ಯತೆ; ವರದಿ

Update: 2021-05-29 07:23 GMT

ಬೆಂಗಳೂರು: ಬಿಜೆಪಿ ನಾಯಕ ಹಾಗೂ ಮಾಜಿ  ಸಚಿವ ರಮೇಶ್ ಜಾರಕಿಹೊಳಿ ಶಾಮೀಲಾಗಿರುವ ಅಶ್ಲೀಲ ಸೀಡಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡುವ ಎಲ್ಲಾ ಸಾಧ್ಯತೆಯಿದೆಯೆನ್ನಲಾಗಿದೆ. ಸಿಟ್ ಸದ್ಯದಲ್ಲಿಯೇ `ಬಿ' ರಿಪೋರ್ಟ್ ಸಲ್ಲಿಸಲಿದೆ ಎಂದೂ ಮೂಲಗಳು ತಿಳಿಸಿವೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲವೆಂದು ತಿಳಿಸಿ ಈ ಪ್ರಕರಣಕ್ಕೆ ಸಿಟ್ ಅಂತ್ಯ ಹಾಡಲಿದೆ ಎಂದು newindianexpress ವರದಿ ಮಾಡಿದೆ.

ಅಶ್ಲೀಲ ವೀಡಿಯೋ ಮಾಧ್ಯಮಕ್ಕೆ ಬಿಡುಗಡೆಗೊಂಡ ನಂತರ ಮಾರ್ಚ್ 4ರಂದು ಜಾರಕಿಹೊಳಿ ತಮ್ಮ ಜಲಸಂಪನ್ಮೂಲ ಸಚಿವ ಖಾತೆಗೆ ರಾಜೀನಾಮೆ ನೀಡಿದ್ದರು. ಈ ವಿವಾದ ರಾಜಕೀಯ ಬಿರುಗಾಳಿಯೆಬ್ಬಿಸಿದ ಹಿನ್ನೆಲೆಯಲ್ಲಿ  ರಾಜ್ಯ ಸರಕಾರ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿತ್ತು.

ತಮ್ಮ ಇಲಾಖೆ ಕುರಿತ ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವ  ನೆಪದಲ್ಲಿ ಜಾರಕಿಹೊಳಿ ತನ್ನನ್ನು `ಬಳಸಿಕೊಂಡಿದ್ದಾರೆ' ಎಂದು ಆರೋಪಿಸಿ ಸಂತ್ರಸ್ತ ಯುವತಿ ಮಾರ್ಚ್ 26ರಂದು  ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ತನಿಖೆ ಪೂರ್ಣಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಜಾರಕಿಹೊಳಿ ವಿರುದ್ಧ ಐಪಿಸಿಯ ಸೆಕ್ಷನ್ 376ಸಿ, 354ಎ, 504, 506 ಹಾಗೂ ಐಟಿ ಕಾಯಿದೆಯ ಸೆಕ್ಷನ್ 67ಎ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಅಶ್ಲೀಲ ವೀಡಿಯೋ ಪರಿಶೀಲನೆ ಜತೆಗೆ, ಜಾರಕಿಹೊಳಿ ಮತ್ತು ಯುವತಿ ನಡುವಿನ ಫೋನ್ ಕರೆ ವಿವರಗಳು  ಮತ್ತಿತರ ತಾಂತ್ರಿಕ ವಿಚಾರಗಳನ್ನು ಸಿಟ್  ಗಣನೆಗೆ ತೆಗೆದುಕೊಂಡಿತ್ತಲ್ಲದೆ ಹಲವರ ಹೇಳಿಕೆಗಳನ್ನೂ ದಾಖಲಿಸಿಕೊಂಡಿತ್ತು.

ಯುವತಿಯನ್ನು  ತನಿಖಾ ತಂಡ ಹಲವಾರು ಬಾರಿ ವಿಚಾರಣೆಗೊಳಪಡಿಸಿತ್ತು. ಆರಂಭದಲ್ಲಿ ಇದೊಂದು ತಿರುಚಿದ ವೀಡಿಯೋ ಎಂದೇ ಹೇಳಿಕೊಂಡಿದ್ದ ಜಾರಕಿಹೊಳಿ ನಂತರ ತನಿಖೆಗೆ ಹಾಜರಾಗಿ ವೀಡಿಯೋದಲ್ಲಿದ್ದುದು ತಾನೇ ಹಾಗೂ ಅದೊಂದು ಪರಸ್ಪರ ಒಪ್ಪಿಗೆಯೊಂದಿಗೆ ನಡೆಸಿದ ಕ್ರಿಯೆ ಎಂದು ಹೇಳಿದ್ದರು.

"ತನಿಖೆಯಿಂದ ತಿಳಿದು ಬಂದಂತೆ ಯುವತಿ ಮತ್ತಾಕೆಯ ಸಹವರ್ತಿಗಳಿಂದ ಜಾರಕಿಹೊಳಿ ಹನಿಟ್ರ್ಯಾಪ್‍ಗೊಳಗಾಗಿದ್ದರು. ಬಿ ರಿಪೋರ್ಟ್ ಶೀಘ್ರದಲ್ಲಿಯೇ ಸಲ್ಲಿಕೆಯಾಗಲಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾರಕಿಹೊಳಿ ವಿರುದ್ಧದ ಆರೋಪಗಳನ್ನು ಕೈಬಿಡುವ ಜತೆಗೆ, ಈ ಇಡೀ ಪ್ರಕರಣ ತನ್ನ ವಿರುದ್ಧದ ಷಡ್ಯಂತ್ರವೆಂದು ಆರೋಪಿಸಿ ಸದಾಶಿವನಗರ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿದ ದೂರಿನ ತನಿಖೆಯನ್ನು ಸಿಟ್ ಚುರುಕುಗೊಳಿಸಲಿದೆ ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News