ಕೋವಿಡ್‍ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗೆ 'ಮುಖ್ಯಮಂತ್ರಿ ಬಾಲಸೇವಾ ಯೋಜನೆ': ಯಡಿಯೂರಪ್ಪ

Update: 2021-05-29 15:30 GMT

ಬೆಂಗಳೂರು, ಮೇ 29: `ಕೋವಿಡ್‍ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ರಾಜ್ಯ ಸರಕಾರ `ಮುಖ್ಯಮಂತ್ರಿ ಬಾಲಸೇವಾ ಯೋಜನೆ'ಯನ್ನು ಜಾರಿಗೆ ತರಲಿದೆ. ಕೇಂದ್ರ ಸರಕಾರದ ಸಲಹೆ ಮೇರೆಗೆ, ಕೊರೋನ ಸೋಂಕಿನಿಂದ ಅನಾಥರಾಗಿ, ವಿಸ್ತೃತ ಕುಟುಂಬದ ಆಶ್ರಯದಲ್ಲಿರುವ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ, ತಿಂಗಳಿಗೆ 3,500 ರೂ.ಗಳನ್ನು ನೀಡಲಾಗುವುದು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ವಿಸ್ತೃತ ಕುಟುಂಬದ ಆಸರೆಯಿಲ್ಲದ, 10 ವರ್ಷದೊಳಗಿನ ಕೋವಿಡ್‍ನಿಂದಾಗಿ ಅನಾಥರಾಗಿರುವ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೆ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್‍ಟಾಪ್ ನೀಡಲಾಗುವುದು' ಎಂದು ಹೇಳಿದ್ದಾರೆ.

`21 ವರ್ಷ ತುಂಬಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು 1 ಲಕ್ಷ ರೂ.ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರಕಾರದಿಂದ ಮಾರ್ಗದರ್ಶಿ/ಹಿತೈಷಿಗಳನ್ನು ನೇಮಿಸಲಾಗುವುದು. ಯೋಜನೆಯ ಸಮಗ್ರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News